ಕೊಪ್ಪಳ: ಹನುಮ ಜಯಂತಿ ಹಿನ್ನೆಲೆಯಲ್ಲಿ ಅಂಜನಾದ್ರಿಗೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ (Gali Janardhan Reddy) ಭೇಟಿ ನೀಡಿ ಆಂಜನೇಯಸ್ವಾಮಿ ದರ್ಶನ ಪಡೆದಿದ್ದಾರೆ. ಹನುಮ ಮಾಲೆ ಧರಿಸಿ ಗಂಗಾವತಿಯ ಸಂಕೀರ್ತನಾ ಯಾತ್ರೆಯಲ್ಲಿ ಪಾಲ್ಗೊಂಡ ಬಳಿಕ ಆಂಜನೇಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ನಡುವೆ ಹಲವು ವರ್ಷಗಳಿಂದ ಸಕ್ರಿಯ ರಾಜಕೀಯದಿಂದ ದೂರ ಉಳಿದಿದ್ದ ಅವರು ಹೊಸ ಪ್ರಾದೇಶಿಕ ಪಕ್ಷ ಸ್ಥಾಪಿಸಿ, ಗಂಗಾವತಿಯಿಂದ ರಾಜಕೀಯ ಜೀವನ ಮರು ಆರಂಭ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದ ನಂತರ ಬಿಜೆಪಿ ನಾಯಕರು, ಜನಾರ್ದನ ರೆಡ್ಡಿ ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ. ಇದರ ಜತೆಗೆ ರೆಡ್ಡಿಗೆ ಬಳ್ಳಾರಿ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ನಿರ್ಬಂಧ ವಿಧಿಸಿತ್ತು. ಇದು ಕೂಡ ಅವರು ಸಕ್ರಿಯ ರಾಜಕಾರಣದಿಂದ ದೂರವಿರಲು ಪ್ರಮುಖ ಕಾರಣವಾಗಿತ್ತು. ಆದರೆ, ಇದೀಗ ಗಂಗಾವತಿಯಲ್ಲಿ ಹೊಸ ಮನೆ ಹಾಗೂ ಕಚೇರಿಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದರ ಜತೆಗೆ ಸಾರ್ವಜನಿಕ ಬದುಕಿಗೆ ಬರಲು ನಾನು ಗಂಗಾವತಿಗೆ ಬಂದಿದ್ದೇನೆ ಹಾಗೂ ಜನರಿಗೆ ಒಳ್ಳೇ ಸುದ್ದಿ ಕೊಡುತ್ತೇನೆ ಎಂದು ಹೇಳಿರುವುದು ಅವರು ಮತ್ತೆ ರಾಜಕೀಯಕ್ಕೆ ಕಾಲಿಡಲಿದ್ದಾರೆ ಎಂಬುವುದಕ್ಕೆ ಇಂಬು ನೀಡುವಂತಿದೆ.
ಇದನ್ನೂ ಓದಿ | Bellary Mining | ಗಣಿ ಬಾಧಿತರ ಬದುಕು ಸುಧಾರಿಸಲು ಸಂಗ್ರಹಿಸಿದ 22 ಸಾವಿರ ಕೋಟಿ ಮೇಲೆ ಪಕ್ಷಗಳ ಕಣ್ಣು!
ಈ ಬಗ್ಗೆ ಗಾಲಿ ಜನಾರ್ದನ ರೆಡ್ಡಿ ಪ್ರತಿಕ್ರಿಯಿಸಿ, ಚಿಕ್ಕಂದಿನಿಂದ ಕ್ಷೇತ್ರಕ್ಕೆ ಬರುತ್ತಿದ್ದೇನೆ. ಹೀಗಾಗಿ ಈ ಬಾರಿಯೂ ಅಂಜನಾದ್ರಿಗೆ ಭೇಟಿ ನೀಡಿ ಹನುಮನ ದರ್ಶನ ಪಡೆದಿದ್ದೇನೆ. ಸಂಕೀರ್ತನಾ ಯಾತ್ರೆಯಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ. ಬಳ್ಳಾರಿ ಬಿಟ್ಟರೆ ಗಂಗಾವತಿ ನನಗೆ ಮತ್ತು ನನ್ನ ಕುಟುಂಬಕ್ಕೆ ನೆಮ್ಮದಿಯ ತಾಣ. ಕೋರ್ಟ್ ಒಂದೂವರೆ ವರ್ಷ ಬಳ್ಳಾರಿಯಲ್ಲಿ ಇರಲು ಅವಕಾಶ ನೀಡಿತ್ತು. ಈಗ ಮತ್ತೆ ನಿರ್ಬಂಧ ಹೇರಿದೆ, ಹೀಗಾಗಿ ಗಂಗಾವತಿಯಲ್ಲಿ ಮನೆ ಮಾಡಿದ್ದೇನೆ. ೧೦-೧೫ ದಿನಗಳೊಳಗೆ ಗೃಹ ಪ್ರವೇಶ ನಡೆಯಲಿದೆ ಎಂದು ಹೇಳಿದ್ದಾರೆ.
