ಬೆಂಗಳೂರು: ಇಲ್ಲಿನ ಕೋರಮಂಗಲದ 6ನೇ ಬ್ಲಾಕ್ನ ಮನೆಯೊಂದರಲ್ಲಿ ನಡೆದ ಹತ್ಯೆ ಮತ್ತು ದರೋಡೆ ಕೇಸ್ಗೆ ಟ್ವಿಸ್ಟ್ ಸಿಕ್ಕಿದೆ. ಈ ಮನೆಯ ಸೆಕ್ಯೂರಿಟಿ ಸಿಬ್ಬಂದಿ ಕರಿಯಪ್ಪ ಎಂಬಾತನನ್ನು (Security guard murdered) ಕೊಂದು, ಮನೆ ದೋಚಿಕೊಂಡು ಹೋದ ಘಟನೆ ವರದಿಯಾಗಿತ್ತು. ಮನೆ ಕೆಲಸದಾತ ಅಸ್ಸಾಂ ಮೂಲದ ಬಹದ್ದೂರ್ ಕಾಣೆಯಾಗಿದ್ದ. ಹೀಗಾಗಿ ಅವನೇ ಕರಿಯಪ್ಪನನ್ನು ಕೊಂದು, ಮನೆಯಲ್ಲಿ ಇದ್ದ ವಸ್ತುಗಳನ್ನು ಕದ್ದೊಯ್ದಿದ್ದಾನೆ ಎಂದು ಶಂಕೆ ವ್ಯಕ್ತಪಡಿಸಿದ್ದ ಪೊಲೀಸರು, ಈ ಬಹದ್ದೂರ್ ಪತ್ತೆಗೆ ತಂಡ ರಚಿಸಿ, ಆಸ್ಸಾಂಗೂ ಒಂದು ಟೀಂ ಕಳಿಸಿದ್ದರು.
ಆದರೀಗ ಇಲ್ಲೊಂದು ಟ್ವಿಸ್ಟ್ ಸಿಕ್ಕಿದೆ. ಮನೆಕೆಲಸದಾತ ಬಹದ್ದೂರ್ ಕೂಡ ಹತ್ಯೆಯಾಗಿದ್ದಾನೆ. ಈತನ ಮೃತದೇಹ ಮನೆ ಬಳಿಯ ನೀರಿನ ಸಂಪ್ನಲ್ಲಿ ಭಾನುವಾರ ಸಂಜೆ ಹೊತ್ತಿಗೆ ಪತ್ತೆಯಾಗಿದೆ. ಹೀಗಾಗಿ ಈ ಕೇಸ್ ಸ್ವಲ್ಪ ಕಗ್ಗಂಟಾಗಿ ಪರಿಣಮಿಸಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ವಿಶೇಷ ತಂಡಗಳ ರಚನೆ ಮಾಡಿದ್ದಾರೆ. ಸುತ್ತಮುತ್ತಲೂ ಸುಮಾರು 50 ಸಿಸಿಟಿವಿಗಳ ಫೂಟೇಜ್ ಪರಿಶೀಲನೆ ನಡೆಸಿದ್ದಾರೆ.
ಈ ಮನೆ ಸುತ್ತಲೂ ಹಲವು ಕಟ್ಟಡಗಳ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಅಲ್ಲಿನ ಕೆಲಸಗಾರರ ಮೇಲೂ ನಿಗಾ ಇಟ್ಟಿದ್ದಾರೆ. ಅವರಲ್ಲಿ ಯಾರಾದರೂ ಕೆಲಸ ಬಿಟ್ಟು ಹೋಗಿದ್ದಾರೆ, ಕಾಣೆಯಾಗಿದ್ದಾರಾ ಎಂಬಿತ್ಯಾದಿ ಮಾಹಿತಿಗಳ ಸಂಗ್ರಹ ನಡೆಯುತ್ತಿದೆ. ಸುತ್ತಲಿನ ಅಂಗಡಿ ಮಾಲೀಕರ ವಿಚಾರಣೆಯೂ ನಡೆಯುತ್ತಿದೆ. ಕಳ್ಳತನ ಆದ ಮನೆಯ ಸಿಸಿಟಿವಿ ಫೂಟೇಜ್ಗಳೆಲ್ಲ ನಾಪತ್ತೆಯಾಗಿದ್ದು ಇನ್ನಷ್ಟು ತಲೆನೋವಾಗಿ ಪರಿಣಮಿಸಿದೆ.
ಅಂದಹಾಗೇ, ಕೋರಮಂಗಲದಲ್ಲಿರುವ ಈ ಮನೆ ರಾಜಗೋಪಾಲರೆಡ್ಡಿ ಎಂಬ ಉದ್ಯಮಿಗೆ ಸೇರಿದ್ದಾಗಿದ್ದು, ಇಲ್ಲಿ ಕರಿಯಪ್ಪ ಕಳೆದ ಮೂವತ್ತು ವರ್ಷಗಳಿಂದಲೂ ಇವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಬಹದ್ದೂರ್ ಎರಡು ವರ್ಷಗಳಿಂದ ಇಲ್ಲಿ ಕೆಲಸ ಮಾಡ್ತಿದ್ದ. ರಾಜಗೋಪಾಲರೆಡ್ಡಿ ಅವರು ಸಂಬಂಧಿಕರ ಮದುವೆ ನಿಮಿತ್ತ ಅನಂತಪುರಕ್ಕೆ ಹೋಗಿದ್ದಾಗ ದುರ್ಘಟನೆ ನಡೆದಿದೆ. ಮನೆಯಲ್ಲಿದ್ದ 100 ಗ್ರಾಂ ಚಿನ್ನಾಭರಣ ಹಾಗೂ 5 ಲಕ್ಷ ರೂಪಾಯಿ ನಗದನ್ನು ಹೊತ್ತೊಯ್ಯಲಾಗಿದೆ.
ಇದನ್ನೂ ಓದಿ: Security guard murdered | ಮನೆ ಕೆಲಸದವನಿಂದ ಕೊಲೆಯಾದ ಸೆಕ್ಯುರಿಟಿ ಗಾರ್ಡ್; ಆರೋಪಿ ಪರಾರಿ