Site icon Vistara News

Blast in Bengaluru: ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಕೇಸ್‌; ಅಗತ್ಯ ಬಿದ್ರೆ ಎನ್‌ಐಎಗೆ ವಹಿಸುತ್ತೇವೆ ಎಂದ ಸಿಎಂ

Siddaramaiah

ಚಿಕ್ಕಮಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣವನ್ನು ಸಿಸಿಬಿಗೆ ವಹಿಸಲಾಗಿದೆ. ತನಿಖೆ ನಡೆಯುತ್ತಿದ್ದು, ಆರೋಪಿ ಇನ್ನೂ ಸಿಕ್ಕಿಲ್ಲ. ಅಗತ್ಯ ಬಿದ್ದರೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವಹಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬ್ರ್ಯಾಂಡ್ ಬೆಂಗಳೂರು ಈಗ ಬಾಂಬ್ ಬೆಂಗಳೂರು ಆಗಿದೆ ಎಂಬ ಬಿಜೆಪಿ ಟೀಕೆಗೆ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಅವರ ಕಾಲದಲ್ಲಿ ಸ್ಫೋಟವಾಗಿದ್ದಾಗ ಬೆಂಗಳೂರು ಏನಾಗಿತ್ತು. 2008 ರಿಂದ 4 ಬಾರಿ ಬಾಂಬ್ ಬ್ಲಾಸ್ಟ್ ಆಗಿದ್ದಕ್ಕೆ ಏನೆಂದು ಕರೆಯಬೇಕು? ಇದು ಎನ್.ಐ.ಎ, RAW ಅವರ ವೈಫಲ್ಯವಲ್ಲವೇ ಎಂದು ಪ್ರಶ್ನಿಸಿದರು.

ನಾನು ಬಾಂಬ್ ಸ್ಫೋಟವನ್ನು ಖಂಡಿಸುತ್ತೇನೆ. ಬಿಜೆಪಿಯವರು ರಾಜಕೀಯ ಮಾಡಬಾರದು. ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಹಾಗೂ ಬಿಜೆಪಿ ಕಚೇರಿ ಮುಂದೆಯೇ ಸ್ಫೋಟವಾಗಿತ್ತು. ಆಗ ಬಿಜೆಪಿ ಅಧಿಕಾರದಲ್ಲಿದ್ದರು ಎಂದು ಕಿಡಿಕಾರಿದರು.

ಇದನ್ನೂ ಓದಿ | Blast in Bengaluru: ಇನ್ನು ಆರೇ ದಿನಕ್ಕೆ ವೈಟ್‌ಫೀಲ್ಡ್‌ ರಾಮೇಶ್ವರಂ ಕೆಫೆ ರೀ ಓಪನ್

ಬಾಂಬ್ ಸ್ಫೋಟ ಪ್ರಕರಣ ಸಿಲ್ಲಿ ಘಟನೆಯಲ್ಲ

ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರು ಇದೊಂದು ಸಿಲ್ಲಿ ಘಟನೆ ಎಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಬಾಂಬ್ ಸ್ಫೋಟ ಪ್ರಕರಣ ಸಿಲ್ಲಿ ಘಟನೆಗಳಾಗುವುದಿಲ್ಲ. ಜನರ ಸುರಕ್ಷತೆಯ ದೃಷ್ಟಿಯಿಂದ ಸರ್ಕಾರ ಇದನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ ಎಂದು ಸಿಎಂ ಹೇಳಿದರು.

ಅಧಿಕಾರ ಹಂಚಿಕೊಳ್ಳಬೇಕು

ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಬಗ್ಗೆ ಮಾತನಾಡಿ, ಅಧಿಕಾರ ಹಂಚಿಕೊಳ್ಳದೇ ಇದ್ದರೆ ಅಧಿಕಾರಕ್ಕೆ ಬರಲು ಶ್ರಮಿಸಿದ ಕಾರ್ಯಕರ್ತರು ಏನು ಮಾಡಬೇಕು ಎಂದರು. ಇನ್ನು ಚಿಕ್ಕಮಗಳೂರು ಜಿಲ್ಲೆಯನ್ನು ಬರ ಪೀಡಿತ ತಾಲೂಕುಗಳ ಪಟ್ಟಿಯಿಂದ ಹೊರಗಿಟ್ಟಿರುವ ಬಗ್ಗೆ ಮಾತನಾಡಿ, ಬರಪೀಡಿತ ಎಂದು ಘೋಷಣೆ ಮಾಡಲು ಕೆಲವು ನಿಯಮಾವಳಿಗಳು ಇದ್ದು, ಅದರಂತೆ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. 17 ತಾಲೂಕು ಉಳಿದುಕೊಂಡಿವೆ ಎಂದರು.

ಇದನ್ನೂ ಓದಿ | BY Vijayendra : ಬಿಜೆಪಿ ಸಂಕಲ್ಪ ಪತ್ರಕ್ಕಾಗಿ ರಾಜ್ಯದಲ್ಲಿ3 ಲಕ್ಷ ಜನರ ಅಭಿಪ್ರಾಯ ಸಂಗ್ರಹ; ಬಿ.ವೈ ವಿಜಯೇಂದ್ರ

ಮಂಗನ ಕಾಯಿಲೆ: ಆರೋಗ್ಯ ಸಚಿವರ ಬಳಿ ಚರ್ಚೆ

ಮಂಗನ ಕಾಯಿಲೆಗೆ ಜಿಲ್ಲೆಯಲ್ಲಿ ಮೂವರು ಮೃತಪಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿ, ಆರೋಗ್ಯ ಸಚಿವರ ಬಳಿ ಈ ಬಗ್ಗೆ ಚರ್ಚಿಸುವುದಾಗಿ ಹೇಳಿದರು.

ಲೋಕಸಭೆಗೆ ತಯಾರಿ ನಡೆದಿದ್ದು, ಸಿದ್ಧತೆ ಇನ್ನಷ್ಟು ತೀವ್ರಗೊಳಿಸಲಾಗುವುದು. ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರರು. ಅಕ್ರಮ ಭೂ ಒತ್ತುವರಿಗೆ ಸಂಬಂಧಿಸಿದಂತೆ 25 ತಹಸೀಲ್ದಾರ್‌ ನೇಮಕಾತಿಯಾಗಿದ್ದು, ವರದಿ ನೀಡಿದ್ದಾರೆ ಈ ಬಗ್ಗೆ ಪರಿಶೀಲನಾ ಹಂತದಲ್ಲಿದ್ದು, ಕಂದಾಯ ಸಚಿವರ ಬಳಿ ಮಾತನಾಡುವುದಾಗಿ ಹೇಳಿದರು.

Exit mobile version