ಬೆಂಗಳೂರು: ಹೈಕೋರ್ಟ್‌ನ ಅಭಯಹಸ್ತದೊಂದಿಗೆ ಶಕ್ತಿ ತುಂಬಿಕೊಂಡಿರುವ ರಾಜ್ಯ ಲೋಕಾಯುಕ್ತ ಮತ್ತೆ ಅಬ್ಬರಿಸಲು ಶುರು ಮಾಡಿದೆ. ಅಧಿಕಾರ ಮರುಸ್ಥಾಪನೆ ಬಳಿಕ ಸೋಮವಾರ ನಡೆಸಿದ ಮೊದಲ ದಾಳಿಯಲ್ಲೇ ಅದು ಬಿಬಿಎಂಪಿಯ ಗಟ್ಟಿ ಮಿಕವೊಂದನ್ನೇ ಹಿಡಿದು ಹಾಕಿದೆ.
ಇತ್ತೀಚೆಗೆ ಚಾಮರಾಜಪೇಟೆ ಮೈದಾನ ಬಿಬಿಎಂಪಿ ಆಸ್ತಿ, ಕಂದಾಯ ಇಲಾಖೆಗೆ ಸೇರಿದ್ದು ಎಂಬ ಆದೇಶ ಹೊರಡಿಸಿ ರಾಜ್ಯಾದ್ಯಂತ ಸುದ್ದಿಯಾಗಿದ್ದ ಬಿಬಿಎಂಪಿ ಜಂಟಿ ಆಯುಕ್ತ ಶ್ರೀನಿವಾಸ್ ಮತ್ತು ಅವರ ಆಪ್ತ ಸಹಾಯಕ ಉಮೇಶ್ ಅವರು ಸೋಮವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಮಲ್ಲೇಶ್ವರದಲ್ಲಿರುವ ಬಿಬಿಎಂಪಿಯ ಪಶ್ಚಿಮ ವಿಭಾಗದ ಕಚೇರಿಯಲ್ಲಿರುವ ಶ್ರೀನಿವಾಸ್ ಅವರು ಲಂಚಕ್ಕಾಗಿ ಬೇಡಿಕೆ ಇಟ್ಟ ಬಗ್ಗೆ ಖಚಿತ ಮಾಹಿತಿಯನ್ನು ಪಡೆದಿದ್ದ ಲೋಕಾಯುಕ್ತ ಲಂಚ ಸ್ವೀಕರಿಸುತ್ತಿದ್ದಾಗಲೇ ದಾಳಿ ಮಾಡಿದೆ. ನಾಲ್ಕು ಲಕ್ಷ ರೂ. ಹಣವನ್ನು ಸ್ವೀಕರಿಸುವಾಗಲೇ ರೆಡ್ ಹ್ಯಾಂಡ್ ಆಗಿ ಶ್ರೀನಿವಾಸ್ ಮತ್ತು ಉಮೇಶ್ ಅವರನ್ನು ಬಂಧಿಸಿದೆ.
ಎಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್, ಬೆಂಗಳೂರು ಲೋಕಾಯುಕ್ತ ಎಸ್ ಪಿ ಶ್ರೀನಾಥ್ ಜೋಶಿ ನೇತೃತ್ವದಲ್ಲಿ ಈ ಮೊದಲ ಲೋಕಾಯುಕ್ತ ದಾಳಿ ನಡೆದಿದೆ. ಡಿವೈಎಸ್‌ಪಿ ಮಂಜಯ್ಯ, ಶಂಕರ್ ನಾರಾಯಣ್ ಅವರನ್ನು ಒಳಗೊಂಡ ಎಂಟು ಜನರ ಟೀಮ್ ಬಿಬಿಎಂಪಿ ಕಚೇರಿಗೆ ಲಗ್ಗೆ ಇಟ್ಟಿದೆ.
ಖಾತೆ ಬದಲಾವಣೆಗೆ ಲಂಚ ಬೇಡಿಕೆ
ವ್ಯಕ್ತಿಯೊಬ್ಬರು ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಹಲವು ಸಮಯದಿಂದ ಇದನ್ನು ಮಾಡಿಕೊಡದೆ ಸತಾಯಿಸಲಾಗುತ್ತಿತ್ತು. ಈ ನಡುವೆ, ಹಣ ಕೊಟ್ಟರೆ ಕೆಲಸ ಆಗುತ್ತದೆ ಎಂಬ ಸಂದೇಶವನ್ನು ಪಿಎ ಉಮೇಶ್ ಮೂಲಕ ರವಾನಿಸಲಾಗಿತ್ತು ಎನ್ನಲಾಗಿದೆ. ಅರ್ಜಿದಾರರು ಈ ಮಾಹಿತಿಯನ್ನು ಲೋಕಾಯುಕ್ತರಿಗೆ ರವಾನಿಸಿದ್ದರು. ಈ ನಡುವೆ ಪುನರುಜ್ಜೀವನದ ಖುಷಿಯಲ್ಲಿರುವ ಲೋಕಾಯುಕ್ತ ಮೊದಲ ಪ್ರಕರಣವಾಗಿ ಇದನ್ನೇ ಬಳಸಿಕೊಳ್ಳಲು ನಿರ್ಧರಿಸಿ ಕಾರ್ಯತಂತ್ರ ಹೆಣೆಯಿತು. ಹಾಗೆ, ಅರ್ಜಿದಾರರು ಹಣವನ್ನು ತಂದು ಶ್ರೀನಿವಾಸ್ ಅವರ ಪಿಎ ಕೈಗೆ ನೀಡುತ್ತಿದ್ದಂತೆಯೆ ಲೋಕಾಯುಕ್ತ ಅಧಿಕಾರಿಗಳು ಎಂಟ್ರಿ ಕೊಟ್ಟಿದ್ದಾರೆ. ಯಾರ ಭಯವೂ ಇಲ್ಲದೆ ಇಷ್ಟೊಂದು ದೊಡ್ಡ ಮೊತ್ತವನ್ನು ಕಚೇರಿಗೇ ತಂದುಕೊಡುವಂತೆ ಹೇಳಿದ್ದ ಶ್ರೀನಿವಾಸ್ ಮತ್ತು ಉಮೇಶ್ ಈ ಘಟನೆಯಿಂದ ಕಕ್ಕಾಬಿಕ್ಕಿಯಾಗಿದ್ದಾರೆ.
