Site icon Vistara News

Rapido Bike: ರ‍್ಯಾಪಿಡೊ ಚಾಲಕನಿಂದ ಲೈಂಗಿಕ ಕಿರುಕುಳ ಆರೋಪ; ಚಲಿಸುತ್ತಿದ್ದ ಬೈಕ್‌ನಿಂದ ಜಿಗಿದ ಯುವತಿ!

woman urinated next to the house was hit with a rod on her private part

ಬೆಂಗಳೂರು: ಹೆಣ್ಮಕ್ಕಳಿಗೆ ರಾತ್ರಿ ಸಂಚಾರಕ್ಕೆ ಬೆಂಗಳೂರು ಸೇಫ್‌ ಅಲ್ಲ ಎಂಬ ವಿಚಾರ ಮತ್ತೆ ರುಜುವಾತಾಗಿದೆ. ಆನ್‌ಲೈನ್‌ ಬುಕ್ಕಿಂಗ್ ಆ್ಯಪ್ ಮೂಲಕ ತಡ ರಾತ್ರಿ ಹೊರಟಿದ್ದ ಯುವತಿಯೊಬ್ಬಳೊಂದಿಗೆ ಬೈಕ್‌ ಚಾಲಕನೊಬ್ಬ ಅನುಚಿತವಾಗಿ ವರ್ತಿಸಿರುವ (molestation) ಘಟನೆ ನಡೆದಿದೆ. ಈತನಿಂದ ತಪ್ಪಿಸಿಕೊಳ್ಳಲು ಯುವತಿ ಚಲಿಸುತ್ತಿದ್ದಾಗಲೇ ಬೈಕ್‌ನಿಂದ ಜಿಗಿದಿದ್ದಾಳೆ.

ಆರ್ಕಿಟೆಕ್ಚರ್‌ ಆಗಿರುವ 30 ವರ್ಷದ ಯುವತಿಯೊಬ್ಬಳು ಕಳೆದ ಏ. 21ರಂದು ಆನ್‌ಲೈನ್‌ ಆ್ಯಪ್ ಮೂಲಕ ರ‍್ಯಾಪಿಡೊ ಬೈಕ್ ಅನ್ನು ಬುಕ್‌ ಮಾಡಿದ್ದಳು. ಆಗ ಸುಮಾರು ರಾತ್ರಿ 11.30 ಆಗಿತ್ತು. ನಿಗದಿತ ಸ್ಥಳಕ್ಕೆ ಬಂದ ರ‍್ಯಾಪಿಡೊ ಬೈಕ್‌ ಚಾಲಕ ಯುವತಿಯನ್ನು ಹತ್ತಿಸಿಕೊಂಡಿದ್ದಾನೆ. ಅಲ್ಲಿಂದ ಇಂದಿರಾನಗರಕ್ಕೆ ಬೈಕ್‌ ತೆರಳಬೇಕಿತ್ತು. ಆದರೆ, ಆತ ಅಲ್ಲಿಗೆ ಕರೆದೊಯ್ಯದೆ ಒಟಿಪಿ ಪರಿಶೀಲಿಸುವ ನೆಪದಲ್ಲಿ ಆಕೆಯ ಫೋನ್ ತೆಗೆದುಕೊಂಡು ದೊಡ್ಡಬಳ್ಳಾಪುರಕ್ಕೆ ಹೋಗಲು ಯತ್ನಿಸಿದ್ದಾನೆ.

ಬೈಕ್‌ ನಿಗದಿತ ಸ್ಥಳಕ್ಕೆ ಹೋಗದೆ ಇರುವುದನ್ನು ಗಮನಿಸಿದ ಯುವತಿ ಕೂಡಲೇ ಚಾಲಕನನ್ನು ಪ್ರಶ್ನಿಸಿದ್ದಾಳೆ. ಆದರೆ ಇದ್ಯಾವುದಕ್ಕೂ ಉತ್ತರಿಸದ ಆತ ಬೈಕ್‌ ವೇಗವನ್ನು ಹೆಚ್ಚಿಸಲು ಮುಂದಾಗಿದ್ದಾನೆ. ಇದರಿಂದ ಗಾಬರಿಗೊಂಡ ಯುವತಿ ಕೂಡಲೇ ಆತನ ಬಳಿಯಿದ್ದ ತನ್ನ ಫೋನ್‌ನನ್ನು ಕಸಿದುಕೊಂಡು, ಗಾಡಿ ನಿಲ್ಲಿಸುವಂತೆ ಹೇಳಿದ್ದಾಳೆ.

ಪಾನಮತ್ತನಾಗಿದ್ದ ಆ ಚಾಲಕ ಗಾಡಿ ನಿಲ್ಲಿಸದೇ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದಾನೆ. ಆತನಿಂದ ರಕ್ಷಿಸಿಕೊಳ್ಳಲು ಬಿಎಂಎಸ್‌ ಕಾಲೇಜು ಸಮೀಪ ಚಲಿಸುತ್ತಿದ್ದಾಗಲೇ ರಾಪಿಡೊ ಬೈಕಿನಿಂದ ಜಿಗಿದಿದ್ದಾಗಿ ಯುವತಿ ಹೇಳಿಕೊಂಡಿದ್ದಾಳೆ. ಈ ಸಂಬಂಧ ರ‍್ಯಾಪಿಡೋ ಸಂಸ್ಥೆಗೂ ದೂರು ನೀಡಿದ್ದು, ಇಲ್ಲಿಯವರೆಗೆ ಯುವತಿಯನ್ನು ಸಂಪರ್ಕಿಸಿಲ್ಲ ಎನ್ನಲಾಗಿದೆ.

ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಯುವತಿಯ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಲೈಂಗಿಕ ಕಿರುಕುಳ, ಅಪಹರಣ, ಹಲ್ಲೆ ಅಥವಾ ಕ್ರಿಮಿನಲ್ ಕೇಸ್‌ ದಾಖಲು ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: Weather Report: ಮುಂದಿನ 24 ಗಂಟೆಯಲ್ಲಿ ರಾಜ್ಯಾದ್ಯಂತ ಬಿರುಗಾಳಿ ಸಹಿತ ಭಾರಿ ಮಳೆ ಎಚ್ಚರಿಕೆ

ಘಟನೆ ಬೆನ್ನಲ್ಲೆ ಇದೀಗ ರಾಜಧಾನಿ ಬೆಂಗಳೂರಿನಲ್ಲಿ ರಾತ್ರಿ ವೇಳೆ ಯುವತಿಯರು ಸಂಚಾರ ಮಾಡುವುದು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಉದ್ಭವಿಸಿದ್ದು, ಘಟನೆ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯಗಳು ಕೇಳಿಬಂದಿವೆ.

Exit mobile version