Site icon Vistara News

ರಾಯಣ್ಣ ಎಂದಿಗೂ ಜಾತಿಗೆ ಸೀಮಿತರಾದವರಲ್ಲ; ತರಳಬಾಳು ಜಗದ್ಗುರು ಶ್ರೀ ಅಭಿಮತ

ತರಳಬಾಳು ಜಗದ್ಗುರು

ಬೆಳಗಾವಿ: ಬೆಳಗಾವಿ ಮೊಕ್ಕಾಂನಲ್ಲಿರುವ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಶನಿವಾರ (ನ.12) ಕ್ರಾಂತಿವೀರ, ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ ಸ್ಥಳ ಮತ್ತು ಸಮಾಧಿ ಸ್ಥಳವಾದ ನಂದಗಡದಲ್ಲಿ ಗೌರವ ಪ್ರಾರ್ಥನೆ ಸಲ್ಲಿಸಿದರು.

ತರಳಬಾಳು ಜಗದ್ಗುರು ಶ್ರೀಗಳು

ಈ ವೇಳೆ ಮಾತನಾಡಿದ ಶ್ರೀಗಳು, ರಾಯಣ್ಣ ತನ್ನ ಹೋರಾಟ ಮತ್ತು ತ್ಯಾಗದಿಂದ ಮುಂದಿನ ಪೀಳಿಗೆಗೆ ಸ್ಫೂರ್ತಿಯಾದವರು. ಕಿತ್ತೂರು ಸಾಮ್ರಾಜ್ಯದ ಮೇಲಿನ ಅವರ ನಿರಂತರ ಪ್ರೀತಿ ಮತ್ತು ಚೆನ್ನಮ್ಮ ರಾಣಿಗೆ ನಿಷ್ಠೆಯ ಸೇವೆ, ಆದರ್ಶ, ಸ್ವಾತಂತ್ರ್ಯ ಹೋರಾಟವು ಜನಮಾನಸದಲ್ಲಿ ಸದಾ ಉಳಿದಿದೆ ಎಂದರು.

ಬ್ರಿಟಿಷರು ತಮ್ಮ ಕುಖ್ಯಾತ ಆಡಳಿತದಿಂದ “ಡಾಕ್ಟ್ರಿನ್ ಆಫ್ ಲ್ಯಾಪ್ಸ್” ಅನ್ನು ಅನುಸರಿಸಿ ಕಿತ್ತೂರು ರಾಜ್ಯವನ್ನು ಸ್ವಾಧೀನಪಡಿಸಿಕೊಳ್ಳಲು ಬಯಸಿದ್ದರು. ಅವರ ವಿರುದ್ಧ ಹೋರಾಡಿ ನೇಣಿಗೆ ಕೊರಳೊಡ್ಡಿದ ಸಂದರ್ಭದಲ್ಲಿಯೂ ಸಂಗೊಳ್ಳಿ ರಾಯಣ್ಣ, “ನನ್ನ ಕೊನೆ ಆಸೆ ಏನೆಂದರೆ, ಮತ್ತೆ ನಾನು ಈ ದೇಶದಲ್ಲಿ ಜನಿಸಿ ಬ್ರಿಟಿಷರ ವಿರುದ್ಧ ಹೋರಾಟವನ್ನು ಮುಂದುವರಿಸುವುದು ಹಾಗೂ ಬ್ರಿಟೀಷರನ್ನು ಹೊಡೆದೋಡಿಸಲು ಮನೆಗೊಬ್ಬ ರಾಯಣ್ಣ ಹುಟ್ಟಲಿ.”ಎಂದು ಹೇಳಿರುವುದು ರಾಯಣ್ಣನ ಪರಾಕ್ರಮ ಮತ್ತು ದೃಢಸಂಕಲ್ಪದ ದ್ಯೋತಕವಾಗಿದೆ. ರಾಯಣ್ಣನಂತಹ ಸ್ವಾತಂತ್ರ್ಯ ಹೋರಾಟಗಾರರು ಎಂದಿಗೂ ಜಾತಿಗೆ ಸೀಮಿತರಾದವರಲ್ಲ. ಅವರು ರಾಷ್ಟದ ಆಸ್ತಿ ಮುಂದಿನ ಪೀಳಿಗೆಗೆ ಸದಾ ಆದರ್ಶಪ್ರಾಯವಾದವರು ಎಂದು ಶ್ರೀಗಳು ಅಭಿಪ್ರಾಯಪಟ್ಟರು.

ಇದನ್ನೂ ಓದಿ | Weather Report | ಮುಂದಿನ 24 ಗಂಟೆಯಲ್ಲಿ ಭಾರಿ ಮಳೆ; ಕೊಡಗು, ಮೈಸೂರು ಸೇರಿ ಇನ್ನೂ 3 ಕಡೆ ಯೆಲ್ಲೋ ಅಲರ್ಟ್‌

Exit mobile version