Site icon Vistara News

Karnataka Election 2023: ಬೆಳಗಾವಿಯಲ್ಲಿ ರಮೇಶ್‌ ಜಾರಕಿಹೊಳಿ, ಲಕ್ಷ್ಮಣ್‌ ಸವದಿ, ಲಕ್ಷ್ಮಿ ಹೆಬ್ಬಾಳ್ಕರ್‌ ನಾಮಪತ್ರ ಸಲ್ಲಿಕೆ

#image_title

ಬೆಳಗಾವಿ: ಜಿಲ್ಲೆಯಲ್ಲಿ ಘಟಾನುಘಟಿ ನಾಯಕರಾದ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ, ಮಾಜಿ ಡಿಸಿಎಂ ಲಕ್ಷ್ಮಣ್‌ ಸವದಿ, ಲಕ್ಷ್ಮಿ ಹೆಬ್ಬಾಳ್ಕರ್‌ ಸೇರಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ಗೋಕಾಕ್‌ನಲ್ಲಿ ಬಿಜೆಪಿಯ ರಮೇಶ್‌ ಜಾರಕಿಹೊಳಿ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ಉಮೇದುವಾರಿಕೆ (Karnataka Election 2023) ಸಲ್ಲಿಕೆಗೂ ಮುನ್ನಾ ಸಾವಿರಾರು ಬೆಂಬಲಿಗರ ಜತೆ ಬೃಹತ್‌ ಮೆರವಣಿಗೆಯಲ್ಲಿ ತೆರಳಿ ಶಕ್ತಿ ಪ್ರದರ್ಶನ ಮಾಡಿದ್ದಾರೆ.

ಎಲೆಕ್ಷನ್‌ ರಿಸಲ್ಟ್‌ ಬರೋವರೆಗೆ ಯಾವುದೇ ಸುದ್ದಿಗೋಷ್ಠಿ ನಡೆಸಲ್ಲ: ರಮೇಶ್‌ ಜಾರಕಿಹೊಳಿ

ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರು ಗೋಕಾಕ್‌ ತಹಸೀಲ್ದಾರ್‌ ಕಚೇರಿಯಲ್ಲಿ ಮಂಗಳವಾರ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಸಾವಿರಾರು ಬೆಂಬಲಿಗರು, ಕಾರ್ಯಕರ್ತರೊಂದಿಗೆ ಜಾರಕಿಹೊಳಿ ಬೃಹತ್‌ ಮೆರವಣಿಗೆ ನಡೆಸಿ ಶಕ್ತಿ‌ ಪ್ರದರ್ಶನ ಮಾಡಿದರು. ಅವರಿಗೆ ಸಹೋದರ, ವಿಧಾನ್ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ, ಪುತ್ರ ಅಮರನಾಥ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ ಸಾಥ್ ನೀಡಿದರು.

ಗೋಕಾಕ್‌ನಲ್ಲಿ ನಾಮಪತ್ರ ಸಲ್ಲಿಕೆ ನಂತರ ಮಾತನಾಡಿದ ರಮೇಶ್ ಜಾರಕಿಹೊಳಿ‌, ರಾಜ್ಯ ರಾಜಕೀಯದಲ್ಲಿ ವಿಚಿತ್ರ ವಾತಾವರಣ ನಿರ್ಮಾಣವಾಗುತ್ತಿದೆ. ಹೀಗಾಗಿ ಮೇ 13ರಂದು ವಿಧಾನಸಭಾ ಚುನಾವಣೆ ಫಲಿತಾಂಶ ಬಿಡುಗಡೆಯಾಗುವವರೆಗೆ ನಾನು ಯಾವುದೇ ಸುದ್ದಿಗೋಷ್ಠಿ ನಡೆಸಲ್ಲ ಎಂದು ತಿಳಿಸಿದರು.

ಏ.13ರಂದು ಮುಹೂರ್ತದ ಪ್ರಕಾರ ಸಾಂಕೇತಿಕವಾಗಿ ನಾಮಿನೇಷನ್ ಮಾಡಿದ್ದೆ. ಇವತ್ತು ಕ್ಷೇತ್ರದ ಜನತೆಯ ಜತೆಗೆ ಬಂದು ಅಧಿಕೃತವಾಗಿ ನಾಮಪತ್ರ ಸಲ್ಲಿಸಿದ್ದೇನೆ. ಕಳೆದ ಐದು ಬಾರಿ ನಾನು ಕಾಂಗ್ರೆಸ್‌ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದೆ. 2019 ಉಪ ಚುನಾವಣೆ ಹಾಗೂ ಬಿಜೆಪಿಯಿಂದ ನಾಮಪತ್ರ ಸಲ್ಲಿಸುತ್ತಿರುವೆ. ಎಂದು ಹೇಳಿದರು.

