ಬೆಂಗಳೂರು: ಒಳಗೊಳಗೇ ಇದ್ದ ಸ್ಯಾಂಡಲ್‌ವುಡ್ ಜಗಳ ಬೀದಿಗೆ ಬಂದಿದ್ದಲ್ಲದೆ, ಕೋರ್ಟ್ ಮೆಟ್ಟಿಲೇರಿದೆ. ನಟ ಕಿಚ್ಚ ಸುದೀಪ್ (Kichcha Sudeep) ಹಾಗೂ ನಿರ್ಮಾಪಕ ಎಂ.ಎನ್. ಕುಮಾರ್ ನಡುವಿನ ಸಂಘರ್ಷ ತಾರಕಕ್ಕೇರಿದೆ. ಮಧ್ಯಸ್ಥಿಕೆ ಮೇಲೆ ನಂಬಿಕೆ ಇದೆ ಮಾತುಕತೆಯಲ್ಲಿ ಬಗೆಹರಿಸಿಕೊಳ್ಳೋಣ ಎಂದು ಹೇಳುತ್ತಿದ್ದ ಕುಮಾರ್ ಸೋಮವಾರ ಫಿಲ್ಮ್ ಛೇಂಬರ್ ಎದುರು ಧರಣಿ ಕುಳಿತಿದ್ದರು. ಅವರ ಬೆನ್ನಿಗೆ ನಿರ್ಮಾಪಕರು ಗಟ್ಟಿಯಾಗಿ ನಿಂತಿದ್ದಾರೆ. ಇದೇ ವೇಳೆ ಕ್ರೇಜಿಸ್ಟಾರ್ ರವಿಚಂದ್ರನ್ (Crazy Star Ravichandran) ಎಂಟ್ರಿ ಕೊಟ್ಟಿದ್ದು, ನಿರ್ಮಾಪಕ ಕುಮಾರ್‌ಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಒಂದು ಗಂಟೆ ಮಾತುಕತೆ ಬಳಿಕ ಧರಣಿಯನ್ನು ವಾಪಸ್ ಪಡೆಯಲಾಗಿದ್ದು, ಈಗ ಸಮಸ್ಯೆಯ ಚಂಡು ಸೆಂಚುರಿ ಸ್ಟಾರ್ ಶಿವರಾಜಕುಮಾರ್ (Century Star Shivarajkumar) ಅಂಗಳಕ್ಕೆ ತಲುಪುವ ಎಲ್ಲ ಸಾಧ್ಯತೆಗಳೂ ಇವೆ.
ಎರಡು ದಿನಗಳಿಂದ ಫಿಲ್ಮ್ ಛೇಂಬರ್ ಎದುರು ಧರಣಿ ನಡೆಸುತ್ತಿದ್ದ ಎಂ.ಎನ್. ಕುಮಾರ್ ಅವರಿಗೆ ಮಂಗಳವಾರ ಸಾರಾ ಗೋವಿಂದ್ ಸೇರಿದಂತೆ 20ಕ್ಕೂ ಹೆಚ್ಚು ಮಂದಿ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಎಲ್ಲರೂ ಸಹ ಸುದೀಪ್ ಈ ವಿಷಯದಲ್ಲಿ ಕೋರ್ಟ್‌ಗೆ ಹೋಗಿದ್ದು ಸರಿಯಲ್ಲ. ಎಲ್ಲರೂ ಕುಳಿತು ಮಾತನಾಡಿಕೊಳ್ಳಬೇಕಿತ್ತು. ಈ ರೀತಿಯ ನಿರ್ಧಾರ ಒಳ್ಳೆಯದಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ಈ ವಿಷಯವಾಗಿ ಮತ್ತೊಬ್ಬ ನಿರ್ಮಾಪಕರಾದ ರಮೇಶ್ ಯಾದವ್ ಮಾತನಾಡಿ, ಸುದೀಪ್ ಅವರು ತಮಗೆ ಬಾಕಿ ಹಣವನ್ನು ನೀಡಬೇಕಾಗಿತ್ತು. ಆ ಹಣವನ್ನು ತಾವು ನಿರ್ಮಾಪಕ ಎಂ.ಎನ್. ಕುಮಾರ್ ಅವರ ಬಳಿ 2009ರಲ್ಲಿ ಪಡೆದಿದ್ದೇನೆ. ಆಗ ನಾನು ಅವರಿಗೆ ಹಣ ಪಡೆದ ಬಗ್ಗೆ ಪತ್ರದ ಮೂಲಕ ದೃಢೀಕರಣವನ್ನೂ ಬರೆದುಕೊಟ್ಟಿದ್ದೆ. ಸುದೀಪ್ ಅವರಿಗೆ ಮುಂಗಡವಾಗಿ ನೀಡಿದ್ದ ಸಂಪೂರ್ಣ ಹಣವನ್ನು ಎಂ.ಎನ್. ಕುಮಾರ್ ಅವರಿಂದ ಪಡೆದುಕೊಂಡಿದ್ದೇನೆ. ಹೀಗಾಗಿ ಇನ್ನು ಸುದೀಪ್ ಅವರಿಗಾಗಲಿ, ಕುಮಾರ್ ಅವರಿಗಾಗಲೀ, ಸುದೀಪ್ ನಟನೆಯ ವಿಷಯವಾಗಲಿ ನನಗೆ ಸಂಬಂಧ ಇರುವುದಿಲ್ಲ ಎಂಬುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಅವರು ದಾಖಲೆಯನ್ನೂ ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ: Salaar Movie : ಅಮೆರಿಕದಲ್ಲಿ ದಾಖಲೆ ಬರೆಯಲಿದೆ ಪ್ರಭಾಸ್‌ನ ಸಲಾರ್; ಶುರುವಾಗಿದೆ 1979 ಲೆಕ್ಕಾಚಾರ!
