| ವಿಕ್ರಮ್, ವಿಸ್ತಾರ ನ್ಯೂಸ್, ಹೊಸದಿಲ್ಲಿ
ಬೇರೆ ರಾಜ್ಯಗಳಿಗೂ ಪ್ರಾತಿನಿಧ್ಯ ಕಲ್ಪಿಸುವುದಕ್ಕಾಗಿ ಈ ಬಾರಿಯ ಗಣರಾಜ್ಯೋತ್ಸವಕ್ಕೆ ಕರ್ನಾಟಕದ ಟ್ಯಾಬ್ಲೋವನ್ನು (Karnataka Tableau) ಕೇಂದ್ರ ಸರ್ಕಾರ ಪರಿಗಣಿಸಿರಲಿಲ್ಲ. ಆದರೆ, ಈ ನಡೆಯು ವ್ಯಾಪಾಕ ರಾಜಕೀಯ ಆರೋಪ, ಪ್ರತ್ಯಾರೋಪಕ್ಕೆ ಕಾರಣವಾದ ಹಿನ್ನೆಲೆ ಮತ್ತು ಸದ್ಯದಲ್ಲೇ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ, ಕೊನೆಗಳಿಗೆಯಲ್ಲಿ ಮತ್ತೆ ಕರ್ನಾಟಕದ ಟ್ಯಾಬ್ಲೋಗೆ ಅವಕಾಶ ಕಲ್ಪಿಸಲಾಗಿದೆ.
ಕಳೆದ 13 ವರ್ಷಗಳಿಂದ ವಿಭಿನ್ನ ಪರಿಕಲ್ಪನೆಯಡಿ ಟ್ಯಾಬ್ಲೋಗಳೊಂದಿಗೆ ಕರ್ನಾಟಕವು ರಾಷ್ಟ್ರದ ಗಮನ ಸೆಳೆದಿತ್ತು. ಆದರೆ, ಈ ಬಾರಿ ಕರ್ನಾಟಕದ ಟ್ಯಾಬ್ಲೋ ತಿರಸ್ಕಾರಗೊಂಡಿತ್ತು. ರಾಜ್ಯದ ಒತ್ತಾಯದ ಮೇರೆಗೆ ಕೊನೆಯಲ್ಲಿ ಅನುಮತಿ ದೊರೆತಿದೆ. ಕರ್ನಾಟಕವು ಈ ಬಾರಿ ರಾಮನಗರದ ರೇಷ್ಮೆ ಉದ್ಯಮ, ಸಿರಿಧಾನ್ಯ, ಬೆಂಗಳೂರಿನ ಪುಷ್ಪೋದ್ಯಮ ಮತ್ತು ನಾರಿಶಕ್ತಿ ವೈಭವ ಸೇರಿ ನಾಲ್ಕು ಸ್ತಬ್ದಚಿತ್ರ ಪ್ರಸ್ತಾವಗಳನ್ನು ಕೇಂದ್ರ ಆಯ್ಕೆ ಸಮಿತಿಗೆ ಕಳುಹಿಸಿಕೊಟ್ಟಿತ್ತು. ನಾರಿಶಕ್ತಿ ವಿಷಯದಲ್ಲಿ ಸಾಲುಮರದ ತಿಮ್ಮಕ್ಕ, ಸೂಲಗಿತ್ತಿ ನರಸವ್ವ ಮತ್ತು ಹಾಲಕ್ಕಿ ತುಳಸಿಗೌಡರ ಸಾಧನೆ ಬಿಂಬಿಸುವ ಒಳಗೊಂಡ ಮಾದರಿಗಳಿದ್ದವು. ಈ ಪ್ರಸ್ತಾಪಗಳಿಗೆ ಆಯ್ಕೆ ಸಮಿತಿ ಕೂಡ ಮೆಚ್ಚುಗೆ ವ್ಯಕ್ತಡಿಸಿತ್ತು. ಆದರೆ, ಅಂತಿಮ ಪಟ್ಟಿಯಲ್ಲಿ ಕರ್ನಾಟಕದ ಪ್ರಸ್ತಾವವನ್ನು ಕೈಬಿಡಲಾಯಿತು.
ಕೈ ತಪ್ಪಲು ಕಾರಣವೇನು?