ಇವತ್ತಿನ ವಿಚಿತ್ರ ಏನು ಎಂದರೆ ಯುವಕರ ದಂಡು ನಮ್ಮೊಂದಿಗೆ ಬಂತು. ನನ್ನ ವಿರೋಧಿಗಳು ನನಗಿಂತ ಪ್ರಬಲರು ಎಂತಲೇ ನಾನು ಕೆಲಸ ಮಾಡುತ್ತೇನೆ. ಜನ ಜಾಸ್ತಿ ಕೂಡಿದರು ಅಂತ ಉಬ್ಬುವುದಿಲ್ಲ. ಕಡಿಮೆ ಕೂಡಿದರು ಅಂತ ಕುಗ್ಗುವುದಿಲ್ಲ. ಚುನಾವಣೆಯನ್ನು ಸೀರಿಯಸ್ ಆಗಿ ತೆಗೆದುಕೊಂಡೇ ಕೆಲಸ ಮಾಡುತ್ತಿದ್ದೇನೆ. ಮುನ್ನೆಚ್ಚರಿಕೆಯಾಗಿ ನನ್ನ ಮಗ ಸಂತೋಷ್ ಕೂಡ ನಾಮಿನೇಷನ್ ಹಾಕಿದ್ದಾನೆ. ಆತ ಹಿಂಪಡೆಯುತ್ತಾನೆ ಎಂದು ತಿಳಿಸಿದರು.

ಇದನ್ನೂ ಓದಿ | Karnataka Election: ಗಂಗಾವತಿಯಲ್ಲಿ ನಾಮಪತ್ರ ಸಲ್ಲಿಸಿದ ಗಾಲಿ ಜನಾರ್ದನ ರೆಡ್ಡಿ; ರೋಡ್‌ ಶೋ ಮೂಲಕ ಶಕ್ತಿ ಪ್ರದರ್ಶನ

ಅಥಣಿಯಲ್ಲಿ ನನ್ನ ಗೆಲುವು ನಿಶ್ಚಿತ, ಆರ್‌ಎಸ್‌ಎಸ್‌ ಬೆಂಬಲವೂ ಇದೆ: ಲಕ್ಷ್ಮಣ್ ಸವದಿ

ಚಿಕ್ಕೋಡಿ: ಅಥಣಿ ಮಿನಿ ವಿಧಾನಸೌಧದಲ್ಲಿ ಲಕ್ಷ್ಮಣ್ ಸವದಿ ಅವರು ಉಮೇದುವಾರಿಕೆ ಸಲ್ಲಿಸಿದರು. ಗಾಂಧಿ ಟೋಪಿ ಧರಿಸಿಕೊಂಡು ಐವರ ಜತೆ ತೆರಳಿ ಸವದಿ ನಾಮಪತ್ರ ಸಲ್ಲಿಕೆ ಮಾಡಿದರು. 5 ಚುನಾವಣೆ ಎದುರಿಸಿರುವ ಸವದಿ 6ನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಆರು ಚುನಾವಣೆ ಪೈಕಿ ಮೂರು ಬಾರಿ ಸವದಿ ಗೆದ್ದಿದ್ದಾರೆ.

ನಾಮಪತ್ರ ಸಲ್ಲಿಸಿದ ಬಳಿಕ ಲಕ್ಷ್ಮಣ ಸವದಿ ಮಾತನಾಡಿ, ಇವತ್ತು ನಾಮಪತ್ರ ಸಲ್ಲಿಸಲಾಗಿದೆ. ಚುನಾವಣೆ ಗೆಲ್ಲಲು ಸಾವಿರಾರು ಕಾರ್ಯಕರ್ತರು, ಬೆಂಬಲಿಗರು ಬೆಂಬಲ ನೀಡಿದ್ದಾರೆ. ಅಥಣಿ ಬಿಜೆಪಿ ಕೋಟೆ ಛಿದ್ರ ಆಗುತ್ತೋ ಇಲ್ಲವೋ ಗೊತ್ತಿಲ್ಲ, ನನ್ನ ಗೆಲುವು ಮಾತ್ರ ನಿಶ್ಚಿತ. ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡಲಿದ್ದೇನೆ. ಅಥಣಿಯಲ್ಲಿ 11 ಜನ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿದ್ದರು. ಎಲ್ಲರೂ ಯಾವುದೇ ಭಿನ್ನಮತ ಇಲ್ಲದೆ ನನಗೆ ಬೆಂಬಲವಾಗಿ ನಿಂತಿದ್ದಾರೆ. ರಮೇಶ್ ಜಾರಕಿಹೊಳಿ ಸಭೆ ಸಭೆ ಮೇಲೆ ನಡೆಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ತಮ್ಮ ಅಭ್ಯರ್ಥಿ ಗೆಲುವಿಗಾಗಿ ಸಭೆ ನಡೆಸಿ ಪ್ರಯತ್ನ ಪಡುತ್ತಾರೆ ಎಂದರು.

