ಬೆಂಗಳೂರು: ನಗರದ ರಾಜರಾಜೇಶ್ವರಿ ನಗರದಲ್ಲಿ ಸ್ವಯಂಸೇವಾ ಸಂಸ್ಥೆ ರಾಷ್ಟ್ರೋತ್ಥಾನ ಪರಿಷತ್‌ನಿಂದ (Rashtrotthana Parishat) ನಿರ್ಮಿಸಲಾಗಿರುವ ನೂತನ ʼಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರʼದ ಉದ್ಘಾಟನೆ ಕಾರ್ಯಕ್ರಮವನ್ನು ಡಿಸೆಂಬರ್ 5ರಂದು ಸಂಜೆ 6 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ʼವೃತ್ತಿಪರ ಸೇವೆ-ಕೈಗೆಟಕುವ ದರದ ಚಿಕಿತ್ಸೆʼ ಧ್ಯೇಯವಾಕ್ಯದಲ್ಲಿ ಆರಂಭವಾಗುತ್ತಿರುವ ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೈಸೂರಿನ ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಇನ್ಫೋಸಿಸ್ ಫೌಂಡೇಶನ್ ಸಂಸ್ಥಾಪಕರಾದ ಸುಧಾಮೂರ್ತಿ, ನಾರಾಯಣ ಹೆಲ್ತ್ ಸ್ಥಾಪಕ ಮತ್ತು ಅಧ್ಯಕ್ಷ ಡಾ.ದೇವಿ ಪ್ರಸಾದ್ ಶೆಟ್ಟಿ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಭಾಗವಹಿಸಲಿದ್ದಾರೆ.
ಇದನ್ನೂ ಓದಿ | Green tribunal | ಚಂದಾಪುರ ಕೆರೆ ವಿಚಾರದಲ್ಲಿ ವಿಧಿಸಿದ 500 ಕೋಟಿ ರೂ. ದಂಡದಲ್ಲಿ ಬದಲಾವಣೆಗೆ ಎನ್‌ಜಿಟಿ ನಕಾರ
ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ವೃತ್ತಿಪರ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ರಾಷ್ಟ್ರೋತ್ಥಾನ ಪರಿಷತ್ ಆಸ್ಪತ್ರೆಯನ್ನು ಪ್ರಾರಂಭಿಸುತ್ತಿದೆ. ಆಸ್ಪತ್ರೆಯು ಒಂದೇ ಸೂರಿನಡಿ ಆಧುನಿಕ ವೈದ್ಯ ಪದ್ಧತಿ (ಅಲೋಪತಿ), ಆಯುರ್ವೇದ, ಹೋಮಿಯೋಪತಿ, ಯೋಗ, ನ್ಯಾಚುರೋಪತಿ ಮೊದಲಾದ ಚಿಕಿತ್ಸಾ ಸೌಲಭ್ಯಗಳನ್ನು ಒಳಗೊಂಡಿರುವ ಒಂದು ‘ಸಮಗ್ರ ಚಿಕಿತ್ಸೆಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ’ಯಾಗಿ ಸೇವೆ ಸಲ್ಲಿಸಲಿದೆ.
1965ರಲ್ಲಿ ಪ್ರಾರಂಭಗೊಂಡ ರಾಷ್ಟ್ರೋತ್ಥಾನ ಪರಿಷತ್ ಅನ್ನು ಪ್ರಾರಂಭದ ದಿನಗಳಿಂದಲೂ ಕಟ್ಟಿ ಬೆಳೆಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾದ ಸ್ವರ್ಗೀಯ ಮೈ.ಚ. ಜಯದೇವರ ಹೆಸರಿನಲ್ಲಿ ಈ ಆಸ್ಪತ್ರೆಯು ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸಲಿದೆ.
‘ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ’ದಲ್ಲಿ ಪ್ರಸ್ತುತ 19 ಜನರಲ್ ವಾರ್ಡ್‌ಗಳು, 72 ಸೆಮಿ ಪ್ರೈವೇಟ್ ವಾರ್ಡ್‌ಗಳು, 11 ಎಮರ್ಜೆನ್ಸಿ ವಾರ್ಡ್‌ಗಳು ಹಾಗೂ 17 ಪ್ರೈವೇಟ್ ವಾರ್ಡ್‌ಗಳು ಸೇರಿ ಒಟ್ಟು 160 ಹಾಸಿಗೆಗಳನ್ನು ಹೊಂದಿರುವ ಸಮಗ್ರ ಆಧುನಿಕ ವೈದ್ಯಕೀಯ ಮೂಲಸೌಕರ್ಯಗಳು ಲಭ್ಯವಿದೆ. ಅತ್ಯಾಧುನಿಕ ವೈದ್ಯಕೀಯ ಮೂಲಸೌಕರ್ಯ, ಉತ್ತಮ ತಂತ್ರಜ್ಞಾನ, ತಜ್ಞ ವೈದ್ಯರು ಹಾಗೂ ಸೇವಾ ಮನೋಭಾವದ ವೈದ್ಯಕೀಯ ಸಿಬ್ಬಂದಿಯನ್ನು ಈ ಆಸ್ಪತ್ರೆ ಹೊಂದಿದೆ. ಅಗತ್ಯ ಇರುವವರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದು ಆಸ್ಪತ್ರೆಯ ಗುರಿಯಾಗಿದೆ.
