ಕಾರವಾರ: ಅದೊಂದು ಪುಟ್ಟ ಕುಟುಂಬ. ಬಡತನದಲ್ಲೂ ಸುಖವನ್ನು ಕಂಡುಕೊಂಡು ದಿನ ದೂಡುತ್ತಿತ್ತು. ಆ ದಂಪತಿಗೆ ಒಂದು ಮುದ್ದಾದ ಗಂಡು ಮಗುವೂ ಜನಿಸಿತ್ತು. ಆದರೆ, ಇದ್ದಕ್ಕಿದ್ದಂತೆ ಆ ಮಗುವಿನ ಮುಖದ ಮೇಲೆ ಒಂದು ಗುಳ್ಳೆ ಕಾಣಿಸಿಕೊಂಡಿದೆ. ಅಪರೂಪದ ಚರ್ಮ ರೋಗ (Rare disease) ಇದಾಗಿದ್ದು, ಗುಣವಾಗದೆ ಇಡೀ ಮುಖಕ್ಕೆ ಆವರಿಸಿದೆ. ಇದು ಈ ಬಡ ಕುಟುಂಬಕ್ಕೆ ದಿಕ್ಕೇ ತೋಚದಂತೆ ಮಾಡಿದೆ. ಸದ್ಯ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಚಿಕಿತ್ಸೆ ದೊರೆಯುತ್ತಿದ್ದರೂ ಆತಂಕದಲ್ಲಿಯೇ ದಿನ ದೂಡುವಂತಾಗಿದೆ.
ಇಂಥದ್ದೊಂದು ವಿಚಿತ್ರ ಹಾಗೂ ಅಪರೂಪದ ಕಾಯಿಲೆಗೆ ತುತ್ತಾಗಿರುವುದು ನಂದನಗದ್ದಾದ 4 ವರ್ಷದ ಗಂಡು ಮಗು. ಪ್ರೇಮಾನಂದ ಕಾಂಬ್ಳೆ ಹಾಗೂ ಪ್ರಜ್ಞಾ ಕಾಂಬ್ಳೆ ದಂಪತಿಯ ಪುತ್ರನಾಗಿದ್ದಾನೆ. ಈ ದಂಪತಿ ನಂದನಗದ್ದಾದ ನಾಗನಾಥ ದೇವಸ್ಥಾನದ ಹತ್ತಿರದ ಪುಟ್ಟ ಗುಡಿಸಿಲಿನಲ್ಲಿ ವಾಸವಾಗಿದ್ದಾರೆ. ಮಗ 4 ವರ್ಷದವರೆಗೆ ಆರೋಗ್ಯವಾಗಿಯೇ ಇದ್ದ. ಆದರೆ, ಕಳೆದ ಏಳು ತಿಂಗಳುಗಳ ಹಿಂದೆ ಕಿವಿಯ ಹಿಂಬದಿಯಲ್ಲಿ ಆದ ಒಂದು ಚಿಕ್ಕ ಗುಳ್ಳೆ ಬರಬರುತ್ತಾ ದೊಡ್ಡದಾಗಿ ಇದೀಗ ಇಡೀ ಮುಖವನ್ನೇ ಆವರಿಸಿಕೊಂಡಿದೆ.
ಗುಳ್ಳೆ ಸ್ವಲ್ಪ ದೊಡ್ಡದಾಗುತ್ತಿದ್ದಂತೆ ಜಿಲ್ಲಾ ಆಸ್ಪತ್ರೆಯಲ್ಲಿ ಮಗುವನ್ನು ತಪಾಸಣೆ ಮಾಡಿ ಚಿಕಿತ್ಸೆ ನೀಡಲಾಗಿತ್ತು. ಆದರೂ ಕಡಿಮೆಯಾಗದಾಗ ಕುಟುಂಬ ವಿವಿಧೆಡೆ ನಾಟಿ ಔಷಧಗಳ ಮೊರೆ ಹೋಗಿದೆ. ಆದರೆ, ಕ್ರಮೇಣ ಗುಳ್ಳೆ ಉಲ್ಬಣಗೊಳ್ಳಲಾರಂಭಿಸಿದೆ. ಆದರೆ, ಕೈಯಲ್ಲಿ ದುಡ್ಡಿಲ್ಲ, ತೋರಿಸದೇ ಇದ್ದರೆ ಮಗುವಿನ ಸಂಕಟವನ್ನು ನೋಡಲು ಆಗುವುದಿಲ್ಲ.
