ಕೊಪ್ಪಳ: ಗಂಗಾವತಿ ತಾಲೂಕಿನ ಆನೇಗೊಂದಿ ಬಳಿ ಇರುವ ಪಂಪಾಸರೋವರದ ಹತ್ತಿರದ ಪುರಾತನವಾದ ದೇವಾಲಯದಲ್ಲಿ ಗುತ್ತಿಗೆದಾರರು ಜೀರ್ಣೋದ್ಧಾರ ನೆಪದಲ್ಲಿ ರಾತ್ರೋರಾತ್ರಿ ಮೂಲ ಮೂರ್ತಿ ಸ್ಥಳಾಂತರ ಮಾಡಲಾಗಿದೆ ಎಂಬ ವಿವಾದಕ್ಕೆ ಹೊಸ ತಿರುವು ಸಿಕ್ಕಿದೆ. ರಾತ್ರೋರಾತ್ರಿ ಅಲ್ಲ, ಬದಲಿಗೆ ಎಲ್ಲ ಪೂರ್ವಸಿದ್ಧತೆಗಳೊಂದಿಗೆ ಹಾಡಹಗಲೇ ಸ್ಥಳಾಂತರ ಮಾಡಲಾಗಿದೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ.
ರಾತ್ರೋರಾತ್ರಿ ತಮಗೆ ಅರಿವಿಲ್ಲದಂತೆ ಮೂರ್ತಿ ಸ್ಥಳಾಂತರ ಮಾಡಲಾಗಿದೆ ಎಂದು ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿ, ಜೀರ್ಣೋದ್ಧಾರ ಕಾರ್ಯ ಮಾಡುವವರೊಂದಿಗೆ ವಾಗ್ವಾದ ನಡೆಸಿದ್ದರು.
ದೇವಾಲಯದ ಸಂಪೂರ್ಣ ಜೀರ್ಣೋದ್ಧಾರವನ್ನು ಮಾಜಿ ಸಚಿವ ಬಿ. ಶ್ರೀರಾಮುಲು ನಡೆಸುತ್ತಿದ್ದು, ಅವರ ಮೇಲೆಯೂ ಆರೋಪಗಳು ಕೇಳಿಬಂದಿದ್ದವು. ಜೀರ್ಣೋದ್ಧಾರದ ಹೆಸರಿನಲ್ಲಿ ಐತಿಹಾಸಿಕ ಸ್ಮಾರಕ ಹಾಳು ಮಾಡುತ್ತಿದ್ದಾರೆ. ನಿಧಿ ಶೋಧ ಮಾಡುತ್ತಿರಬೇಕು. ಎಂದು ಹಿಂದೂ ಪರ ಸಂಘಟನೆ ಕಾರ್ಯಕರ್ತರು ಆರೋಪಿಸಿದ್ದರು.
ಈಗ ಮೂಲ ಮೂರ್ತಿ ಸ್ಥಳಾಂತರದ ಮಾಡಿದ ವಿಡಿಯೋ ವೈರಲ್ ಆಗಿದೆ. ಮೂಲಮೂರ್ತಿ, ಪೀಠ, ಶ್ರೀಚಕ್ರ ತೆಗೆಯುತ್ತಿರುವ ದೃಶ್ಯ ವಿಡಿಯೊದಲ್ಲಿ ಇದ್ದು, ಮೊದಲೇ ವಿಶೇಷ ಪೂಜೆಯೊಂದಿಗೆ ಮೂಲ ಮೂರ್ತಿಯನ್ನು ತೆರವುಗೊಳಿಸಲಾಗಿತ್ತು ಎಂದು ಗುತ್ತಿಗೆದಾರರು ತಿಳಿಸಿದ್ದಾರೆ.
ಇದನ್ನೂ ಓದಿ: ಜೀರ್ಣೋದ್ಧಾರ ನೆಪದಲ್ಲಿ ದೇವಾಲಯದ ಮೂರ್ತಿ ತೆರವುಗೊಳಿಸಿದ ಗುತ್ತಿಗೆದಾರ