ಬೆಳಗಾವಿ: ತಮ್ಮ ವಿರುದ್ಧದ ಸಿಡಿ ಬಿಡುಗಡೆ (CD Case) ವಿಚಾರವಾಗಿ ಚುನಾವಣೆ ಹೊತ್ತಿನಲ್ಲಿ ಸಿಡಿದೆದ್ದಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಈಗಾಗಲೇ ಆಗ್ರಹಿಸಿದ್ದಾರೆ. ಈಗ ಈ ನಿಟ್ಟಿನಲ್ಲಿ ದೆಹಲಿಯತ್ತ ಹೊರಟಿದ್ದು, ಬಿಜೆಪಿ ಹೈಕಮಾಂಡ್ ಅನ್ನು ಭೇಟಿ ಮಾಡಲು ಮುಂದಾಗಿದ್ದಾರೆ.
ಸಿಡಿ ಷಡ್ಯಂತ್ರದ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನೇರ ಕೈವಾಡ ಇದೆ ಎಂದು ಈಗಾಗಲೇ ಸುದ್ದಿಗೋಷ್ಠಿ ನಡೆಸಿ ರಮೇಶ್ ಜಾರಕಿಹೊಳಿ ಆರೋಪ ಮಾಡಿದ್ದರು. ಆದರೆ, ಪ್ರತಿಕ್ರಿಯೆ ನೀಡಿದ್ದ ಡಿ.ಕೆ. ಶಿವಕುಮಾರ್, ರಮೇಶ್ ಜಾರಕಿಹೊಳಿಗೆ ತಲೆ ಕೆಟ್ಟಿದೆ, ಚಿಕಿತ್ಸೆ ಕೊಡಿಸಬೇಕು ಎಂದು ಹೇಳಿದ್ದರು. ಈಗ ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ರಮೇಶ್ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ.
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಮಧ್ಯಾಹ್ನ 12 ಗಂಟೆಗೆ ಹೊರಟಿದ್ದಾಗಿ ಸ್ವತಃ ಅವರೇ ವಿಸ್ತಾರ ನ್ಯೂಸ್‌ಗೆ ಖಚಿತಪಡಿಸಿದ್ದಾರೆ. ಸಿಡಿ ಷಡ್ಯಂತ್ರದ ಭಾಗವಾಗಿ ತಾವು ಹಲವಾರು ಸಾಕ್ಷ್ಯ ಸಂಗ್ರಹಿಸಿದ್ದಾಗಿ ರಮೇಶ್ ಜಾರಕಿಹೊಳಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Janardhana Reddy : ಸ್ಪರ್ಧೆಯಿಂದ ಹಿಂದೆ ಸರಿಯಲ್ಲ; ಜನಾರ್ದನ ರೆಡ್ಡಿ, ಪತ್ನಿಗೆ ಸೆಡ್ಡು ಹೊಡೆದ ಸೋಮಶೇಖರ ರೆಡ್ಡಿ
ಈಗಾಗಲೇ ಎರಡು ದಿನಗಳ ಕಾಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆಗಿದ್ದು, ಸಾಕ್ಷಿಗಳ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಷಡ್ಯಂತ್ರ ರೂಪಿಸಿರುವ ಡಿಕೆಶಿ, ಸಿಡಿಯಲ್ಲಿನ ಮಹಿಳೆಯನ್ನು ಸಿಬಿಐ ತನಿಖೆಗೆ ಮಾಡಬೇಕು. ಈ ನಿಟ್ಟಿನಲ್ಲಿ ಶಿಫಾರಸು ಮಾಡುವಂತೆ ಪಟ್ಟು ಹಿಡಿದಿದ್ದಾರೆ. ಕಾನೂನು ಸಲಹೆ ಪಡೆದು ಮುಂದಿನ ಕ್ರಮ ಜರುಗಿಸುವುದಾಗಿ ಸಿಎಂ ಬೊಮ್ಮಾಯಿ ಭರವಸೆ ನೀಡಿದ್ದಾರೆನ್ನಲಾಗಿದೆ. ಆದರೆ, ಸಿಎಂ ಭರವಸೆ ಮಧ್ಯೆಯೂ ದಿಢೀರ್ ದೆಹಲಿ ಪ್ರವಾಸವನ್ನು ಜಾರಕಿಹೊಳಿ ಕೈಗೊಂಡಿದ್ದಾರೆ. ಅವಕಾಶ ಸಿಕ್ಕರೆ ಬಿಜೆಪಿ ಹೈಕಮಾಂಡ್ ನಾಯಕರ ಭೇಟಿಗೆ ರಮೇಶ್ ನಿರ್ಧಾರ ಮಾಡಿದ್ದು, ಗೃಹ ಸಚಿವ ಅಮಿತ್ ಷಾ ಅವರಿಗೆ ಮನವಿ ಮಾಡಲಿದ್ದಾರೆ ಎನ್ನಲಾಗಿದೆ.