ಅವಕಾಶ ವಂಚಿತ ರಾಜ್ಯಗಳಿಗೆ ಅವಕಾಶ ಕಲ್ಪಿಸುವ ದೃಷ್ಟಿಯಿಂದ ಹಾಗೂ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಿಗೆ ಟ್ಯಾಬ್ಲೋ ಅವಕಾಶ ಸಿಗಲಿದೆ ಎಂಬ ಆಪಾದನೆ ದೂರ ಮಾಡಲು ಈ ಕ್ರಮ ಕೈಗೊಂಡಿತ್ತು. ಅವಕಾಶ ವಂಚಿತ ರಾಜ್ಯಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕೇಂದ್ರ ರಕ್ಷಣಾ ಇಲಾಖೆ ವ್ಯಾಪ್ತಿಯಲ್ಲಿ ಬರುವ ಟ್ಯಾಬ್ಲೋ ಆಯ್ಕೆ ಸಮಿತಿ ಕರ್ನಾಟಕದ ಟ್ಯಾಬ್ಲೋ ಪ್ರಸ್ತಾವವನ್ನು ಕೈಬಿಟ್ಟಿತ್ತು
ಸ್ತಬ್ಧ ಚಿತ್ರ ಆಯ್ಕೆ ಸಂಬಂಧ ನವೆಂಬರ್ 30ರಂದು ಹೊರಡಿಸಿದ್ದ ಮಾರ್ಗಸೂಚಿ ಪ್ರಕಾರ, ಕಳೆದ ಎಂಟು ವರ್ಷಗಳಲ್ಲಿ ಕಡಿಮೆ ಸಲ ಪಾಲ್ಗೊಂಡ ರಾಜ್ಯಗಳಿಗೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ದಾಖಲಿಸಲಾಗಿತ್ತು. ಕಳೆದ ಬಾರಿ ಅವಕಾಶ ವಂಚಿತ ರಾಜ್ಯಗಳಾದ ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶಕ್ಕೆ ಈ ಬಾರಿ ಟ್ಯಾಬ್ಲೋ ಪ್ರದರ್ಶಿಸಲು ಅನುಮತಿ ನೀಡಲಾಗಿತ್ತು.
ಕಳೆದ ವರ್ಷ ಕೊನೆಕ್ಷಣದಲ್ಲಿ ಅವಕಾಶ ಕಳೆದುಕೊಂಡಿದ್ದ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಸೇರಿ ಹಲವು ರಾಜ್ಯಗಳು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದವು. ಕೇರಳದ ನಾರಾಯಣ ಗುರು ಸ್ತಬ್ದಚಿತ್ರ ಕೈಬಿಟ್ಟದ್ದಕ್ಕೆ ಕರ್ನಾಟಕದಲ್ಲೂ ಪ್ರತಿಭಟನೆ ನಡೆದಿತ್ತು. ಆ ರಾಜ್ಯಗಳನ್ನೂ ಸಮಾಧಾನಪಡಿಸುವ ಸಲುವಾಗಿ ಕೇಂದ್ರ ಸರ್ಕಾರ ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳತ್ತ ಗಮನಹರಿಸಿ, ಈ ನಿರ್ಧಾರವನ್ನು ಕೈಗೊಂಡಿತ್ತು.
ಕಳೆದ ವರ್ಷ ಪ್ರಶಸ್ತಿ ಬಂದಿತ್ತು
2022ರಲ್ಲಿ ರಾಜ್ಯ ಪ್ರಸ್ತುತಪಡಿಸಿದ್ದ ಸಾಂಪ್ರದಾಯಿಕ ಕಸೂತಿಯ ತೊಟ್ಟಿಲು ಟ್ಯಾಬ್ಲೋಗೆ ಎರಡನೇ ಅತ್ಯುತ್ತಮ ಪ್ರಶಸ್ತಿ ಬಂದಿತ್ತು. ಉತ್ತರ ಪ್ರದೇಶಕ್ಕೆ ಪ್ರಥಮ ಮತ್ತು ಮೇಘಾಲಯಕ್ಕೆ ಮೂರನೇ ಪ್ರಶಸ್ತಿಗಳು ಬಂದಿದ್ದವು. ಕಳೆದ ವರ್ಷ ಪ್ರಶಸ್ತಿ ಪಡೆದಿದ್ದ ಮೂರೂ ರಾಜ್ಯಗಳು ಈ ಬಾರಿ ಪೆರೇಡ್‌ಗೆ ಆಯ್ಕೆಯಾಗಿರಲಿಲ್ಲ. ಇತರ ರಾಜ್ಯಗಳಿಗೂ ಅವಕಾಶ ಕಲ್ಪಿಸಬೇಕು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದು ಕೇಂದ್ರದ ನಿಲುವಾಗಿತ್ತು.