ನಾನು ಕಳೆದ 7 ವರ್ಷಗಳಿಂದ ಬಳ್ಳಾರಿಯಿಂದ ದೂರವಿದ್ದೇನೆ. ಗಂಗಾವತಿಯು ಬಳ್ಳಾರಿಗೆ ಹತ್ತಿರವಾದ ಸ್ಥಳ. ಇಲ್ಲಿಯವರೆಗೂ ಮಕ್ಕಳ ವಿದ್ಯಾಭ್ಯಾಸ, ಮದುವೆ ಹಾಗೂ ಅವರ ಭವಿಷ್ಯಕ್ಕಾಗಿ ಬೆಂಗಳೂರಿನಲ್ಲಿದ್ದೆ. ಈಗ ಗಂಗಾವತಿಯಲ್ಲಿ ಮನೆ ಮಾಡುತ್ತಿದ್ದೇನೆ ಎಂದಿರುವ ಅವರು, ಶ್ರೀರಾಮುಲು ಜತೆ ಭಿನ್ನಾಭಿಪ್ರಾಯದ ಬಗ್ಗೆ ಸ್ಪಂದಿಸಿ, ಸಹೋದರ ರಾಮುಲು ಹಾಗೂ ನನ್ನ ಮಧ್ಯೆ ಸ್ನೇಹ ಸಂಬಂಧ ಚೆನ್ನಾಗಿದೆ. ಈ ಜನ್ಮದಲ್ಲಿ ಶ್ರೀರಾಮುಲು, ನನ್ನ ಮಧ್ಯೆ ಬಿರುಕು ಎಂಬುವುದು ಕನಸು. ಈಗ ನಾನು ಆಂಜನೇಯನ ಜನ್ಮ ಸ್ಥಳದಲ್ಲಿದ್ದೇನೆ. ರಾಜಕೀಯದ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ತಿಳಿಸಿದ್ದಾರೆ.
ಐಷಾರಾಮಿ ವಿಲ್ಲಾಗಳ ಪಕ್ಕದಲ್ಲಿ ರೆಡ್ಡಿ ಹೈಟೆಕ್ ಆಫೀಸ್
ಗಂಗಾವತಿ ಹೊರವಲಯದ ಕನಕಗಿರಿ ರಸ್ತೆಯಲ್ಲಿ ಜನಾರ್ದನ ರೆಡ್ಡಿ ಅವರ ಹೊಸ ಮನೆ ಮತ್ತು ಕಚೇರಿ ಇದೆ. ಐಷಾರಾಮಿ ವಿಲ್ಲಾಗಳ ಪಕ್ಕದಲ್ಲೆ ಹೈಟೆಕ್ ಆಫೀಸ್ ಇದ್ದು, ರೆಡ್ಡಿ ಆಸೆಗೆ ತಕ್ಕಂತೆ ಕಚೇರಿಯೂ ಸಿದ್ಧವಾಗುತ್ತಿದೆ. ಈ ಹಿಂದೆಯೂ ಗಂಗಾವತಿ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ರೆಡ್ಡಿ ಅವರು ಬಯಸುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಗಂಗಾವತಿಯಲ್ಲಿ ಅವರು ಮನೆ ಮತ್ತು ಕಚೇರಿ ಮಾಡುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ | Criminal politics | ಬಿಜೆಪಿಗೆ ನಾನು ಕಾಣೊಲ್ಲ, ಅವರಿಗೆ ರೌಡಿಗಳು, ಗೂಂಡಾಗಳು, ದುಡ್ಡಿರೋರೇ ಬೇಕು ಎಂದ ಮುತಾಲಿಕ್