ಚಿತ್ರದುರ್ಗ: ಚಿತ್ರದುರ್ಗ ಸಬ್ ರಿಜಿಸ್ಟ್ರಾರ್ ಲಕ್ಷ್ಮಿ ತುಳಸಿ ವಿರುದ್ಧ ಭ್ರಷ್ಟಾಚಾರದ (Corruption Case) ಆರೋಪ ಕೇಳಿಬಂದಿದೆ. ಆರ್‌ಟಿಐ ಕಾರ್ಯಕರ್ತ ಪಿ. ಲಿಲಾಧರ ಠಾಕೂರ್ ಎಂಬುವವರು ಭ್ರಷ್ಟಾಚಾರದ ಆರೋಪ ಮಾಡಿದ್ದು, ಅಧಿಕಾರಿ ಲಂಚ ಕೇಳಿದ್ದಾರೆ ಎನ್ನಲಾದ ಆಡಿಯೊವನ್ನು ಬಿಡುಗಡೆ ಮಾಡಿದ್ದಾರೆ.
ಕ್ರಯಪತ್ರ, ಪಾಲು ವಿಭಾಗ ಪತ್ರ, ದಾನಪತ್ರ, ಹಕ್ಕು ಪತ್ರ ನೀಡಲು ಸಬ್ ರಿಜಿಸ್ಟ್ರಾರ್ ಲಕ್ಷ್ಮಿ ತುಳಸಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. 1 ಲಕ್ಷಕ್ಕೆ ಸಾವಿರ ರೂಪಾಯಿ ಲಂಚಕ್ಕೆ ಡಿಮ್ಯಾಂಡ್ ಮಾಡುತ್ತಾರೆ. ಲಂಚ ಕೊಟ್ಟರೆ ಮಾತ್ರ ನೋಂದಣಿ ಇಲ್ಲವಾದರೆ ನೋಂದಣಿ ಮಾಡುವುದಿಲ್ಲ ಎಂದು ಆರ್‌ಟಿಐ ಕಾರ್ಯಕರ್ತ ಪಿ. ಲಿಲಾಧರ ಠಾಕೂರ್ ಆರೋಪಿಸಿದ್ದಾರೆ.
ಸ್ಥಳೀಯ ಶಾಸಕರಿಗೆ ಪಾಲಿದೆ?
ಲಂಚ ಕೊಟ್ಟರೆ ಮಾರುಕಟ್ಟೆ ಬೆಲೆ ಕಡಿಮೆ ಮಾಡಿ ನೋಂದಣಿ ಮಾಡುತ್ತಾರೆ ಎಂಬ ಆರೋಪ ಕೂಡ ಸಬ್ ರಿಜಿಸ್ಟ್ರಾರ್ ಲಕ್ಷ್ಮಿ ತುಳಸಿ ವಿರುದ್ಧ ಕೇಳಿಬಂದಿದೆ. ಹಾಗೆಯೇ ಸ್ಥಳೀಯ ಶಾಸಕರಿಗೆ ಇದರಲ್ಲಿ ಪಾಲಿದೆ. ಶಾಸಕರಿಗೆ 25 ಲಕ್ಷ ರೂಪಾಯಿ ಹಣ ಕೊಟ್ಟು ಇಲ್ಲಿಗೆ ಬಂದಿದ್ದೇನೆ ಎಂದು ಅಧಿಕಾರಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ದಾನಪತ್ರ, ವಿಭಾಗ ಪತ್ರ, ಇತರ ಪತ್ರಗಳ ನೋಂದಣಿ ಪತ್ರಗಳಿಗೆ 5 ಸಾವಿರ ರೂ.ಗಳಿಂದ 10 ಸಾವಿರ ರೂ.ಗಳವರೆಗೆ ಲಂಚ ಪಡೆಯುತ್ತಾರೆ. ಕರಾರು ಪತ್ರ ರದ್ಧತಿಯಾಗಬೇಕಾದರು ಲಂಚ ಕೊಡಬೇಕು. ಲಂಚ ಕೊಡದೇ ಇದ್ದರೆ ವಿನಾಕಾರಣ ಜನರನ್ನು ಅಲೆದಾಡಿಸುತ್ತಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ | Theft Case: ಪೊಲೀಸರ ಸೋಗಿನಲ್ಲಿ ಬಂದು ಚಿನ್ನದ ಗಟ್ಟಿ ದೋಚಿದ ಕಳ್ಳರು; 1 ಕೋಟಿ 12 ಲಕ್ಷ ರೂ, ಮೌಲ್ಯದ ಬಂಗಾರ ಲೂಟಿ!
