Site icon Vistara News

Sathish Jarakiholi | ಸೂಲಿಬೆಲೆ ಜತೆ ಚರ್ಚೆಗೆ ರೆಡಿ; ಮೊದಲು ಚಿನ್ನದ ರಸ್ತೆ ಎಲ್ಲಿದೆ ಹುಡುಕೋಣ: ಸತೀಶ್‌ ಜಾರಕಿಹೊಳಿ

satish-jarakiholi-says-bjp-should-gratitude-him-for-finding-error

ಬೆಳಗಾವಿ: ಹಿಂದು ಪದದ ಬಗ್ಗೆ ಚರ್ಚೆಗೆ ಚಿಂತಕ ಚಕ್ರವರ್ತಿ ಸೂಲಿಬೆಲೆ ಹಾಕಿರುವ ಸವಾಲಿಗೆ ನಾನು ತಯಾರಿದ್ದೇನೆ. ಈ ನಡುವೆ ಅವರು ಕಳೆದ ೧೦ ವರ್ಷದಿಂದ ನೀಡಿರುವ ಹೇಳಿಕೆಯನ್ನು ಸಹ ಪರಿಶೀಲನೆ ನಡೆಸಲಾಗುತ್ತಿದೆ. ಚಿನ್ನದ ರಸ್ತೆ, ಮಂಗಳೂರಿನಿಂದ ಬೆಂಗಳೂರಿಗೆ ಬಂದು ಕೆಲಸ ಮುಗಿಸಿ ರಾತ್ರಿ ವಾಪಸ್‌ ಮಂಗಳೂರಿಗೆ ಬಂದು ಊಟ ಮುಗಿಸುವ ಯೋಜನೆಗಳೆಲ್ಲವೂ ಚರ್ಚೆಯಾಗಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Sathish Jarakiholi) ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಕ್ರವರ್ತಿ ಸೂಲಿಬೆಲೆ ಅವರು ಈ ಹಿಂದೆ ನೀಡಿದ್ದ ಹೇಳಿಕೆಗಳನ್ನು ನಾವು ಪರಿಶೀಲನೆ ನಡೆಸುತ್ತಿದ್ದೇವೆ. ಅವರು ಹೇಳಿದ್ದೆಲ್ಲವೂ ಎಲ್ಲಿ ಆಗಿದೆ ಎಂಬುದನ್ನು ನಾವು ನೋಡುತ್ತಿದ್ದೇವೆ. ಡಾಲರ್‌ ದರದ ಬಗ್ಗೆ ನೋಡುತ್ತಿದ್ದೇವೆ. ಆಸ್ಪತ್ರೆಗಳಲ್ಲಿ ಲ್ಯಾಪ್‌ಟಾಪ್ ಉಪಯೋಗಿಸಿ ರೋಗಿಗಳ ಕಂಡೀಷನ್ ನೋಡುವಂತಹ ಸ್ಥಿತಿ ಎಲ್ಲಿದೆ? ಎಂಬುದನ್ನೂ ಹುಡುಕುತ್ತಿದ್ದೇವೆ. ಇದೇ ರೀತಿಯಾಗಿ ಅವರು ಇನ್ನೂ ಬಹಳಷ್ಟು ಸಂಗತಿಗಳನ್ನು ಹೇಳಿದ್ದಾರೆ. ಅದೆಲ್ಲವನ್ನೂ ನಾವು ಹುಡುಕುತ್ತಿದ್ದೇವೆ. ಅವರು ಹೇಳಿದ್ದರಲ್ಲಿ ಯಾವುದೇ ಒಂದು ಆಗಿದೆ ಎಂದಾದರೂ ಹೇಳಿದರೂ ನಾನು ಅವರ ಜತೆಗೆ ಚರ್ಚೆಗೆ ಇಳಿಯುತ್ತೇನೆ ಎಂದು ಹೇಳಿದರು.

ಅಂತಹ ವ್ಯಕ್ತಿ ಜತೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ ಎನ್ನುವುದು ನನ್ನ ಹಾಗೂ ಕಾರ್ಯಕರ್ತರ ಅಭಿಪ್ರಾಯವಾಗಿದೆ. ನಮ್ಮ ಲೆಕ್ಕದಲ್ಲಿ ರಾಜ್ಯದಲ್ಲಿರುವ ಸುಳ್ಳಿನ ಯೂನಿವರ್ಸಿಟಿಯ ಕುಲಪತಿ ಅವರು. ಅಂಥ ವ್ಯಕ್ತಿ ಜತೆ ನಾವು ಏನು ಚರ್ಚೆ ಮಾಡೋದಾ ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಕೊನೇ ಪಕ್ಷ ಶೇಕಡಾ ೫೦ರಷ್ಟು ಸುಳ್ಳು ಹೇಳುವವರಿದ್ದರೂ ನಾನು ಚರ್ಚೆಗೆ ಒಪ್ಪುತ್ತಿದ್ದೆ. ಈ ಗಿರಾಕಿ ನೂರಕ್ಕೆ ಸಾವಿರ ಪಟ್ಟು ಸುಳ್ಳು ಹೇಳುತ್ತಾರೆ. ಹೀಗಾಗಿ ಇಂಥವರ ಜತೆ ನಾನ್ಯಾಕೆ ಚರ್ಚೆ ಮಾಡಿ ಸಮಯ ಹಾಳು ಮಾಡಿಕೊಳ್ಳಲಿ ಎಂಬ ನಿರ್ಧಾರಕ್ಕೆ ಬಂದಿದ್ದೇನೆ.

ಇದನ್ನೂ ಓದಿ | Karnataka Politics | ಕುಮಾರಸ್ವಾಮಿ ನಿತ್ಯ ನನ್ನ ಜತೆ ಸಂಪರ್ಕದಲ್ಲಿದ್ದಾರೆ, ನಾನು ಬಿಜೆಪಿ ಬಿಡಲ್ಲ: ರಮೇಶ್‌ ಜಾರಕಿಹೊಳಿ

Exit mobile version