ಬೆಳಗಾವಿ: ಒಂದು ಕಾಲದಲ್ಲಿ ಆಪ್ತರಾಗಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಇಂದು ಹಾವು ಮುಂಗುಸಿಯಂತೆ ಕಚ್ಚಾಡುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಲಕ್ಷ್ಮಿ ಗೆಲುವಿಗೆ ಶ್ರಮಿಸಿದ್ದ ರಮೇಶ್ ಈಗ ಅದೇ ಲಕ್ಷ್ಮಿಯನ್ನು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ (Karnataka Election 2023) ಸೋಲಿಸಲು ಶಪಥ ಮಾಡಿದ್ದಾರೆ. ಕಳೆದ ಎರಡು ತಿಂಗಳಿಂದ ಲಕ್ಷ್ಮಿ ಪ್ರತಿನಿಧಿಸುವ ಕ್ಷೇತ್ರದಲ್ಲಿ ಆ್ಯಕ್ಟಿವ್ ಆಗಿರುವ ರಮೇಶ್ ಮಂಗಳವಾರ (ಫೆ. ೨೮) ಮತ್ತೊಂದು ಸಮಾವೇಶವನ್ನು ನಡೆಸಿದ್ದು, 5 ಸಾವಿರಕ್ಕೂ ಅಧಿಕ ಜನರು ಬಾಡೂಟ ಹಾಕಿಸಿದ್ದಾರೆ.
ಉಚಗಾಂವ ಕ್ಷೇತ್ರದಲ್ಲಿ ಸಮಾವೇಶ ನಡೆಸಿದ ರಮೇಶ್ ಜಾರಕಿಹೊಳಿ ಬಳಿಕ 5 ಸಾವಿರಕ್ಕೂ ಅಧಿಕ ಜನರಿಗೆ ಬಾಡೂಟವನ್ನು ಹಾಕುವ ಮೂಲಕ ತಮ್ಮ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುವತ್ತ ದೃಷ್ಟಿ ನೆಟ್ಟಿದ್ದಾರೆ. ಉಚಗಾಂವ ಗ್ರಾಮದ ಮಳೆಕರಣಿ ದೇವಿಗೆ ಪೂಜೆ ಸಲ್ಲಿಸಿ ಜನಸಂವಾದ ಸಭೆ ನಡೆಸಿದರು. ಸಭೆಗೆ ಆಗಮಿಸಿದ್ದ ಐದು ಸಾವಿರಕ್ಕೂ ಹೆಚ್ಚು ಜನರಿಗೆ ಬಾಡೂಟ ವ್ಯವಸ್ಥೆ ಮಾಡಲಾಗಿತ್ತು.
ಇದನ್ನೂ ಓದಿ: Govt Employees Strike : ಸರ್ಕಾರಿ ನೌಕರರ ಮುಷ್ಕರ ಹೇಗಿರಲಿದೆ? ನೌಕರರು ಪ್ರತಿಭಟನೆ ವೇಳೆ ಏನು ಮಾಡಲಿದ್ದಾರೆ?
1100 ಕೆಜಿಗೂ ಹೆಚ್ಚು ಮಟನ್ ತಂದು ಭರ್ಜರಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಜನರು ಬಾಡೂಟ ಸವಿಯಲು ಮುಗಿಬಿದ್ದರು. ರಮೇಶ್ ಜಾರಕಿಹೊಳಿ ಹಾಗೂ ಆಪ್ತ ನಾಗೇಶ್ ಮನ್ನೋಳಕರ್ ನೇತೃತ್ವದಲ್ಲಿ ಬಾಡೂಟ ವ್ಯವಸ್ಥೆ ಮಾಡಲಾಗಿತ್ತು. ಈ ಹಿಂದೆಯೂ ರಮೇಶ ಹಿಂಡಲಗಾ, ಸುಳೇಭಾವಿ, ಹಿರೇಬಾಗೇವಾಡಿಯಲ್ಲಿ ಸಭೆ ಮಾಡಿದ್ದರು.
