ಶಶಿಧರ ಮೇಟಿ, ಬಳ್ಳಾರಿ
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಬಂಧಿತರಾಗಿ ಜಾಮೀನು ಮೇಲೆ ಹೊರಬಂದಿರುವ ಜನಾರ್ದನ ರೆಡ್ಡಿ ಪಾಲುದಾರತ್ವದ ಓಬುಳಾಪುರಂ ಮೈನಿಂಗ್ ಕಂಪನಿ(OMC Mining Case) ಗಣಿಗಾರಿಕೆ ಆರಂಭಿಸಲು ಅನುಮತಿಗಾಗಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಆಂಧ್ರ ಸರ್ಕಾರವು ಇದಕ್ಕೆ ತಕರಾರು ಇಲ್ಲ ಎಂದಿರುವುದು ರೆಡ್ಡಿ ಸಹೋದರರ ವಲಯದಲ್ಲಿ ಮತ್ತೆ ಗಣಿಗಾರಿಕೆಯ ಆಶಾಭಾವ ಚಿಗುರೊಡೆಯುವಂತೆ ಮಾಡಿದೆ.
ಕರ್ನಾಟಕದ ಗಡಿಯನ್ನು ಒತ್ತುವರಿ ಮಾಡಿಕೊಂಡು, ಗುತ್ತಿಗೆ ಪ್ರದೇಶದ ಹೊರಗಡೆ ಗಣಿಗಾರಿಕೆ ಮಾಡಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಓಎಂಸಿ ಕಂಪನಿಯ ಅರಣ್ಯ ಪರವಾನಗಿ (FC – Forest clearence)ಯನ್ನು 2010ರಲ್ಲಿ ಅರಣ್ಯ ಇಲಾಖೆ ಅಮಾನತಿನಲ್ಲಿಟ್ಟಿತ್ತು. ಬಳಿಕ ರಾಜ್ಯದಲ್ಲಿ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಿಇಸಿಯು ಜಂಟಿ ಸಮೀಕ್ಷೆಗೆ ಸೂಚಿಸಿತ್ತು.
ಇದನ್ನೂ | ಮಂಗಳೂರಿನಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಅನುಮತಿ ಕಡ್ಡಾಯ
ಗಡಿ ಒತ್ತುವರಿಯಾಗಿಲ್ಲ ಎಂದ ಸರ್ವೇ ವರದಿ
ಇನ್ನು ಅಂತಾರಾಜ್ಯ ಗಡಿ ಒತ್ತುವರಿಗೆ ಸಂಬಂಧಿಸಿದಂತೆ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾದ ಮೂಲಕ ಜಂಟಿ ಸರ್ವೇಗೆ ಸೂಚಿಸಲಾಗಿತ್ತು. ಈ ಸಮೀಕ್ಷೆಯನ್ನು ಮಾಡಿರುವ ಕೇಂದ್ರ ಸರ್ವೇ ಇಲಾಖೆಯು ಗಣಿಗಾರಿಕೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದ ಗಡಿ ಒತ್ತುವರಿಯಾಗಿಲ್ಲ ಎಂದು ವರದಿಯಲ್ಲಿ ಪ್ರಸ್ತಾಪಿಸಿರುವುದರಿಂದ ಓಎಂಸಿ ಮೇಲಿನ ಆರೋಪದಲ್ಲಿ ಹುರುಳಿಲ್ಲದಂತಾಗಿದೆ. ಇದರಿಂದ ಕಂಪನಿಯ ಪಾಲುದಾರ ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್ ಸಿಗುವುದೇ ಎಂಬುವುದನ್ನು ಕಾದುನೋಡಬೇಕಾಗಿದೆ.
ಸರ್ವೇ ವರದಿಯಿಂದ ರೆಡ್ಡಿಗೆ ಬಲ
ಸರ್ವೇ ಆಫ್ ಇಂಡಿಯಾದ ವರದಿಯು ಓಎಂಸಿಗೆ ಆರಂಭಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ಆಧಾರ ಸಿಕ್ಕಂತಾಗಿದೆ. ಇನ್ನು ಕರ್ನಾಟಕ ಸರ್ಕಾರವು ಸರ್ವೇ ವರದಿಯನ್ನು ಒಪ್ಪಿಕೊಂಡಿದೆ. ಈ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ ಪಾಲುದಾರತ್ವದ ಓಎಂಸಿ ಕಂಪನಿಯು ನ್ಯಾಯವಾದಿ ಮೂಲಕ ಗಣಿಗಾರಿಕೆ ಆರಂಭಕ್ಕೆ ಅರ್ಜಿ ಹಾಕಿಕೊಂಡಿದೆ.
ತಕರಾರು ಇಲ್ಲ ಎಂದ ಸೀಮಾಂಧ್ರ ಸರ್ಕಾರ
ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ನ್ಯಾಯಾಲಯವು ಓಎಂಸಿ ಆಂಧ್ರಪ್ರದೇಶದ ವ್ಯಾಪ್ತಿಗೆ ಬರುವುದರಿಂದ ಈ ಬಗ್ಗೆ ಆಂಧ್ರ ಪ್ರದೇಶ ಸರ್ಕಾರದ ಅಭಿಪ್ರಾಯವನ್ನು ಕೇಳಿತ್ತು. ಆದರೆ ಅಲ್ಲಿನ ಸರ್ಕಾರವು ಓಎಂಸಿ ಆರಂಭಕ್ಕೆ ತಮ್ಮ ತಕರಾರು ಇಲ್ಲವೆಂದು ನ್ಯಾಯಾಲಯಕ್ಕೆ ತಿಳಿಸಿರುವ ಹಿನ್ನೆಲೆಯಲ್ಲಿ ಓಎಂಸಿ ಆರಂಭ ನಿರೀಕ್ಷೆಯನ್ನು ಹೆಚ್ಚಿಸಿದೆ. ಆದರೆ ಗಣಿಗಾರಿಕೆ ಆರಂಭಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶವೇ ಅಂತಿಮವಾಗಿದೆ.
ಸರ್ವೆ ವರದಿಯಲ್ಲಿ ದೋಷವಿದೆ ಎಂದ ಟಪಾಲ್ ಗಣೇಶ
ಇನ್ನೊಂದು ಕಡೆ ಅಂತಾರಾಜ್ಯ ಗಡಿ ಒತ್ತುವರಿ ವಿಷಯದಲ್ಲಿ ಆರಂಭದಿಂದಲೂ ಹೋರಾಟ ಮಾಡಿಕೊಂಡು ಬಂದಿರುವ ಟಿಎನ್‌ಆರ್ ಗಣಿ ಕಂಪನಿಯ ಟಪಾಲ್ ಗಣೇಶ ಅವರು, ಯಾವುದೇ ಕಾರಣಕ್ಕೆ ಓಎಂಸಿ ಆರಂಭವಾಗುವುದಿಲ್ಲ. ಸರ್ವೇ ಆಫ್ ಇಂಡಿಯಾದ ಸಮೀಕ್ಷೆ ವರದಿ ಸರಿಯಾಗಿಲ್ಲ, ಈ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ(ಐಎ) ಹಾಕಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ | ಕರ್ನಾಟಕದಲ್ಲಿ 3ನೇ ಮುಖ್ಯಮಂತ್ರಿ ಪ್ರತಿಷ್ಠಾಪನೆ ಕಸರತ್ತು ನಡೆದಿದೆ: ಕಾಂಗ್ರೆಸ್