ಸುದೀಪ್ ಮೇಲೆ ನಿರ್ಮಾಪಕರು ಕೆಂಡ; ಇಲ್ಲಿದೆ ನೋಡಿ ವಿಡಿಯೊ
ನಿರ್ಮಾಪಕರಾದ ರಮೇಶ್ ಯಾದವ್ ಬಿಡುಗಡೆ ಮಾಡಿದ ಪತ್ರವು ರಮೇಶ್ ಯಾದವ್ ಮೂವೀಸ್ ಎಂಬ ಲೆಟರ್‌ಹೆಡ್‌ನಲ್ಲಿದ್ದು, 10-07-2009ರ ದಿನಾಂಕವು ಪತ್ರದಲ್ಲಿ ನಮೂದಾಗಿದೆ. ಆದರೆ, ಈ ಪತ್ರದ ಬಗ್ಗೆಯಾಗಲಿ, ಅವರ ಹೇಳಿಕೆ ಬಗ್ಗೆ ಆಗಲಿ ಸುದೀಪ್ ಇನ್ನೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.
ಸಾರಾ ಗೋವಿಂದ್ – ಯೋಗಿ ದ್ವಾರಕೀಶ್ ಸಾಥ್
ಎರಡನೇ ದಿನವೂ ಧರಣಿ ಮುಂದುವರಿಸಿದ್ದ ಕುಮಾರ್ ಮತ್ತುವರ ತಂಡಕ್ಕೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ನಿರ್ಮಾಪಕರು ಸಾಥ್ ನೀಡಿದರು. ಅದರಲ್ಲೂ ಹಿರಿಯ ನಿರ್ಮಾಪಕ ಹಾಗೂ ಫಿಲ್ಮ್ ಚೇಂಬರ್‌ನ ಮಾಜಿ ಅಧ್ಯಕ್ಷ ಸಾರಾ ಗೋವಿಂದ್ ಹಾಗೂ ದ್ವಾರಕೀಶ್ ಪುತ್ರ ಯೋಗಿ ದ್ವಾರಕೀಶ್ ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಸಾರಾ ಗೋವಿಂದ್, ಚಿತ್ರರಂಗ ನಮ್ಮ ಕುಟುಂಬ ಇದ್ದಂತೆ. ರನ್ನ ಸಿನಿಮಾದ ಹಣದ ವಿಚಾರವಾಗಿ ನಾನೇ ಇಬ್ಬರನ್ನೂ ಕರೆಸಿ ಮಾತನಾಡಿದ್ದೆ. ಸುದೀಪ್ ಅವರು ಎರಡು ಕೋಟಿ ಮೂವತೈದು ಲಕ್ಷ ರೂಪಾಯಿ ಕೊಟ್ಟಿದ್ದಕ್ಕೆ ನಾನೇ ಸಾಕ್ಷಿ. ಇಂತಹ ಸಮಸ್ಯೆಗಳ ಬಂದಾಗ ಸಂಧಾನ ಸಮಿತಿಯನ್ನು ನೋಡಬೇಕು. ದೊಡ್ಡಣ್ಣ, ಕೆ.ವಿ. ಚಂದ್ರಶೇಖರ್, ಮುನಿರತ್ನ ಎಲ್ಲರೂ ಇದ್ದಾರೆ. ಈಗಲೂ ಕಾಲ ಮಿಂಚಿಲ್ಲ. ಸುದೀಪ್ ಅವರು ಕೇಸ್ ವಾಪಸ್ ಪಡೆದು ಸಂಧಾನ ಸಮಿತಿಯ ಮೂಲಕವೇ ಬಗೆಹರಿಸಿಕೊಳ್ಳಲಿ ಎಂದು ಕಿವಿಮಾತು ಹೇಳಿದ್ದಾರೆ.
