Site icon Vistara News

Ration Card : ಪಡಿತರ ಚೀಟಿ ಅಪ್ಡೇಟ್‌ ಶುರು; 6 ವರ್ಷದ ಒಳಗಿನ, ನಂತರದ ಮಕ್ಕಳ ಸೇರ್ಪಡೆಗೆ ಯಾವ ದಾಖಲೆ ಬೇಕು?

Raition card updates

ಬೆಂಗಳೂರು: ಪಡಿತರ ಚೀಟಿದಾರರಿಗೆ (Ration Card) ಆಹಾರ ಇಲಾಖೆಯಿಂದ ಸಿಹಿ ಸುದ್ದಿ ಸಿಕ್ಕಿದೆ. ಗೃಹಲಕ್ಷ್ಮಿ, ಅನ್ನ ಭಾಗ್ಯ ಸೇರಿ ವಿವಿಧ ಸರ್ಕಾರಿ ಯೋಜನೆಗಳ ಅರ್ಹ ಫಲಾನುಭವಿಗಳಿಗೆ ಹಣ ಜಮೆ ಆಗುವಲ್ಲಿ ತೊಂದರೆ ಆಗುತ್ತಿರುವ ಹಿನ್ನೆಲೆಯಲ್ಲಿ ಬಿಪಿಎಲ್ ಕಾರ್ಡ್‌ನಲ್ಲಿ (BPL Card) ಫಲಾನುಭವಿ ಹೆಸರು ಸೇರ್ಪಡೆ, ತಿದ್ದುಪಡಿ ಮಾಡಲು ಅ.5ರಿಂದ ಅವಕಾಶ ನೀಡಲಾಗಿದೆ. ಈ ವೇಳೆ ಮಕ್ಕಳ ಸೇರ್ಪಡೆಗೆ ಏನೆಲ್ಲ ದಾಖಲೆಗಳು ಬೇಕು ಎಂಬ ಗೊಂದಲಗಳು ಇವೆ. ಇವುಗಳಿಗೆ ಏನು ದಾಖಲೆ ಬೇಕಾಗುತ್ತದೆ? ಆ ದಾಖಲೆಗಳು ಇಲ್ಲದಿದ್ದರೆ ಏನು ಮಾಡಬೇಕು ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಆದರೆ, ನೆನಪಿಡಿ ಬಿಪಿಎಲ್‌ ಕಾರ್ಡ್‌ ತಿದ್ದುಪಡಿಗೆ ಮೂರು ದಿನಗಳ ಕಾಲಾವಕಾಶ ಮಾತ್ರವೇ ಇದೆ.

ಬೆಂಗಳೂರು ಒನ್ (Bangalore One), ಕರ್ನಾಟಕ ಒನ್ (Karnataka One), ಗ್ರಾಮ ಒನ್ (Grama One Centre) ಕೇಂದ್ರಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆವರೆಗೆ ಬಿಪಿಎಲ್ ಕಾರ್ಡ್‌ ತಿದ್ದುಪಡಿ (BPL card correction) ಮಾಡಿಸಬಹುದಾಗಿದೆ. ತಿದ್ದುಪಡಿಗೆ ಮೂರು ಹಂತಗಳಲ್ಲಿ ವಿವಿಧ ಜಿಲ್ಲೆಗಳಿಗೆ ವೇಳಾಪಟ್ಟಿ ನಿಗದಿಪಡಿಸಲಾಗಿದೆ.

ಮೂರು ಹಂತಗಳಲ್ಲಿ ಅವಕಾಶ

ಮೊದಲ ಹಂತ: ಅ.5 ರಿಂದ 7ರವರೆಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು

ಎರಡನೇ ಹಂತ: ಅ.8 ರಿಂದ ಅ.10 ರವರೆಗೆ ಬೆಳಗಾವಿ, ಬಾಗಲಕೋಟೆ, ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಧಾರವಾಡ, ಗದಗ, ಹಾಸನ, ಹಾವೇರಿ, ಕೊಡಗು, ಮಂಡ್ಯ, ಮೈಸೂರು, ಉಡುಪಿ, ಉತ್ತರ ಕನ್ನಡ, ವಿಜಯಪುರ ಸೇರಿ ಒಟ್ಟು 15 ಜಿಲ್ಲೆಗಳಲ್ಲಿ ಅವಕಾಶ.

