ಬೆಳಗಾವಿ: ಆ ಹೆಣ್ಣುಮಗಳದ್ದು ರೂಪ ಅಷ್ಟೇ, ಇರುವ ಎಲ್ಲ ಗುಣಗಳು ಬೇರೆಯವೇ ಇದ್ದಾವೆ. ನಾವು ಹೆಣ್ಣುಮಕ್ಕಳು, ನಿಮ್ಮ ಮನೆಮಗಳು, ನಿಮ್ಮ ಮನೆಯ ಸೊಸೆ ಎಂದು ಏನೇನೋ ಹೇಳಿಕೊಂಡು ಬರುತ್ತಾರೆ. ಆದರೆ ಅವರನ್ನು ನಂಬಬೇಡಿ. ನಿಮ್ಮ ಆಶೀರ್ವಾದದಿಂದ ಗೆದ್ದು ಶಾಸಕರಾದರು. ಚುನಾಯಿತರಾದ ಒಂದೇ ಗಂಟೆಯಲ್ಲಿ ನನ್ನ ದುಡ್ಡಿನಿಂದ ಬಂದೆ, ಬೆಂಗಳೂರಿನ ಮಹಾನ್ ನಾಯಕನಿಂದ ಬಂದೆ ಎನ್ನಲು ಶುರು ಮಾಡಿದರು. ನಮ್ಮನ್ನು-ನಿಮ್ಮನ್ನು ಮರೆತೇಬಿಟ್ಟರು ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಆಕ್ರೋಶ ವ್ಯಕ್ತಪಡಿಸಿದರು. ಈ ಮೂಲಕ ಮತ್ತೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ವಿರುದ್ಧ ಗುಡುಗಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಂತಿ ಬಸ್ತವಾಡ ಗ್ರಾಮದಲ್ಲಿ ಎಸ್‌ಸಿ, ಎಸ್‌ಟಿ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ದುಡ್ಡಿದೆ, ಗೂಂಡಾಗಿರಿ ಮಾಡುತ್ತೇವೆ ಎಂದವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಮುಂದೆ ಬಂದಿಲ್ಲ. ರೊಕ್ಕಕ್ಕಿಂತ ಪ್ರೀತಿ ವಿಶ್ವಾಸ ಮುಖ್ಯ. ಕಳೆದ ಐದು ವರ್ಷದ ಹಿಂದೆ ಕಾಂಗ್ರೆಸ್ ಪಕ್ಷದ ಪರವಾಗಿ ಈ ಕ್ಷೇತ್ರಕ್ಕೆ ಬಂದಿದ್ದೆ. ಬಹಳಷ್ಟು ವಿಚಾರ ಮುಂದಿಟ್ಟುಕೊಂಡು ಪ್ರಚಾರ ಮಾಡಿದ್ದೆ. ನೀವು ಎಂದೂ ಗೆಲ್ಲದ ಕಾಂಗ್ರೆಸ್ ಅನ್ನು ಇಲ್ಲಿ ಗೆಲ್ಲಿಸಿದ್ದೀರಿ. ಆದರೆ, ನಿಮ್ಮ ಆಶೀರ್ವಾದದಿಂದ ಗೆದ್ದ ಶಾಸಕರು, ಚುನಾಯಿತರಾದ ಒಂದೇ ಗಂಟೆಯಲ್ಲಿ ನನ್ನ ದುಡ್ಡಿನಿಂದ ಬಂದೆ, ಬೆಂಗಳೂರಿನ ಮಹಾನ್ ನಾಯಕನಿಂದ ಬಂದೆ ಎನ್ನಲು ಶುರು ಮಾಡಿದರು. ನಮ್ಮನ್ನು ನಿಮ್ಮನ್ನು ಮರೆತುಬಿಟ್ಟರು. ಹಣಕೊಟ್ಟು ಖರೀದಿ ಮಾಡುತ್ತೇವೆ ಎನ್ನುವ ಸೊಕ್ಕು ಶಾಸಕರಲ್ಲಿದೆ, ಅವರ ಆಸೆಗೆ ಬಲಿ ಬೀಳಬೇಡಿ ಎಂದು ಹೇಳಿದರು.
ಕಳೆದ ಮೂರು ತಿಂಗಳಿಂದ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸಂಘಟನೆ ಮಾಡುತ್ತಿದ್ದೇನೆ. ಸ್ಥಳೀಯ ಶಾಸಕಿ ಹಾಗೂ ಅವರ ಹಿಂಬಾಲಕರು ಲಕ್ಷ ಲೀಡ್‌ನಲ್ಲಿ ಗೆಲ್ಲುತ್ತೇನೆಂಬ ದರ್ಪವನ್ನು ನಾವೆಲ್ಲರೂ ಕಂಡಿದ್ದೇವೆ. ಆದರೆ, ಎಲೆಕ್ಷನ್ ಪೂರ್ವದಲ್ಲಿ ಅವರ ಗರ್ವ ಇಳಿದಿದೆ. ಲಕ್ಷ ಲೀಡ್ ಬದಲು ಈಗ 10 ಸಾವಿರ ಲೀಡ್‌ಗೆ ಬಂದಿಳಿದಿದ್ದಾರೆ. ಇನ್ನೊಂದು ತಿಂಗಳಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆ ಆಗಲಿದೆ ಎಂದು ಹೇಳಿದರು.
