ಬೆಂಗಳೂರು: ಬ್ರಾಹ್ಮಣ ಸಮುದಾಯದ (Brahmin community) ಸಂಘಟನೆಗೆ ದೀರ್ಘಕಾಲದಿಂದಲೂ ಶ್ರಮಿಸುತ್ತಿರುವ ಸಿರಿನಾಡು ಮಹಾಸಭಾದ ಕಾರ್ಯವು ಪ್ರಶಂಸಾರ್ಹವಾಗಿದೆ. ಈ ಸಮುದಾಯದ ಶೈಕ್ಷಣಿಕ, ಆರ್ಥಿಕ ಮತ್ತು ಔದ್ಯೋಗಿಕ ಪ್ರಗತಿಗೆ ಸಹಕಾರ ನೀಡಲು ತಾವು ಸಿದ್ಧ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ಸಿರಿನಾಡು ಮಹಾಸಭಾ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಸಚಿವರು, ಇಂದು ನಾಡಿನ ಉನ್ನತ ಶೈಕ್ಷಣಿಕ ಕ್ಷೇತ್ರದಲ್ಲಿ ಹಲವು ಸುಧಾರಣೆಗಳು ಆಗಿವೆ. ವ್ಯವಸ್ಥೆಯನ್ನು ಸುಧಾರಿಸಲು ನಿರಂತರವಾಗಿ ಹಲವು ಉಪಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ. ಈ ನಿಟ್ಟಿನಲ್ಲಿ ಎದುರಾಗುವ ರಾಜಕೀಯ ಪ್ರೇರಿತ ಆರೋಪಗಳಿಗೆ ತಾವು ಎದೆಗುಂದುವುದಿಲ್ಲ ಎಂದು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು.
ರಾಜ್ಯದಲ್ಲಿ ಈಗ ಎನ್ಇಪಿ ಜಾರಿ ಆಗಿದೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತವು ಮುಂದಿನ ಇಪ್ಪತ್ತೈದು ವರ್ಷಗಳಲ್ಲಿ ಹೊಸ ಎತ್ತರವನ್ನು ತಲುಪಲಿದೆ. ಇಂದು ಜಾಗತಿಕ ಮಟ್ಟದಲ್ಲಿ ಸ್ಪರ್ಧೆಯನ್ನು ಎದುರಿಸುವುದು ಅನಿವಾರ್ಯವಾಗಿದೆ. ಸಿರಿನಾಡು ಬ್ರಾಹ್ಮಣ ಸಮುದಾಯವು ಪ್ರತಿಭೆಗೆ ಮನ್ನಣೆ ನೀಡುವ ಸತ್ಸಂಪ್ರದಾಯವನ್ನು ಹೊಂದಿರುವುದು ಸ್ವಾಗತಾರ್ಹವಾಗಿದೆ. ಯಾವುದೇ ಸಮುದಾಯಕ್ಕೆ ಸಂಸ್ಕೃತಿಯ ಮಹತ್ತ್ವ ಗೊತ್ತಿರಬೇಕು. ಆಗ ಮಾತ್ರ ಸವಾಲುಗಳಿಗೆ ಉತ್ತರ ಕಂಡುಕೊಳ್ಳುವ ಆತ್ಮವಿಶ್ವಾಸ ಬರುತ್ತದೆ ಎಂದು ಸಚಿವ ಅಶ್ವತ್ಥನಾರಾಯಣ ಹೇಳಿದರು.
ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್, ಸಿರಿನಾಡು ಮಹಾಸಭಾದ ಮುಖಂಡರಾದ ಸುದರ್ಶನ, ಸುಬ್ರಹ್ಮಣ್ಯ, ರಘುನಾಥ್, ಶಶಿಧರ ಮುಂತಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ | ಕಲೆಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಪ್ರೋತ್ಸಾಹ ಅಗತ್ಯ: ಸಚಿವ ಅಶ್ವತ್ಥನಾರಾಯಣ