Site icon Vistara News

Ramesh Jarakiholi : ರಮೇಶ್‌ ಜಾರಕಿಹೊಳಿ ಮತ್ತೆ ದೆಹಲಿಗೆ, ನಾಳೆ ಸಂಜೆ ಅಮಿತ್‌ ಶಾ ಜತೆ ಸಿಡಿ ಮಾತುಕತೆಗೆ ಟೈಮ್‌ ಫಿಕ್ಸ್‌?

Ramesh Jarakiholi- amith Shah

#image_title

ಬೆಳಗಾವಿ: ತಮ್ಮ ವಿರುದ್ಧದ ಸಿಡಿ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಷಡ್ಯಂತ್ರ ಇದೆ ಎಂಬುದನ್ನು ಸಾಬೀತುಪಡಿಸಲೇಬೇಕು ಎಂದು ಹಠ ತೊಟ್ಟಂತಿರುವ ಬಿಜೆಪಿ ಶಾಸಕ, ಮಾಜಿ ಸಚಿವ ರಮೇಶ್‌ ಜಾರಕಿಹೊಳಿ (Ramesh Jarakiholi) ಅವರು ಇದೀಗ ಮತ್ತೆ ದೆಹಲಿಗೆ ತೆರಳಿದ್ದಾರೆ. ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಹಠ ತೊಟ್ಟಿರುವ ಅವರು ಮತ್ತೊಮ್ಮೆ ಗೃಹ ಸಚಿವ ಅಮಿತ್‌ ಶಾ ಅವರ ಜತೆ ಮಾತುಕತೆಗೆ ಸಮಯ ಕೇಳಿದ್ದಾರೆ.

ಡಿ.ಕೆ.ಶಿವಕುಮಾರ್‌ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಹಲವಾರು ಆರೋಪಗಳನ್ನು ಮಾಡಿರುವ ರಮೇಶ್‌ ಜಾರಕಿಹೊಳಿ ಅವರು ಅದರ ಕುರಿತಾದ ದಾಖಲೆಗಳೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದರು. ದೂರು ಕೊಟ್ಟರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬಹುದು ಎಂದು ಸಿಎಂ ಹೇಳಿದ್ದರು ಎನ್ನಲಾಗಿದೆ. ಇದರಿಂದ ತೃಪ್ತರಾಗದ ರಮೇಶ್‌ ಜಾರಕಿಹೊಳಿ ತಮಗಿರುವ ಪ್ರಭಾವಗಳನ್ನು ಬಳಸಿಕೊಂಡು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನೇ ಭೇಟಿಯಾಗಿದ್ದರು. ಒಂದು ದಿನ ರಾತ್ರಿ ೧೧ ಗಂಟೆಯ ಹೊತ್ತಿಗೆ, ಮರುದಿನ ಸಂಸತ್‌ ಭವನದಲ್ಲಿ ಎರಡನೇ ಬಾರಿ ಅಮಿತ್‌ ಶಾ ಅವರನ್ನು ರಮೇಶ್‌ ಜಾರಕಿಹೊಳಿ ಭೇಟಿಯಾಗಿದ್ದರು ಎನ್ನಲಾಗಿದೆ.

ತಮ್ಮ ವಿರುದ್ಧದ ಲೈಂಗಿಕ ಹಗರಣದ ಸಿಡಿ ಎನ್ನುವುದು ಡಿ.ಕೆ. ಶಿವಕುಮಾರ್‌ ಹೆಣೆದ ಷಡ್ಯಂತ್ರ ಎನ್ನುವುದನ್ನು ಪ್ರೂವ್‌ ಮಾಡಲು ಸಿಬಿಐ ತನಿಖೆಯಾಗಬೇಕು ಎಂದು ಅವರು ಅಮಿತ್‌ ಶಾ ಅವರಲ್ಲೂ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಇದಾದ ಬಳಿಕ ಅವರು ಮುಂಬಯಿಗೆ ಹೋಗಿ ಅಲ್ಲಿ ತಮ್ಮ ಆತ್ಮೀಯರಾದ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್‌ ಅವರನ್ನೂ ಭೇಟಿಯಾಗಿದ್ದರು.

ಇದೀಗ ಎರಡನೇ ಪಯಣ
ರಮೇಶ್‌ ಜಾರಕಿಹೊಳಿ ಅವರು ಅಮಿತ್‌ ಶಾ ಅವರನ್ನು ಮತ್ತೊಮ್ಮೆ ಭೇಟಿಯಾಗುವ ಉದ್ದೇಶದಿಂದ ಬುಧವಾರ ಮತ್ತೊಮ್ಮೆ ದೆಹಲಿಗೆ ತೆರಳಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಮೂಲಕ ಮಧ್ಯಾಹ್ನ 2 ಗಂಟೆಯ ವಿಮಾನದಲ್ಲಿ ದೆಹಲಿಗೆ ತೆರಳಿದ ಅವರ ಜತೆಗೆ ಆಪ್ತರಾದ ಕಿರಣ್ ಜಾಧವ್ ಹಾಗೂ ಹಿಂಡಲಗಾ ಗ್ರಾಪಂ ಅಧ್ಯಕ್ಷ ನಾಗೇಶ ಮನ್ನೋಲ್ಕರ್ ಕೂಡಾ ಇದ್ದಾರೆ.

ಸಿಡಿ ಷಡ್ಯಂತ್ರ ವಿಚಾರವಾಗಿ ಗುರುವಾರ (ಫೆ.೯) ಸಂಜೆ ಮತ್ತೆ ಅಮಿತ್ ಶಾ ಅವರನ್ನು ಭೇಟಿ ಮಾಡಲು ಉದ್ದೇಶಿಸಿರುವ ರಮೇಶ್ ಜಾರಕಿಹೊಳಿ ಈ ಬಗ್ಗೆ ಸಮಯ ಕೇಳಿದ್ದಾರೆ. ಅಮಿತ್‌ ಶಾ ಅವರು ಸಮಯ ಕೊಡುವ ಭರವಸೆಯನ್ನೂ ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : Ramesh Jarkiholi: ದೆಹಲಿಯಿಂದ ಮುಂಬೈನತ್ತ ಹಾರಿದ ರಮೇಶ್‌ ಜಾರಕಿಹೊಳಿ; ಸಿಐಡಿ ತನಿಖೆಗೆ ಸಿಡಿ ಕೇಸ್‌ ವಹಿಸಲು ಒತ್ತಡ ತಂತ್ರ

Exit mobile version