ಲಂಚ ಕೊಟ್ಟವರಿಗೆ ಟೋಕನ್ ಇಲ್ಲದೇ ಪ್ರವೇಶ ಸಿಗುತ್ತದೆ. ನ್ಯಾಯಾಲಯದ ತಡೆ ಆಜ್ಞೆ ಇರುವ ಆಸ್ತಿಗಳನ್ನೂ ಲಂಚ ಪಡೆದು ನೋಂದಣಿ ಮಾಡಿದ್ದಾರೆ. ಲಂಚದ ಬಗ್ಗೆ ಸಾರ್ವಜನಿಕರು ಪ್ರಶ್ನೆ ಮಾಡಿದರೆ ಜನರ ಮೇಲೆ ಕೇಸ್ ಹಾಕುತ್ತಾರೆ. ಹೀಗಾಗಿ ಲಂಚ ಸ್ವೀಕರಿಸುವ ಸಬ್ ರಿಜಿಸ್ಟ್ರಾರ್ ಲಕ್ಷ್ಮಿ ತುಳಸಿ ಅವರನ್ನು ಅಮಾನತು ಮಾಡಬೇಕು ಎಂದು ಆರ್‌ಟಿಐ ಕಾರ್ಯಕರ್ತ ಒತ್ತಾಯ ಮಾಡಿದ್ದಾರೆ.
ಮಾಧ್ಯಮಗಳ ಜತೆ ಮಾತನಾಡಲ್ಲ ಎಂದ ಸಬ್ ರಿಜಿಸ್ಟ್ರಾರ್
ಲಂಚ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡುವಂತೆ ಮಾಧ್ಯಮ ಪ್ರತಿನಿಧಿಗಳು ಕೇಳಿದಾಗ, ತಾವು ಮಾತನಾಡಲ್ಲ ಎಂದು ಸಬ್ ರಿಜಿಸ್ಟ್ರಾರ್ ಲಕ್ಷ್ಮಿ ತುಳಸಿ ಅವರು ಹೇಳಿದ್ದಾರೆ. ಅಲ್ಲದೆ, ಇದೇ ವೇಳೆ ತಮ್ಮ ವಿರುದ್ಧದ ಭ್ರಷ್ಟಾಚಾರ ಆರೋಪವನ್ನೂ ತಳ್ಳಿಹಾಕಿದ್ದಾರೆ.
ಇದನ್ನೂ ಓದಿ | Illicit relationship: ಪೊಲೀಸ್ ಕಾನ್ಸ್‌ಟೇಬಲ್ ಪತ್ನಿಯೊಂದಿಗೆ IPS ಅಧಿಕಾರಿಯ ಅನೈತಿಕ ಸಂಬಂಧ; ದೂರು ದಾಖಲು
ನಾನು ಮಧ್ಯವರ್ತಿಗಳನ್ನು ಬರಬೇಡಿ ಎಂದಿದ್ದಕ್ಕೆ ಕೆಲವರು ಆರೋಪ ಮಾಡಿದ್ದಾರೆ. ನಾನು ತಪ್ಪು ಮಾಡಿದ್ದರೆ ಮೇಲಧಿಕಾರಿಗಳಿಗೆ ದೂರು ನೀಡಲಿ, ನಾನು ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಿಲ್ಲ ಎಂದು ಮಾಧ್ಯಮದವರಿಗೆ ಹೇಳಿದ್ದಾರೆ.