ಇದನ್ನೂ ಓದಿ: Bangalore-Mysore Highway: ಹೆದ್ದಾರಿ ತಡೆದು ಜೆಡಿಎಸ್ ಆಕ್ರೋಶ; ಲೋಕಾರ್ಪಣೆಯಾ, ಟೋಲಾರ್ಪಣೆಯಾ?: ನಿಖಿಲ್ ಕುಮಾರಸ್ವಾಮಿ
ಗ್ರಾಮೀಣ ಶಾಸಕರಿಂದ ನಾನೇ ಕಾಂಗ್ರೆಸ್ ಪಕ್ಷ ಬಿಡುವ ಪ್ರಸಂಗ ಬಂತು. ಶಾಸಕರ ಬಾಸ್, ಆ ಮಹಾನ್ ನಾಯಕನಿಂದ ಕಾಂಗ್ರೆಸ್ ಬಿಡಬೇಕಾಯಿತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೆಸರನ್ನು ಪ್ರಸ್ತಾಪಿಸದೇ ವಾಗ್ದಾಳಿ ನಡೆಸಿದರು.
ಬಿಜೆಪಿಗೆ ಬಂದಿದ್ದು ಬಹಳ ಒಳ್ಳೆಯದಾಯಿತು. ಪಕ್ಷದ ವರಿಷ್ಠರು ನನ್ನ ದೊಡ್ಡ ನಾಯಕನಾಗಿ ಬೆಳೆಸಲು ಸಹಕಾರ ನೀಡಿದ್ದಾರೆ. ಗ್ರಾಮೀಣ ಶಾಸಕರು ರೋಡ್, ಗಟಾರ ಬಿಟ್ಟು ಬೇರೆ ಯಾವುದೇ ಅಭಿವೃದ್ಧಿ ಮಾಡಿಲ್ಲ. ಐದು ವರ್ಷದಲ್ಲಿ ಒಂದು ಆಸ್ಪತ್ರೆ ಕಟ್ಟಿಲ್ಲ, ಒಂದು ಶಾಲೆ ಮಾಡಿಲ್ಲ. ಸರ್ಕಾರದ ಹಣದಿಂದ ಮಾಡಿದ್ದನ್ನು ತನ್ನ ಹಣದಿಂದ ಮಾಡಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದರು.
ರಾಜಹಂಸಗಡ ಕೋಟೆಯಲ್ಲಿ ಶಿವಾಜಿ ಪ್ರತಿಮೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಿದ್ದರು. ಆದರೂ ಎರಡನೇ ಬಾರಿ ಉದ್ಘಾಟನೆ ಮಾಡುವ ದುಸ್ಥಿತಿಯನ್ನು ಈ ಗ್ರಾಮೀಣ ಶಾಸಕಿ ತಂದರು. ಶಾಸಕರಿಗೆ ಎಷ್ಟು ಸೊಕ್ಕಿದೆ? ಎಷ್ಟು ಕೆಟ್ಟ ಗುಣ ಇದೆ ಎಂಬುದು ಇದರಿಂದ ಸಾಬೀತಾಗುತ್ತದೆ ಎಂದು ಕಿಡಿಕಾರಿದರು.
ಇದನ್ನೂ ಓದಿ: CT Ravi: ಸಿ.ಟಿ. ರವಿ ವಿರುದ್ಧ ಸಿಡಿದ ವೀರಶೈವ-ಲಿಂಗಾಯತ ಸಮುದಾಯ; ಕ್ಷಮೆ ಕೇಳದಿದ್ದರೆ ವಾರದಲ್ಲಿ ಮುತ್ತಿಗೆ ಎಚ್ಚರಿಕೆ
ಪಕ್ಷದ ಹಿರಿಯ ನಾಯಕರ ಜತೆ ಚರ್ಚಿಸುತ್ತೇವೆ. ನಾಗೇಶ್ ಮನ್ನೋಳಕರ್ ಕೇವಲ ಒಬ್ಬ ಆಕಾಂಕ್ಷಿ ಅಷ್ಟೇ. ಇನ್ನೂ ಬಹಳ ಜನ ಆಕಾಂಕ್ಷಿಗಳು ಇದ್ದಾರೆ. ವರಿಷ್ಠರು ಯಾರಿಗೆ ಟಿಕೆಟ್ ಕೊಡುತ್ತಾರೋ ಅವರ ಪರ, ಬಿಜೆಪಿ ಪರ ಕೆಲಸ ಮಾಡೋಣ. ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಲಿಷ್ಠ ಸರ್ಕಾರ ಇದೆ. ರಾಜ್ಯದಲ್ಲಿ ಈಗ ಬಸವರಾಜ ಬೊಮ್ಮಾಯಿ ಸರ್ಕಾರ ಇದೆ. ಎರಡು-ಮೂರು ತಿಂಗಳ ಬಳಿಕ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಡಬಲ್ ಎಂಜಿನ್ ಸರ್ಕಾರದಿಂದ ನಮಗೆಲ್ಲ ಒಳ್ಳೆಯದಾಗುತ್ತದೆ. ಒಂದು ವೇಳೆ ಇದು ವಿರುದ್ಧವಾದರೆ ನಮ್ಮ ಅಭಿವೃದ್ಧಿ ಕುಂಠಿತ ಆಗುತ್ತದೆ ಎಂದು ಹೇಳಿದರು.