ರವಿಚಂದ್ರನ್ ಹೇಳಿದ್ದೇನು? ಇಲ್ಲಿದೆ ನೋಡಿ ವಿಡಿಯೊ
ರವಿಚಂದ್ರನ್ ಭೇಟಿಯಾದ ನಿರ್ಮಾಪಕರ ತಂಡ
ಈ ವಿದ್ಯಮಾನಗಳ ನಡುವೆಯೇ ಸುಮಾರು 15ಕ್ಕೂ ಹೆಚ್ಚು ನಿರ್ಮಾಪಕರು ಹಿರಿಯ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರನ್ನು ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಭೇಟಿ ಮಾಡಿದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿ ಮಾತನಾಡಿದರು. ಈ ವೇಳೆ ಮಾತನಾಡಿದ ರವಿಚಂದ್ರನ್, ಈ ಘಟನೆಯಿಂದ ಸುದೀಪ್‌ಗೆ ನೋವಾಗಿರುವುದು ನಿಜ. ನಾನು ಯೋಚನೆ ಮಾಡಬೇಕು. ನಾನು ಬರೀ ಮಾತನ್ನು ನಂಬಲ್ಲ. ದಾಖಲೆ ನೋಡಿದ ನಂತರ ಸುದೀಪ್ ಬಳಿ ಮಾತನಾಡಬೇಕೋ ಬೇಡವೋ ಎಂಬುದನ್ನು ಯೋಚನೆ ಮಾಡುತ್ತೇನೆ ಎಂದು ಹೇಳಿದರು.
ರವಿಚಂದ್ರನ್ ನೀಡಿದ ವಾರ್ನಿಂಗ್ ಇದು!
ಗಂಡ ಹೆಂಡ್ತಿ ಜಗಳ ಇದ್ದಂಗೆ ಇದು. ಬೀದಿಗೆ ಬಂದಿದೆ ಏನು ಮಾಡೋಕೆ ಆಗಲ್ಲ. ಇಷ್ಟು ದಿನ ತಪ್ಪಿಸಿಕೊಂಡು ಓಡಾಡುತ್ತಿದ್ದೆ. ಈ ವಿಷಯದ ಬಗ್ಗೆ ರಿಯಾಕ್ಟ್ ಮಾಡುವುದು ಬೇಡ ಅಂತ ಸುಮ್ಮನಿದ್ದೆ. ಆದರೆ, ಈಗ ನನ್ನ ಮಗನ ಮೇಲೆ ಆರೋಪ ಬಂದಿದೆ. ಅಷ್ಟು ಸುಲಭವಾಗಿ ಬಿಟ್ಟುಕೊಡಲ್ಲ ನಾನು. ಆ ಕುಮಾರ್ ಬರಲಿ ಎಂದು ರವಿಚಂದ್ರನ್ ಗುಡುಗಿದ್ದಾರೆ.