‘ಎಂಇಎಸ್’ ಅಸ್ತ್ರ ಪ್ರಯೋಗ
ಇದೇ ವೇಳೆ ಸಮಾವೇಶದಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ಬಿಜೆಪಿ ಬೆಂಬಲಿಸುವಂತೆ ನಾಡದ್ರೋಹಿ ಎಂಇಎಸ್‌ಗೆ ಮನವಿ ಮಾಡಿದರು. ಎಂಇಎಸ್‌ನವರಲ್ಲಿ ನಾನು ಮನವಿ ಮಾಡುತ್ತೇನೆ. ಬಿಜೆಪಿಗೆ ಸಪೋರ್ಟ್ ಮಾಡಬೇಕು. ಎರಡು ಮರಾಠಾ ಅಭ್ಯರ್ಥಿ ಆದರೆ ದೋಖಾ ಆಗುತ್ತದೆ. ಗಡಿವಿವಾದ ಸಂಬಂಧ ನಿಮ್ಮ ಕೇಸ್ ಸುಪ್ರೀಂಕೋರ್ಟ್‌ನಲ್ಲಿ ಇದೆ. ಸುಪ್ರೀಂ ಕೋರ್ಟ್‌ನಲ್ಲಿ ಏನು ಆಗುತ್ತದೆಯೋ ಅದಕ್ಕೆ ಎಲ್ಲರೂ ಒಪ್ಪಬೇಕಾಗುತ್ತೆ. ಬಿಜೆಪಿ ಬೆಂಬಲಿಸುವಂತೆ ಎಂಇಎಸ್‌ನಲ್ಲಿ ಮನವಿ ಮಾಡುತ್ತೇನೆ. ನಾವಂತೂ ಮಹಾಜನ್ ಆಯೋಗ ವರದಿ ಒಪ್ಪಿದ್ದೇವೆ. ನೀವು ಅದನ್ನು ವಿರೋಧಿಸಿ ಸುಪ್ರೀಂ ಕೋರ್ಟ್ ಹೋಗಿದ್ದೀರಿ. ಸುಪ್ರೀಂಕೋರ್ಟ್‌ನಲ್ಲಿ ಏನಾಗುತ್ತದೆಯೋ ಅದನ್ನು ಎಲ್ಲರೂ ಒಪ್ಪಿಕೊಳ್ಳೋಣ. ಆದರೆ, ದಯವಿಟ್ಟು ಭಾರತೀಯ ಜನತಾ ಪಕ್ಷಕ್ಕೆ ಸಪೋರ್ಟ್ ಮಾಡಿ ಎಂದು ಕೋರಿದರು.
ಎಲ್ಲ ನೀರಾವರಿ ಯೋಜನೆ, ಆಸ್ಪತ್ರೆ ಸೇರಿದಂತೆ ಒಳ್ಳೆಯ ಕ್ಷೇತ್ರವನ್ನಾಗಿ ರೂಪಿಸೋಣ. ಕಳೆದ 5 ವರ್ಷದಲ್ಲಿ ಗ್ರಾಮೀಣ ಕ್ಷೇತ್ರವನ್ನು ಕೆಡಿಸಿದ ಮಹಾನಾಯಕಿಯನ್ನು ಮನೆಗೆ ಕಳುಹಿಸಿ. ಒಬ್ಬ ಸಂಭಾವಿತ ಒಳ್ಳೆಯ ಮನುಷ್ಯನನ್ನು ಎಂಎಲ್‌ಎ ಮಾಡಿ. ಕಮಿಷನ್ ಏಜೆಂಟರ ಹಿಂದೆ ಬೀಳದೇ ಬಡವರ ಸೇವೆ ಮಾಡುವ ಶಾಸಕರನ್ನು ಆರಿಸಿ ತರೋಣ. ಈಗಾಗಲೇ ಜಯ ಸಿಕ್ಕಿದೆ. ಆದರೆ, ಜಯ ಸಿಕ್ಕಿದೆ ಎಂದು ಮೈ ಮರೆಯೋದು ಬೇಡ. ಎಲ್ಲರೂ ಇನ್ನು 90 ದಿವಸ ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಕೆಲಸ ಮಾಡೋಣ. ನಮ್ಮ ವಿರೋಧಿಗಳು ಪ್ರಬಲರು ಎಂದು ಕೆಲಸ ಮಾಡೋಣ ಎಂದು ಕರೆ ನೀಡಿದರು.
ಇದನ್ನೂ ಓದಿ: Govt Employees Strike: ರಾತ್ರಿ ನಿರ್ಣಾಯಕ ಸಭೆ ನಡೆಸಲಿರುವ ಬೊಮ್ಮಾಯಿ; ಮುಷ್ಕರ ವಾಪಸ್ ಪಡೀತಾರಾ ನೌಕರರು?
ಇನ್ನು ಮುಂದೆ ಸಭೆ ಸಮಾರಂಭ ಕಡಿಮೆ ಮಾಡಿ ಗ್ರಾಮ, ವಾರ್ಡ್, ಪಂಚಾಯಿತಿ ಮಟ್ಟದಲ್ಲಿ ಕೆಲಸ ಮಾಡೋಣ. ಬಿಜೆಪಿ ಗೆಲ್ಲಿಸುವ ಕೆಲಸ ಮಾಡಬೇಕು. ಬಿಜೆಪಿ ವರಿಷ್ಠರು ಯಾರಿಗೆ ಟಿಕೆಟ್ ನೀಡುತ್ತಾರೆಯೋ ಅವರನ್ನು ಆರಿಸಿ ತರೋಣ. ನನ್ನ ಮೇಲೆ ಪ್ರೀತಿ ಹೀಗೆಯೇ ಇರಲಿ ಎಂದು ರಮೇಶ್ ಜಾರಕಿಹೊಳಿ ಕೋರಿದರು.