ಇದನ್ನೂ ಓದಿ | Shootout In Bangalore | ತೆಲುಗಿನ ಇಂದ್ರ ಸಿನಿಮಾ ಹೋಲುವ ದ್ವೇಷ; 24 ಗಂಟೆಯೊಳಗೆ ಶೂಟ್‌ಔಟ್ ಆರೋಪಿಗಳ ಸೆರೆ
ಈ ಹಿನ್ನೆಲೆಯಲ್ಲಿ ಸಾಲಗಳನ್ನು ಮಾಡಿ ಹಣ ಹೊಂದಿಸಿಕೊಂಡು ಮಂಗಳೂರಿನ ಫಾದರ್ ಮುಲ್ಲರ್‌ಗೆ ಆಸ್ಪತ್ರೆಗೆ ದಾಖಲಿಸಿ ಮಗುವಿಗೆ ಚಿಕಿತ್ಸೆ ಕೊಡಿಸಿದ್ದರು. ಆದರೂ ಗುಣಮುಖ ಮಾತ್ರ ಆಗಲಿಲ್ಲ. ಬದಲಿಗೆ ಗುಳ್ಳೆ ಮತ್ತಷ್ಟು ಬೆಳವಣಿಗೆಯಾಗುತ್ತಾ ಹೋಗಿದೆ. ಇನ್ನು ತಜ್ಞರ ಬಳಿ ದೊಡ್ಡ ಆಸ್ಪತ್ರೆಯಲ್ಲಿ ತೋರಿಸಿ ಚಿಕಿತ್ಸೆ ಕೊಡಿಸಲು ಹಣವಿಲ್ಲದೆ ಪರದಾಡುತ್ತಿದ್ದರು. ಹೀಗಾಗಿ ಮನೆಯಲ್ಲೇ ಮಗುವಿಗೆ ಆರೈಕೆ ಮಾಡಿಕೊಂಡಿದ್ದರು. ಗುಳ್ಳೆ ದೊಡ್ಡದಾಗುತ್ತಾ ಇಡೀ ಮುಖವನ್ನೇ ಆವರಿಸಿಕೊಂಡಿತು.
ಸ್ಥಳೀಯರಾದ ಯುವರಾಜ ಎಂಬುವವರ ಮೂಲಕ ಈ ವಿಷಯ ತಿಳಿದ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಅವರು ಇವರ ಮನೆಗೆ ಭೇಟಿ ನೀಡಿ ವಿಚಾರಿಸಿದ್ದಾರೆ. ಬಳಿಕ ಪರಿಸ್ಥಿತಿಯನ್ನು ಮನಗಂಡು ತಮ್ಮ ಕಾರಿನಲ್ಲಿಯೇ ಮಗುವನ್ನು ಜಿಲ್ಲಾ ಆಸ್ಪತ್ರೆಗೆ ಕರೆತಂದರು. ಕ್ರಿಮ್ಸ್ ನಿರ್ದೇಶಕ ಡಾ.ಗಜಾನನ ನಾಯಕ, ಆರ್‌ಎಂಒ ಡಾ.ವೆಂಕಟೇಶ ಸೇರಿದಂತೆ ಅನೇಕ ವೈದ್ಯರು ತುರ್ತು ಚಿಕಿತ್ಸಾ ಘಟಕಕ್ಕೆ ಭೇಟಿ ನೀಡಿ ಈ ಕುರಿತು ಚರ್ಚಿಸಿದರು.
ಡಾ.ಗಜಾನನ ನಾಯಕ ಅವರು ಹುಬ್ಬಳ್ಳಿಯ ಕಿಮ್ಸ್ ವೈದ್ಯರೊಂದಿಗೆ ಮಾತನಾಡಿ ಪರಿಸ್ಥಿತಿ ತಿಳಿಸಿದ್ದು, ಉಚಿತವಾಗಿ ಜಿಲ್ಲಾ ಆಸ್ಪತ್ರೆಯಿಂದ ಆಂಬ್ಯುಲೆನ್ಸ್ ಮಾಡಿಕೊಟ್ಟು ಹುಬ್ಬಳ್ಳಿಗೆ ಕಳುಹಿಸಿದ್ದಾರೆ. ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕದಲ್ಲಿ ತುರ್ತಾಗಿ ರೆಫರಲ್ ಕೂಡ ಮಾಡಿಕೊಡಲಾಗಿದೆ. ಸದ್ಯ ಮಗು ಚಿಕಿತ್ಸೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಮಗುವು ಶೀಘ್ರ ಗುಣಮುಖವಾಗಲಿ ಎಂದು ಕುಟುಂಬದವರ ಸಹಿತ ಹಲವರು ಪ್ರಾರ್ಥನೆ ಮಾಡಿದ್ದಾರೆ.
ಇದನ್ನೂ ಓದಿ | Deforestation | ಬಾವಲಿ ಗಲೀಜು ಮಾಡುತ್ತದೆ ಎಂದು ಅರಣ್ಯ ಇಲಾಖೆ ಕಚೇರಿಯ ಎದುರಿನ 6 ಮರಕ್ಕೆ ಕೊಡಲಿ ಏಟು?