ಕುಮಾರ್ ಮಾತಿನಿಂದ ಸುದೀಪ್‌ಗೆ ಹರ್ಟ್ ಆಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ದಿನ ಬೆಳಗ್ಗೆ ಆದರೆ ಇದೇ ಶುರುವಾಗಿದೆ. ದಾಖಲೆಯನ್ನು ನಾಳೆ ಕೊಡುತ್ತೇನೆ ಎಂದರೆ ಹೇಗೆ? ದಾಖಲೆ ಮುಂದಿಟ್ಟು ಮಾತನಾಡಬೇಕು. ಮನಸ್ಥಿತಿ ಮತ್ತು ಪರಿಸ್ಥಿತಿ ಎರಡನ್ನೂ ಬ್ಯಾಲೆನ್ಸ್ ಮಾಡಬೇಕು. ನೀವು ನೋಡಿ ಮಾತನಾಡಿ ಅಂತ ಬಂದು ಹೇಳಿದ್ದಾರೆ. ಫಸ್ಟ್ ಪರಿಸ್ಥಿತಿಯನ್ನು ಕೂಲ್ ಮಾಡೋಣ. ತೊಂದರೆ ಏನಂತ ಗೊತ್ತಿಲ್ಲದೇ ಸಪೋರ್ಟ್ ಮಾಡೋಕೆ ಆಗಲ್ಲ. ನಾನು 30ವರ್ಷಗಳ ಹಿಂದೆ ಒಂದು ಪುಸ್ತಕ ಮಾಡಿಕೊಟ್ಟಿದ್ದೆ. ಹೇಗೆ ಅಸೋಸಿಯೇಷನ್ ಮಾಡಬೇಕು ಅಂತ. ಅದನ್ನು ಯಾರೂ ಫಾಲೋ ಮಾಡಿಲ್ಲ. ಈಗ ಅನುಭವಿಸುತ್ತಿದ್ದಾರೆ. ನಾನು ಆರೋಪ ಮಾಡಿಲ್ಲ ಮನವಿ ಮಾಡಿದೆ ಅಂತ ಕುಮಾರ್ ಹೇಳುತ್ತಾರೆ. ಆದರೆ, ಸುದೀಪ್‌ಗೆ ಬೇಜಾರು ಆಗಿದೆ. ಜತೆಗೆ ಕುಳಿತು ಊಟ ಮಾಡಿದವರು ಈಗ ಬೆರಳು ತೋರಿಸಿ ಮಾತನಾಡುತ್ತಿದ್ದಾರೆ. ಇದು ಹರ್ಟ್ ಆಗಲ್ಲವೇ? ಎರಡು ಕಡೆ ಸಹನೆ ಮೀರಿದೆ ಎಂದು ರವಿಚಂದ್ರನ್ ಹೇಳಿದ್ದಾರೆ.
ಕುಮಾರ್ ಧರಣಿ ಮಾಡುತ್ತಿದ್ದು, ಮೊದಲು ಅಲ್ಲಿಂದ ಏಳಲಿ. ಸುದೀಪ್‌ನ ನಾನು ಕರಿಸೋದಿಲ್ಲ. ನಾನೇ ಹೋಗಿ ಮಾತನಾಡುತ್ತೇನೆ. ಅದೂ ನನಗೆ ಮಾತನಾಡಬೇಕು ಎಂದು ಅನ್ನಿಸಿದರಷ್ಟೆ. ಸುದೀಪ್ ಸರಿ ಅನ್ನಿಸಿದರೆ ಮಾತ್ರ ಹೋಗಿ ಮಾತನಾಡುತ್ತೇನೆ. ಕುಮಾರ್‌ದು ತಪ್ಪು ಅಂದರೆ ಡೈರೆಕ್ಟ್ ಆಗಿ ಬೈತೀನಿ ಎಂದು ರವಿಚಂದ್ರನ್ ಹೇಳಿದ್ದಾರೆ.
ಇದನ್ನೂ ಓದಿ: Kichcha Sudeep : ಕೇಳಿದ ತಕ್ಷಣ ಹಣ ಕೋಡೋಕೆ ಸುದೀಪ್ ಚಿಕ್ಕ ಹುಡುಗ ಅಲ್ಲ!
ಶಿವಣ್ಣ ಹೆಡ್ ಆಫ್ ದಿ ಡಿಪಾರ್ಟ್‌ಮೆಂಟ್
ಚಿತ್ರರಂಗದಲ್ಲಿ ಏನೇ ಗೊಂದಲಗಳಿದ್ದರೂ ರಾಜಕುಮಾರ್ ಫ್ಯಾಮಿಲಿ ಬಗೆಹರಿಸುತ್ತದೆ. ಈಗ ಇದಕ್ಕೆಲ್ಲ ಶಿವಣ್ಣ ಹೆಡ್ ಆಫ್ ದಿ ಡಿಪಾರ್ಟ್ಮೆಂಟ್. ನಿರ್ಮಾಪಕರು ಶಿವಣ್ಣ ಅವರನ್ನು ಭೇಟಿ ಮಾಡಿ ಮಾತಾಡಲಿ. ಆದರೆ, ಕುಮಾರ್ ಧರಣಿಯಿಂದ ಎದ್ದೇಳಬೇಕು ಅಷ್ಟೇ ಎಂದು ರವಿಚಂದ್ರನ್ ಹೇಳಿದ್ದರು. ಬಳಿಕ ಮಾತುಕತೆ ಆಡಿದ ಮೇಲೆ ಕುಮಾರ್ ಧರಣಿಯನ್ನು ಕೈಬಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಶಿವರಾಜಕುಮಾರ್ ಅವರನ್ನು ಬುಧವಾರ ಭೇಟಿ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಶಿವಣ್ಣ ಈ ವೇಳೆ ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂಬುದರ ಮೇಲೆ ಇಡೀ ಬೆಳವಣಿಗೆ ನಿಂತಿದೆ.