3ನೇ ಹಂತ: ಅ.11 ರಿಂದ ಅ.13ರವರೆಗೆ ಕಲಬುರಗಿ, ಬಳ್ಳಾರಿ, ಬೀದರ್, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ಯಾದಗಿರಿ, ವಿಜಯನಗರ ಸೇರಿ ಒಟ್ಟು 14 ಜಿಲ್ಲೆಗಳಲ್ಲಿ ಅವಕಾಶ.

ಈ ಎಲ್ಲ ಜಿಲ್ಲೆಗಳಲ್ಲೂ ಮೂರು ದಿನ ಬಿಪಿಎಲ್ ಕಾರ್ಡ್‌ ತಿದ್ದುಪಡಿಗೆ ಅವಕಾಶ ನೀಡಲಾಗಿದೆ.‌

ಏನೇನು ತಿದ್ದುಪಡಿ?

ಅಕ್ಟೋಬರ್‌ 13ರವರೆಗೆ ಅವಕಾಶ

ಆಹಾರ ಇಲಾಖೆಯು ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ ಅಥವಾ ತಿದ್ದುಪಡಿಗೆ ಅಕ್ಟೋಬರ್ 5 ರಿಂದ 13ರವರೆಗೆ ಅವಕಾಶ ನೀಡಲಾಗಿದೆ. ಹೀಗಾಗಿ ರೇಷನ್ ಕಾರ್ಡ್‌ನಲ್ಲಿ ಮಕ್ಕಳ ಹೆಸರನ್ನು ಸಹ ಸೇರ್ಪಡೆ ಮಾಡಬಹುದಾಗಿದೆ. ಮನೆಯ ಸದಸ್ಯರ ಆಧಾರದ ಮೇಲೆ ಪಡಿತರದಲ್ಲಿ ಆಹಾರ ಧಾನ್ಯಗಳನ್ನು ನೀಡಲಾಗುವುದು. ಕೆಲವು ಸಂದರ್ಭಗಳಲ್ಲಿ ಮಕ್ಕಳ ಹೆಸರುಗಳನ್ನು ಸೇರ್ಪಡೆ ಮಾಡಲು ಆಗಿರುವುದಿಲ್ಲ. ಈಗ ಮತ್ತೊಂದು ಅವಕಾಶವನ್ನು ನೀಡಲಾಗಿದೆ. ಮಕ್ಕಳ ಹೆಸರನ್ನು ಸೇರ್ಪಡೆ ಮಾಡಬೇಕೆಂದರೆ ಕೆಲವು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

ಬಿಪಿಎಲ್‌ಗೆ ಸೇರ್ಪಡೆ ಮಾಡುವುದಿದ್ದರೆ ಏನು ದಾಖಲೆ ಬೇಕು?

ಬಿಪಿಎಲ್‌ ಪಡಿತರ ಚೀಟಿಯಲ್ಲಿ ಮಕ್ಕಳ ಹೆಸರನ್ನು ಸೇರ್ಪಡೆ ಮಾಡಬೇಕಾದರೆ ಆದಾಯ ಪ್ರಮಾಣ ಪತ್ರ ಬೇಕಾಗುತ್ತದೆ. ಆದರೆ, ಇದು ಆರು ವರ್ಷಕ್ಕಿಂತ ಮೇಲ್ಪಟ್ಟಿದ್ದರೆ ಮಾತ್ರ. ಅದೇ ಮಕ್ಕಳು ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ ಅಂಥವರು ಜನನ ಪ್ರಮಾಣ ಪತ್ರವನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ. ಈಗ ಮಕ್ಕಳು ಮಾತ್ರವಲ್ಲದೆ, ಹಿರಿಯರ ಹೆಸರು ಸೇರ್ಪಡೆ ಸಹಿತ ತಿದ್ದುಪಡಿಗಳು ಇದ್ದರೂ ತ್ವರಿತವಾಗಿ ಮಾಡಿಸಿಕೊಳ್ಳಬೇಕು ಎಂದು ಸಾಗರ ತಾಲೂಕಿನ ತುಮರಿಯ ಸೇವಾಸಿಂಧು ಪೋರ್ಟಲ್‌ನ ಅಕ್ಷಯ್‌ ವಿಸ್ತಾರ ನ್ಯೂಸ್‌ಗೆ ತಿಳಿಸಿದ್ದಾರೆ.