ಆರ್‌ಎಸ್‌ಎಸ್‌ ಹಿಡಿತದಲ್ಲಿ ನೀವು ಗೆಲುವು ಸಾಧಿಸುತ್ತಿರಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಆರ್‌ಎಸ್‌ಎಸ್‌ನಲ್ಲಿ ನನ್ನ ಹಿತೈಷಿಗಳಿದ್ದಾರೆ, ಅವರು ಆಂತರಿಕವಾಗಿ ನನ್ನ ಜತೆಗೆ ಇದ್ದಾರೆ. ಗುಪ್ತ ಮತದಾನ ಇರುವುದರಿಂದ ಅವರು ಸಹ ನನಗೇ ಮತ ಹಾಕುತ್ತಾರೆ. ನೂರಕ್ಕೆ ನೂರರಷ್ಟು ಆರ್‌ಎಸ್‌ಎಸ್‌ನವರು ನನಗೆ ಮತ ಹಾಕುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕುಂದಾನಗರಿಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಶಕ್ತಿ ಪ್ರದರ್ಶನ

ಬೆಳಗಾವಿ: ಬೆಳಗಾವಿ ‌ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ‌ಅಭ್ಯರ್ಥಿಯಾಗಿ ಲಕ್ಷ್ಮಿ ಹೆಬ್ಬಾಳ್ಕರ್ ನಾಮಪತ್ರ ಸಲ್ಲಿಸಿದರು.‌ ಇದಕ್ಕೂ ಮುನ್ನ ಅವರು ನಗರದ ಸಿಪಿಇಡಿ ಮೈದಾನದಿಂದ ತಹಸೀಲ್ದಾರ್ ಕಚೇರಿವರೆಗೆ ತೆರೆದ ವಾಹನದಲ್ಲಿ ಬೃಹತ್ ರೋಡ್ ಶೋ ನಡೆಸಿ ಶಕ್ತಿ ಪ್ರದರ್ಶನ ಮಾಡಿದರು.

ನಾಮಪತ್ರ ಸಲ್ಲಿಕೆ ಬಳಿಕ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ಮೆರವಣಿಗೆಯಲ್ಲಿ ಇಷ್ಟೊಂದು ಜನ ಸೇರಿದ್ದು ವಿಜಯದ ಸಂಕೇತವಾಗಿದೆ. ಯಾವ ರಾಜಕೀಯ ಹಿನ್ನೆಲೆ ಇಲ್ಲದ ಒಬ್ಬ ಹೆಣ್ಣು ಮಗಳನ್ನು ಕಳೆದ ಬಾರಿ ಅಭೂತಪೂರ್ವ ಅಂತರದಲ್ಲಿ ಕ್ಷೇತ್ರದ ಜನರು ಗೆಲ್ಲಿಸಿದ್ದಾರೆ. ಐದು ವರ್ಷ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇನೆ ಎಂದರು.

ನನಗೆ ರಾಜಕೀಯವಾಗಿ ವಿರೋಧಿಗಳು ಇರಬಹುದು. ಆದರೆ ವೈಯಕ್ತಿಕವಾಗಿ ಯಾವ ವಿರೋಧಿಯೂ ಇಲ್ಲ. ಬೇರೆಯವರ ಆರೋಪಗಳಿಗೆ ನಾನು ಉತ್ತರ ಕೊಡೋದಕ್ಕೂ ಹೋಗುವುದಿಲ್ಲ. ನಮ್ಮ ಮತದಾರ, ಗುರುಹಿರಿಯರ ಆಶೀರ್ವಾದದಿಂದ ಚುನಾವಣೆ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ | Karnataka Election 2023: ಮಂಡ್ಯದಲ್ಲಿ ಎಚ್‌ಡಿಕೆ, ಸುಮಲತಾ ಸ್ಪರ್ಧೆ ಫಿಕ್ಸ್?; ‌ಬ್ಯಾಂಕ್‌ ಖಾತೆ ತೆರೆದ ಮಾಜಿ ಸಿಎಂ, ಸಂಸದೆ!

