ನವ ದೆಹಲಿ: ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಹೇಗಾದರೂ ಮಾಡಿ ಸಿಬಿಐ ತನಿಖೆಗೆ ಆದೇಶ ಕೊಡಿಸಬೇಕು ಎನ್ನುವ ಶತಪ್ರಯತ್ನದಲ್ಲಿರುವ ಬೆಳಗಾವಿ ಶಾಸಕ ರಮೇಶ್ ಜಾರಕಿಹೊಳಿ (Ramesh Jarakiholi) ಅವರು ಗುರುವಾರ ದಿಲ್ಲಿಗೆ ಹೋಗಿದ್ದಾರೆ. ಗುರುವಾರ ಮಧ್ಯಾಹ್ನ ೩ ಗಂಟೆಗೆ ಅಲ್ಲಿಗೆ ತಲುಪಿರುವ ಅವರು ಗೃಹ ಸಚಿವ ಅಮಿತ್ ಅವರನ್ನು ಭೇಟಿ ಮಾಡಲು ಶತಪ್ರಯತ್ನ ನಡೆಸುತ್ತಿದ್ದಾರೆ. ಅದರೆ, ಶುಕ್ರವಾರ ಬೆಳಗ್ಗೆ ೧೧ ಗಂಟೆಯವರೆಗೂ ಭೇಟಿ ಸಾಧ್ಯವಾಗಿಲ್ಲ.
ಗುರುವಾರ ಸಂಜೆಯಿಂದ ದೆಹಲಿಯಲ್ಲಿರುವ ಅವರು, ರಾತ್ರಿಯೇ ಅಮಿತ್ ಶಾ ಭೇಟಿಗೆ ಪ್ರಯತ್ನ ನಡೆಸಿದ್ದರು. ಆದರೆ, ಅದು ಸಾಧ್ಯವಾಗಿರಲಿಲ್ಲ. ಶುಕ್ರವಾರ ಬೆಳಗ್ಗೆಯೂ ಅಮಿತ್ ಶಾ ನಿವಾಸಕ್ಕೆ ಭೇಟಿ ನೀಡಿ ಮಾತುಕತೆಗೆ ಪ್ರಯತ್ನ ನಡೆಸಿದ್ದಾರೆ. ಆದರೆ, ಅಮಿತ್ ಶಾ ಅವರು ಸಂಸತ್ ಅಧಿವೇಶನಕ್ಕೆ ತೆರಳಿದ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ನಿರಾಶರಾದರು.
ಈ ನಡುವೆ, ಬಿಜೆಪಿ ರಾಜ್ಯ ಉಸ್ತುವಾರಿಯಾಗಿರುವ ಅರುಣ್ ಸಿಂಗ್ ಅವರನ್ನೂ ಭೇಟಿಯಾಗಲು ರಮೇಶ್ ಜಾರಕಿಹೊಳಿ ಪ್ರಯತ್ನಿಸುತ್ತಿದ್ದಾರೆ. ಆದರೆ, ಅವರು ಕೂಡಾ ಭೇಟಿಗೆ ಸಿಕ್ಕಿಲ್ಲ.
ಹೈಕಮಾಂಡ್ ಮಟ್ಟದಲ್ಲೇ ಪ್ರಯತ್ನ
ಡಿ.ಕೆ. ಶಿವಕುಮಾರ್ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ಹಲವು ಹಗರಣಗಳ ಆರೋಪ ಮಾಡಿದ್ದ ರಮೇಶ್ ಜಾರಕಿಹೊಳಿ ಅವರು ತಮ್ಮ ವಿರುದ್ಧದ ಸಿ.ಡಿ. ಪ್ರಕರಣವೂ ಕೂಡಾ ಒಂದು ಷಡ್ಯಂತ್ರ ಎಂದಿದ್ದರು. ಈ ಎಲ್ಲಾ ವಿಷಯಗಳ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎನ್ನುವುದು ಅವರ ಬೇಡಿಕೆ.
ಈ ಬೇಡಿಕೆಯನ್ನು ಮುಂದಿಟ್ಟುಕೊಂಡು ರಮೇಶ್ ಜಾರಕಿಹೊಳಿ ಎರಡು ದಿನ ಸಿಎಂ ಬಸವರಾಜ ಬೊಮ್ಮಾಯಿ ಅವರ ಜತೆ ಓಡಾಡಿದ್ದರೂ ಸಿಎಂ ಅವರ ಮಾತಿಗೆ ಮನ್ನಣೆ ನೀಡಲಿಲ್ಲ. ಮೊದಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಬಳಿಕ ಅದರ ಆಧಾರದಲ್ಲಿ ಯಾವ ತನಿಖೆ ಎಂದು ತೀರ್ಮಾನಿಸೋಣ ಎಂದು ಹೇಳಿ ಕಳುಹಿಸಿದ್ದರು.
ಇದರಿಂದ ನಿರಾಶರಾಗಿರುವ ಜಾರಕಿಹೊಳಿ ಅವರು ತಮ್ಮ ಆತ್ಮೀಯರಾಗಿರುವ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಹಾಲಿ ಡಿಸಿಎಂ ದೇವೇಂದ್ರ ಘಡ್ನವಿಸ್ ಅವರ ಮೂಲಕ ಹೈಕಮಾಂಡನ್ನೇ ಸಂಪರ್ಕಿಸಲು ಮುಂದಾಗಿದ್ದರು. ಆದರೆ ಅಲ್ಲೂ ಅವರಿಗೆ ಸೂಕ್ತವಾದ ಸ್ಪಂದನ ಸಿಗುತ್ತಿಲ್ಲ.
ಮುಂದಿನ ಮಂಗಳವಾರದವರೆಗೂ ದಿಲ್ಲಿಯಲ್ಲೇ ಇದ್ದು ಹೈಕಮಾಂಡ್‌ನ್ನು ಸಂಪರ್ಕಿಸಿ ತನಿಖೆಯ ಅಗತ್ಯತೆಯನ್ನು ಮನವರಿಕೆ ಮಾಡಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ : Ramesh Jarkiholi : ಡಿ.ಕೆ. ಶಿವಕುಮಾರ್ ಪ್ರಕರಣ ಸಿಬಿಐಗೆ ಕೊಡಲೇಬೇಕೆಂದು ಪಟ್ಟು: ದೆಹಲಿಯಲ್ಲಿ ಬೀಡುಬಿಟ್ಟ ʼಸಾಹುಕಾರ್ʼ