ಯಾವೆಲ್ಲ ದಾಖಲೆ ಬೇಕು?

ಆಧಾರ್ ಕಾರ್ಡ್: ಆರು ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಲ್ಲಿ ಆಧಾರ್‌ ಕಾರ್ಡ್‌ ಬೇಕಾಗುತ್ತದೆ. ಅದಕ್ಕಿಂತ ಒಳಪಟ್ಟವರಾಗಿದ್ದರೆ ಜನನ ಪ್ರಮಾಣ ಪತ್ರ ಇದ್ದರೆ ಸಾಕು. ಒಂದು ವೇಳೆ ಆಧಾರ್‌ ಕಾರ್ಡ್‌ ಇಲ್ಲದಿದ್ದರೆ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಮಾಡಿಸಿಕೊಳ್ಳಬೇಕು.

ಜನನ ಪ್ರಮಾಣಪತ್ರ

ಮಕ್ಕಳ ಹೆಸರು ಸೇರ್ಪಡೆ ಮಾಡಬೇಕೆಂದಿದ್ದರೆ ಮನೆಯ ಮುಖ್ಯಸ್ಥರ ಪಾಸ್‌ಪೋರ್ಟ್‌ ಗಾತ್ರದ ಫೋಟೊ ಬೇಕು ಹಾಗೂ ಆ ಮಕ್ಕಳಿಗೆ ಸಂಬಂಧಿಸಿದ ಆಧಾರ್‌ ಕಾರ್ಡ್‌ ಇಲ್ಲವೇ ಜನನ ಪ್ರಮಾಣ ಬೇಕಾಗುತ್ತದೆ.

ಜನನ ಪ್ರಮಾಣ ಪತ್ರ ಇಲ್ಲದಿದ್ದರೆ?

ಕೆಲವರು ಮಕ್ಕಳ ಜನನ ಪ್ರಮಾಣ ಪತ್ರವನ್ನು ಮಾಡಿಸಿರುವುದಿಲ್ಲ. ಅಂಥವರು ಕೂಡಲೇ ಮುನ್ಸಿಪಲ್ ಕಾರ್ಪೊರೇಷನ್, ಪಂಚಾಯಿತಿ ಅಥವಾ ಸಿಎಸ್‌ಸಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ಜನನ ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ. ಇದಕ್ಕಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಅವಕಾಶವೂ ಇದೆ.

ಇದನ್ನೂ ಓದಿ : Cauvery Dispute : ಮೇಕೆದಾಟು ಯೋಜನೆ ಜಾರಿಗೆ ಸರ್ಕಾರ ಸರ್ವ ಸಿದ್ಧತೆ; ಡಿ.ಕೆ. ಶಿವಕುಮಾರ್‌

ಅರ್ಜಿ ಸಲ್ಲಿಸುವ ಪ್ರಕ್ರಿಯೆ

ಅರ್ಜಿ ನಮೂನೆಯೊಂದಿಗೆ ಆಧಾರ್ ಕಾರ್ಡ್, ಫೋಟೊ, ಜನನ ಪ್ರಮಾಣಪತ್ರದಂತಹ ದಾಖಲೆಗಳನ್ನು ಲಗತ್ತಿಸಬೇಕು. ಅರ್ಜಿಯಲ್ಲಿ ಹೆಸರು ಸಹಿತ ವಿವರಗಳು ಸರಿಯಾಗಿ ಇವೆಯೇ ಎಂಬುದನ್ನು ಸೇವಾ ಸಿಂಧು ಇಲ್ಲವೇ ನೀವು ಭೇಟಿ ನೀಡಿದ ಸೇವಾ ಕೇಂದ್ರದ ಆಪರೇಟರ್‌ ಬಳಿ ಕೇಳಿ ಖಚಿತಪಡಿಸಿಕೊಳ್ಳಬೇಕು. ಬಳಿಕ ಹೆಸರನ್ನು ಸೇರ್ಪಡೆಗೊಳಿಸಲಾಗುವುದು.

Exit mobile version