ಮತ್ತೆ ಒಪ್ಪಿದ್ದೇಕೆ?
ಆರಂಭದಲ್ಲಿ ಟ್ಯಾಬ್ಲೋ ಪ್ರದರ್ಶನಕ್ಕೆ ಅವಕಾಶ ನಿರಾಕರಿಸಿ, ಮತ್ತೆ ರಾಜ್ಯಕ್ಕೆ ಕೇಂದ್ರ ಅವಕಾಶ ನೀಡಿದ್ದು ಏಕೆ ಎಂಬ ಪ್ರಶ್ನೆ ಸಹಜ. ಬಿಜೆಪಿಯೇತರ ರಾಜ್ಯಗಳಿಗೆ ಈ ಬಾರಿ ಅವಕಾಶ ನೀಡಬೇಕು ಎಂಬ ಚಿಂತನೆ ಕೇಂದ್ರ ಸರ್ಕಾರದ್ದಾಗಿತ್ತು. ಆದರೆ, ಈ ಬಾರಿಯೂ ಗುಜರಾತ್ ಟ್ಯಾಬ್ಲೋಗೆ ಅವಕಾಶ ನೀಡಲಾಗಿತ್ತು.
ಕರ್ನಾಟಕಕ್ಕೆ ಟ್ಯಾಬ್ಲೋ ಕೈ ತಪ್ಪುತ್ತಿದ್ದಂತೆ, ರಾಜ್ಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಕನ್ನಡಪರ ಸಂಘಟನೆಗಳು ಸೇರಿದಂತೆ ರಾಜ್ಯದ ಜನರು, ಕೇಂದ್ರದ ವಿರುದ್ದ ಕಿಡಿಕಾರಿದ್ದರು. ಅಷ್ಟೇ ಅಲ್ಲದೆ ರಾಜ್ಯದ ನಾಯಕರೂ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಿದ್ದರು. ರಾಜ್ಯದಲ್ಲಿ ಮುಂಬರುವ ಚುನಾವಣೆ ಮೇಲೆ ಇದರ ಪರಿಣಾಮ ಬೀರಲಿದೆ. ಕೇಂದ್ರ ಸರ್ಕಾರ ರಾಜ್ಯವನ್ನ ನಿರ್ಲಕ್ಷ್ಯ ಮಾಡಿದೆ ಎಂಬ ಸಂದೇಶ ಹೋಗಲಿದೆ. ಎಲೆಕ್ಷನ್ ಸಂದರ್ಭದಲ್ಲಿ ಪ್ರತಿಪಕ್ಷಗಳಿಗೆ ಈ ವಿಷಯ ಹೆಚ್ಚು ಲಾಭವಾಗಲಿದೆ ಎಂಬ ಅಂಶಗಳನ್ನ ರಾಜ್ಯ ನಾಯಕರು ಕೇಂದ್ರಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೆ ಕರ್ನಾಟಕಕ್ಕೆ ಗಣರಾಜ್ಯೋತ್ಸವದ ಟ್ಯಾಬ್ಲೋ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ
ಯಾವೆಲ್ಲ ರಾಜ್ಯಗಳು ಆಯ್ಕೆ?
ಕರ್ನಾಟಕ, ಮಧ್ಯಪ್ರದೇಶ, ತಮಿಳುನಾಡು, ತ್ರಿಪುರ, ಗುಜರಾತ್, ಜಮ್ಮುಕಾಶ್ಮೀರ, ಜಾರ್ಖಂಡ್, ಕೇರಳ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ಚಂಡೀಗಢ, ಡಿಯು-ದಮನ್.
ಇದನ್ನೂ ಓದಿ | Republic Day Tableau 2023 | ಗಣರಾಜ್ಯೋತ್ಸವಕ್ಕೆ ಟ್ಯಾಬ್ಲೋ ಆಯ್ಕೆ ಪ್ರಕ್ರಿಯೆ ಹೇಗೆ, ಮಾನದಂಡಗಳೇನು?