ಅವರನ್ನು ಸ್ಥಳದಲ್ಲೇ ಬಂಧಿಸಿದ ಲೋಕಾಯುಕ್ತ ಅಧಿಕಾರಿಗಳು ಅಲ್ಲೇ ಹೆಚ್ಚಿನ ವಿಚಾರಣೆ ನಡೆಸಿದರು. ಬಳಿಕ ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಮುಂದೆ ಅವರಿಬ್ಬರಿಗೆ ಸೇರಿದ ಆಸ್ತಿಪಾಸ್ತಿಗಳ ತಪಾಸಣೆ, ಆವರು ಮಾಡಿರುವ ಹಣದ ಗಂಟಿನ ಲೆಕ್ಕಾಚಾರಗಳೆಲ್ಲ ನಡೆಯಲಿವೆ.
ಎಲ್ಲ ಕಡೆ ದಾಳಿಗೆ ರೆಡಿಯಾಗಲು ಸೂಚನೆ
ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ರಚನೆಯಿಂದ ಮಂಕಾಗಿದ್ದ ಲೋಕಾಯುಕ್ತ ಸಂಸ್ಥೆ ಈಗ ಹೈಕೋರ್ಟ್‌ನ ಆದೇಶದಿಂದ ಮತ್ತೆ ಚಿಗಿತುಕೊಂಡಿದೆ. ತಮ್ಮ ಹಿಂದಿನ ಶೈಲಿಯಂತೆ ಲಂಚಗುಳಿತನದ ವಿರುದ್ಧ ಸಮರಕ್ಕೆ ಲೋಕಾಯುಕ್ತ ಪೊಲೀಸರು ಸಜ್ಜಾಗಿದ್ದು, ‘ಭ್ರಷ್ಟರ ವಿರುದ್ಧ ಜನರ ದೂರು ಸ್ವೀಕರಿಸಿ ತನಿಖೆ ನಡೆಸಿ’ ಎಂದು ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಠಾಕೂರ್ ಅವರು ಆಯಾ ಜಿಲ್ಲಾ ವ್ಯಾಪ್ತಿಯ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
‘ಭ್ರಷ್ಟಾಚಾರ ನಿಗ್ರಹ ಕಾಯ್ದೆಯನ್ವಯ ತನಿಖೆ ನಡೆಸುವ ಅಧಿಕಾರವನ್ನು ಲೋಕಾಯುಕ್ತ ಪೊಲೀಸರಿಗೆ ನೀಡಿ ಹೈಕೋರ್ಚ್ ಆದೇಶ ಹೊರಡಿಸಿದೆ. ಈ ಹಿನ್ನಲೆಯಲ್ಲಿ ಭ್ರಷ್ಟಾಚಾರ ಸಂಬಂಧ ಜನರು ಸಲ್ಲಿಸುವ ದೂರುಗಳನ್ನು ಸ್ವೀಕರಿಸಿ ತನಿಖೆ ನಡೆಸಬೇಕು’ ಎಂದು ಅವರು ಲೋಕಾಯುಕ್ತ ವಿಭಾಗದ ವಿವಿಧ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು, ಡಿವೈಎಸ್ಪಿಗಳು ಹಾಗೂ ಇನ್ಸ್‌ಪೆಕ್ಟರ್‌ಗಳಿಗೆ ಎಡಿಜಿಪಿ ಅವರು ಸುತ್ತೋಲೆಯಲ್ಲಿ ಸೂಚಿಸಿದ್ದಾರೆ.
ಮತ್ತೆ ಶಕ್ತಿ ತುಂಬಿದ ಹೈಕೋರ್ಟ್
ಸಿದ್ದರಾಮಯ್ಯ ಸರ್ಕಾರ ರಚಿಸಿದ್ದ ಎಸಿಬಿಯನ್ನು ರದ್ದುಗೊಳಿಸಿ ಹಿಂದಿನಂತೆ ಲೋಕಾಯುಕ್ತ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸುವಂತೆ ಕರ್ನಾಟಕ ಹೈಕೋರ್ಟ್ ಆದೇಶ ನೀಡಿತ್ತು. ಈ ಕುರಿತು ಸರ್ಕಾರಕ್ಕೆ ನೋಟಿಸ್ ನೀಡಿತ್ತು. ಇದೀಗ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಎಸಿಬಿಯನ್ನು ರದ್ದುಗೊಳಿಸಿ ಅಧಿಕೃತ ಆದೇಶ ಹೊರಡಿಸಿದೆ. ಇಷ್ಟೇ ಅಲ್ಲ ಎಸಿಬಿಯಲ್ಲಿ ಎಲ್ಲಾ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸಿದೆ.