Site icon Vistara News

Recruitment Delay: ನೇಮಕಾತಿ ವಿಳಂಬ; ದಯಾಮರಣ ಕೋರಿ ರಾಜ್ಯಪಾಲರಿಗೆ ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳ ಪತ್ರ!

ಬೆಂಗಳೂರು: ಮೂರು ವರ್ಷ ಕಳೆದರೂ ರಾಜ್ಯ ಸರ್ಕಾರ ನೇಮಕಾತಿ ಆದೇಶ ಪತ್ರ ಕೊಡದ ಹಿನ್ನೆಲೆಯಲ್ಲಿ ಬೇಸತ್ತ ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳು, ದಯಾಮರಣಕ್ಕೆ ಅನುಮತಿ ನೀಡುವಂತೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರಿಗೆ ಮನವಿ ಮಾಡಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಸಿಎಂ, ಡಿಸಿಎಂ, ಉನ್ನತ ಶಿಕ್ಷಣ ಸಚಿವರ ಹೆಸರನ್ನು ಟ್ಯಾಗ್‌ ಮಾಡಿ ನೇಮಕಾತಿ ಆದೇಶ ಪತ್ರ ಶೀಘ್ರ ನೀಡಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ.

ದಯಾಮರಣ ಕೋರಿ ಅಭ್ಯರ್ಥಿಯೊಬ್ಬರು ರಾಜ್ಯಪಾಲರಿಗೆ ಬರೆದಿರುವ ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. 2021ರಲ್ಲಿ ಆಯ್ಕೆಯಾದ 1208 ಸಹಾಯಕ ಪಾಧ್ಯಾಪಕ ಅಭ್ಯರ್ಥಿಗಳಿಗೆ ಮೂರು ವರ್ಷ ಕಳೆದರೂ ನೇಮಕಾತಿ ಆದೇಶ ಪತ್ರ ಸಿಕ್ಕಿಲ್ಲ. ಹೀಗಾಗಿ ಮಾನಸಿಕವಾಗಿ ‌ಕುಗ್ಗಿ ಹೋಗಿರುವ ಅಭ್ಯರ್ಥಿಯೊಬ್ಬರು, ರಾಜ್ಯಪಾಲರಿಗೆ ಪತ್ರ ಬರೆದು ದಯಾಮರಣ ಕೋರಿದ್ದಾರೆ.

ಪತ್ರದಲ್ಲಿ ಏನಿದೆ?

2021ರ ಸೆ.30ರಂದು ಆರಂಭವಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯ ಅಂತಿಮ ಆಯ್ಕೆಪಟ್ಟಿಯು 2023ರ ನ.4ರಂದು ವಿಶೇಷ ರಾಜ್ಯಪತ್ರದಲ್ಲಿ ಅಧಿಕೃತವಾಗಿ ಪ್ರಕಟವಾಗಿತ್ತು. ನೇಮಕಾತಿ ಪ್ರಕ್ರಿಯೆ ಆರಂಭವಾಗಿ ಈಗಾಗಲೇ ಮೂರು ವರ್ಷಗಳಾಗಿದ್ದು, ನೇಮಕಾತಿ ಆದೇಶದ ವಿಳಂಬದಿಂದಾಗಿ ಮತ್ತು ಸ್ಥಳನಿಯುಕ್ತಿ ಸಿಗದ ಕಾರಣವಾಗಿ ಮಾನಸಿಕವಾಗಿ ಕುಗ್ಗಿಹೋಗಿದ್ದು, ಪ್ರತಿಕ್ಷಣವೂ ಮಾನಸಿಕ ಹಿಂಸೆಯನ್ನು ಅನುಭವಿಸುತ್ತಿದ್ದೇನೆ. ಜತೆಗೆ ಯಾವುದೇ ಉದ್ಯೋಗವಿಲ್ಲದೆ, ನಾನು ಮತ್ತು ನನ್ನ ಕುಟುಂಬವು ಜೀವನ ಸಾಗಿಸುವುದು ದುಸ್ತರವಾಗಿದೆ.

ಇದನ್ನೂ ಓದಿ | KSRTC Ticket Price Hike: ಸಾರಿಗೆ ಬಸ್‌ ಪ್ರಯಾಣಿಕರಿಗೆ ಶಾಕ್‌; ಟಿಕೆಟ್ ದರ ಏರಿಕೆ ಸುಳಿವು ನೀಡಿದ KSRTC ಅಧ್ಯಕ್ಷ!

ಎಲ್ಲಾ ಪದವಿಗಳನ್ನು ಹೊಂದಿದ್ದರೂ ಸರ್ಕಾರದಿಂದ ಆದೇಶ ಪ್ರತಿ ಸಿಗದಿರುವುದು ಮತ್ತಷ್ಟು ಅತಂತ್ರಗೊಳಿಸಿದೆ. ಕಷ್ಟಪಟ್ಟು ಓದಿ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆಯ್ಕೆಯಾಗಿ, ಅರ್ಹನಾದರೂ ಸರ್ಕಾರದ ವಿಳಂಬ ಧೋರಣೆಯಿಂದ ಬೇಸತ್ತು ಹೋಗಿದ್ದೇನೆ. ಆತ್ಮಹತ್ಯೆ ಮಾಡಿಕೊಂಡು ಮನೆಯವರಿಗೆ, ಸಂಬಂಧಿಕರಿಗೆ, ನಂಬಿಕೊಂಡವರಿಗೆ ಅವಮಾನ ಮಾಡುವ ಬದಲು ಮತ್ತು ಸರ್ಕಾರದ ವತಿಯಿಂದ ದಿನಂಪ್ರತಿ ಒಂದೊಂದು ಕಾರಣವನ್ನು ಕೇಳುತ್ತಾ ಕೊರಗಿ ಉಸಿರುಬಿಡುವುದಕ್ಕಿಂತ ಮೊದಲು ದಾಯಾಳುಗಳಾದ ತಾವುಗಳು ದಯಾಮರಣವನ್ನು ಕರುಣಿಸಬೇಕೆಂದು ಕೋರುತ್ತೇನೆ ಎಂದು ಅಭ್ಯರ್ಥಿ ಮನವಿ ಮಾಡಿದ್ದಾರೆ.

ನೇಮಕಾತಿ ಆದೇಶ ಪತ್ರ ಶೀಘ್ರ ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಿರುವ ಅಭ್ಯರ್ಥಿಗಳು, ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿ ಎಂದು ಕೇಂದ್ರ ಸರ್ಕಾರವನ್ನು ಕೇಳುವ ನೀವು, ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡಿದ್ದರೂ ನೇಮಕಾತಿ ಆದೇಶ ಪತ್ರ ನೀಡಲು ವಿಳಂಬ ಮಾಡುತ್ತಿರುವುದು ಯಾಕೆ?, ದಯವಿಟ್ಟು ನೇಮಕಾತಿ ಪತ್ರ ನೀಡಿ, ಇಲ್ಲವೇ ದಯಾಮರಣಕ್ಕೆ ಅವಕಾಶ ಕೊಡಿ ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Exit mobile version