ಬೆಂಗಳೂರು: ರಾಜ್ಯದಲ್ಲಿ ಪ್ರಸಕ್ತ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶ ಹೊರಬಿದ್ದಿದ್ದು ಪಿಯು ಪ್ರವೇಶಕ್ಕೆ ವಿದ್ಯಾರ್ಥಿಗಳು ಮುಗಿಬಿದ್ದಿದ್ದಾರೆ. ರಾಜ್ಯದಲ್ಲಿ ಮಾನ್ಯತೆ ಕಳೆದುಕೊಂಡಿರುವ ಬಹಳಷ್ಟು ಕಾಲೇಜುಗಳಿದ್ದು, ವಿದ್ಯಾರ್ಥಿಗಳು ಹಾಗೂ ಹೆತ್ತವರನ್ನು ನಂಬಿಸಿ ಈ ಕಾಲೇಜುಗಳಿಗೆ ಅಡ್ಮಿಷನ್ ಮಾಡಿಕೊಳ್ಳುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಮಾನ್ಯತೆ ಹೊಂದಿರುವ ಕಾಲೇಜುಗಳ ಪಟ್ಟಿ ಬಿಡುಗಡೆ ಮಾಡಲು ಪದವಿ ಪೂರ್ವ ಶಿಕ್ಷಣ ಇಲಾಖೆ ಮುಂದಾಗಿದೆ.
ಕಾಲೇಜು ಪ್ರವೇಶ ಸಂಬಂಧಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಗೊಂದಲವಾಗುವುದನ್ನು ತಪ್ಪಿಸಲು ಮಾನ್ಯತೆ ಹೊಂದಿರುವ ಕಾಲೇಜುಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಈ ಕುರಿತ ಜಿಲ್ಲಾವಾರು ಪಟ್ಟಿಯನ್ನು ಆಯಾ ಜಿಲ್ಲೆಯ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಸದ್ಯದಲ್ಲೇ ಪ್ರಕಟಿಸಲಿದ್ದಾರೆ.
ಇದನ್ನೂ ಓದಿ| ವಿದ್ಯಾರ್ಥಿಯ ಮಾನಸಿಕ ವಿಕಾಸವೆ ಶಿಕ್ಷಣದ ಉದ್ದೇಶ: ಸಾಹಿತಿ ಶ್ರೀಧರ ಬಳಗಾರ
ಈ ಬಗ್ಗೆ ವಿವರ ನೀಡಿರುವ ಪಿಯು ಬೋರ್ಡ್ ನಿರ್ದೇಶಕ ರಾಮಚಂದ್ರನ್, ʼʼರಾಜ್ಯದಲ್ಲಿ ಅಂದಾಜು 500ರಿಂದ 600 ಮಾನ್ಯತೆ ಹೊಂದಿರುವ ಪಿಯು ಕಾಲೇಜುಗಳಿವೆ. ಆದರೆ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಮಾನ್ಯತೆ ಹೊಂದಿಲ್ಲದ ಕಾಲೇಜುಗಳ ಕುರಿತು ಮಾಹಿತಿ ಇಲ್ಲದೆ ಅವುಗಳಿಗೆ ದಾಖಲಾತಿ ಮಾಡಿಸಿ ಸಮಸ್ಯೆಗೆ ಒಳಗಾಗುತ್ತಾರೆ. ಇದನ್ನು ತಪ್ಪಿಸಲು ಇದೇ ಮೊದಲ ಬಾರಿಗೆ ಮಾನ್ಯತೆ ಹೊಂದಿರುವ ಕಾಲೇಜುಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತಿದ್ದು, ಎಲ್ಲ 32 ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕರೂ ಆಯಾ ಜಿಲ್ಲಾವಾರು ಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರೆ. ಈ ಮಾಹಿತಿಯನ್ನು ಪರಿಶೀಲಿಸಿ ಪೋಷಕರು ವಿದ್ಯಾರ್ಥಿಗಳ ದಾಖಲಾತಿ ನಡೆಸಬೇಕುʼʼ ಎಂದಿದ್ದಾರೆ.
ಇದನ್ನೂ ಓದಿ| ಪಿಯು ಕಾಲೇಜು ಪ್ರವೇಶ ಮಿತಿ ಹೆಚ್ಚಳ: ಪದವಿಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