ವೈದ್ಯಕೀಯ ಚಿಕಿತ್ಸಾ ವಿಭಾಗಗಳು: ಜನರಲ್ ಮೆಡಿಸಿನ್, ಕಾರ್ಡಿಯಾಲಜಿ, ಆರ್ಥೋಪೆಡಿಕ್ಸ್, ನ್ಯೂರಾಲಜಿ, ಗೈನಕಾಲಜಿ, ಗ್ಯಾಸ್ಟ್ರೋಎಂಟರಾಲಜಿ, ಪೀಡಿಯಾಟ್ರಿಕ್ಸ್, ಆಯುರ್ವೇದ, ಹೋಮಿಯೋಪಥಿ, ಯೋಗ ಮತ್ತು ನ್ಯಾಚುರೋಪತಿ.
ಲಭ್ಯ ಸೇವೆಗಳು/ ಸೌಲಭ್ಯಗಳು: ತುರ್ತು ಚಿಕಿತ್ಸಾ ಘಟಕ, ಡಯಾಲಿಸಿಸ್, ಒಟಿ, ಐ.ಸಿ.ಯು., ಡಯಾಗ್ನೋಸ್ಟಿಕ್ ಸೇವೆಗಳು, ಇತ್ಯಾದಿ.
ರಾಜ್ಯದ ಪ್ರತಿಷ್ಠಿತ ಸ್ವಯಂಸೇವಾ ಸಂಸ್ಥೆಗಳಲ್ಲೊಂದಾದ ‘ರಾಷ್ಟ್ರೋತ್ಥಾನ ಪರಿಷತ್’ (ಪ್ರಾರಂಭ: 1965) ‘ಸ್ವಸ್ಥ-ಸುಸ್ಥಿರ ಸಮಾಜ ನಿರ್ಮಾಣ’ದ ಗುರಿಯೊಂದಿಗೆ ಸೇವೆ, ಆರೋಗ್ಯ, ಶಿಕ್ಷಣ ಮತ್ತು ಸಾಹಿತ್ಯ ಸಂಬಂಧಿತ ಹತ್ತಾರು ಸಮಾಜಮುಖಿ ಚಟುವಟಿಕೆಗಳ ಮೂಲಕ ರಾಜ್ಯಾದ್ಯಂತ ವ್ಯಾಪಿಸಿದೆ.
ಸೇವೆಯ ಜಗತ್ತನ್ನು life’s mission ಆಗಿ ಸ್ವೀಕರಿಸಿರುವ ರಾಷ್ಟ್ರೋತ್ಥಾನ ಪರಿಷತ್ ಕಳೆದ 3 ದಶಕಗಳಿಂದ ರಕ್ತ ಕೇಂದ್ರ, ‘ಸಂರಕ್ಷಾ’ (ತಲಸ್ಸೆಮಿಯಾ ಮಕ್ಕಳ ಆರೈಕೆ ಕೇಂದ್ರ) ಮುಂತಾದ ಆರೋಗ್ಯ ಸೇವಾ ಚಟುವಟಿಕೆಯನ್ನು ನಡೆಸುತ್ತಾ ಬಂದಿದೆ. ಸಮಾಜದ ಎಲ್ಲ ಸ್ತರದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಕಾಯಕದಲ್ಲಿ ನಿರತವಾಗಿವೆ. ಇದೀಗ ‘ರಾಷ್ಟ್ರೋತ್ಥಾನ ಆಸ್ಪತ್ರೆ’ಯ ಮೂಲಕ ಇನ್ನಷ್ಟು ಜನರಿಗೆ ಆರೋಗ್ಯ ಸೇವೆಯನ್ನು ಒದಗಿಸುವ ಪ್ರಯತ್ನಕ್ಕೆ ಮುಂದಾಗಿದೆ.
ಇದನ್ನೂ ಓದಿ | Honey benefits | ನಿತ್ಯದ ಆಹಾರಾಭ್ಯಾಸದಲ್ಲಿ ಬಳಸಿ ಕಲಿಗಾಲದ ಅಮೃತ ಜೇನುತುಪ್ಪ