ಗೋಕಾಕ್‌ ಕಾಂಗ್ರೆಸ್‌ ಅಭ್ಯರ್ಥಿ ಮಹಾಂತೇಶ್ ಕಡಾಡಿ ನಾಮಪತ್ರ

ಬೆಳಗಾವಿ: ಗೋಕಾಕ್‌ನಲ್ಲಿ ಕಾಂಗ್ರೆಸ್‌ ಅಧಿಕೃತ ಅಭ್ಯರ್ಥಿ ಮಹಾಂತೇಶ್ ಕಡಾಡಿ ಅವರು ಚುನಾವಣಾಧಿಕಾರಿ ಗೀತಾ ಕೌಲಗಿಯಗರಿಗೆ ನಾಮಪತ್ರ ಸಲ್ಲಿಸಿದರು. ಮಹಾಂತೇಶ ಕಡಾಡಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸಾಥ್ ನೀಡಿದರು.

ಖಾನಾಪುರದಲ್ಲಿ ಡಾ. ಅಂಜಲಿ ನಿಂಬಾಳ್ಕರ್ ನಾಮಪತ್ರ ಸಲ್ಲಿಕೆ

ಬೆಳಗಾವಿ: ಖಾನಾಪುರ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ನಾಮಪತ್ರ ಸಲ್ಲಿಸಿದರು. ಬೃಹತ್ ರೋಡ್ ಶೋ ಮೂಲಕ ಬೆಂಬಲಿಗರೊಂದಿಗೆ ತೆರಳಿ ಚುನಾವಣಾಧಿಕಾರಿ ಅನುರಾಧ ವಸ್ತ್ರದ ಅವರಿಗೆ ನಾಮಪತ್ರ ಸಲ್ಲಿಸಿದರು.

ಸವದತ್ತಿಯಲ್ಲಿ ಸೌರವ್ ಚೋಪ್ರಾ ನಾಮಿನೇಷನ್

ಬೆಳಗಾವಿ: ಸವದತ್ತಿಯಲ್ಲಿ ಜೆಡಿಎಸ್ ಅಭ್ಯರ್ಥಿ ಸೌರವ್ ಚೋಪ್ರಾ ನಾಮಪತ್ರ ಸಲ್ಲಿಕೆ ಮಾಡಿದರು. ಸವದತ್ತಿ ತಹಸೀಲ್ದಾರ್‌ ಕಚೇರಿಯಲ್ಲಿ ಚುನಾವಣಾಧಿಕಾರಿ ಡಾ.ರಾಜೀವ ಕೂಲೇರ ಅವರಿಗೆ ನಾಮಪತ್ರ ಸಲ್ಲಿಕೆ ಮಾಡಿದರು. ಸೌರವ್ ಚೋಪ್ರಾಗೆ ಪಂಚನಗೌಡ ದ್ಯಾಮನಗೌಡರ ಮತ್ತಿತರ ಮುಖಂಡರು ಸಾಥ್ ನೀಡಿದರು.

ಇದನ್ನೂ ಓದಿ | Karnataka Election 2023: ನಾನು, ಡಿಕೆಶಿ ಸಿಎಂ ಆಕಾಂಕ್ಷಿಗಳು; ಪೈಪೋಟಿಯ ಗುಟ್ಟು ಬಿಚ್ಚಿಟ್ಟ ಸಿದ್ದರಾಮಯ್ಯ

ಚಿಕ್ಕೋಡಿಯಲ್ಲಿ ರಮೇಶ್‌ ಕತ್ತಿ ನಾಮಪತ್ರ

ಚಿಕ್ಕೋಡಿ: ಚಿಕ್ಕೋಡಿ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಕತ್ತಿ ನಾಮಪತ್ರ ಸಲ್ಲಿಕೆ ಮಾಡಿದರು. ತಹಸೀಲ್ದಾರ್‌ ಕಚೇರಿಯಲ್ಲಿ ಚುನಾವಣಾಧಿಕಾರಿ ಮಹದೇವ ಗಿತ್ತೆಗೆ ಅವರು ನಾಮಪತ್ರ ಸಲ್ಲಿಸಿದರು. ಅವರಿಗೆ ಕೆಎಲ್‌ಇ ಕಾರ್ಯಾಧ್ಯಕ್ಷ ಪ್ರಭಾಕರ್ ಕೋರೆ, ಮಗ ಪೃಥ್ವಿ ಕತ್ತಿ ಸಾಥ್ ನೀಡಿದರು.

Exit mobile version