ಧಾರವಾಡ: ಸರ್ಕಾರದ ಸೌಲಭ್ಯ ಸಿಗದಿದ್ದಕ್ಕೆ ಬೇಸರಗೊಂಡು ವಿಶ್ವಕರ್ಮ ಸಮುದಾಯದ ಕೆಲವರು ಮುಸ್ಲಿಂ ಹಾಗೂ ಕ್ರೈಸ್ತ ಧರ್ಮಕ್ಕೆ ಮತಾಂತರವಾಗುತ್ತಿದ್ದಾರೆ(Religion Conversion) ಎಂದು ಬಿಜೆಪಿ ಎಂಎಲ್‌ಸಿ ಕೆ.ಪಿ. ನಂಜುಂಡಿ ಆಘಾತಕಾರಿ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಭಾನುವಾರ ಮಾತನಾಡಿದ ಅವರು, ವಿಶ್ವಕರ್ಮರು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ದಕ್ಷಿಣ ಕನ್ನಡ ಸೇರಿ ಎಷ್ಟೋ ಕಡೆ ನಮ್ಮ ಸಮಾಜದವರು ಬೇರೆ ಬೇರೆ ಧರ್ಮಕ್ಕೆ ಹೋಗುತ್ತಿದ್ದಾರೆ. ನಾನು ಎಂಎಲ್‌ಸಿ ಆಗಿದ್ದರೂ ಅವರನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕಾಗಿ ಹೋರಾಟ ಮಾಡಿದ್ದೆವು. ಇದೀಗ ಐದು ತಿಂಗಳಿನಿಂದ ನಿಗಮದ ಪದಾಧಿಕಾರಿಗಳ ಸ್ಥಾನಗಳು ಖಾಲಿ ಬಿದ್ದಿವೆ. ಇನ್ನೂ ಭರ್ತಿ ಮಾಡುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಇದನ್ನೂ ಓದಿ | Voter data | ಚಿಲುಮೆ ಸಂಸ್ಥೆಯಿಂದ ರಾಜಕೀಯ ಪಕ್ಷಗಳಿಗೆ ಮತದಾರರ ಡೇಟಾ ಮಾರಾಟದ ಶಂಕೆ
ಮತಾಂತರವಾಗುತ್ತಿರುವವರನ್ನು ತಡೆಯಲು ಆಗುತ್ತಿಲ್ಲ. ಕೇಳಿದರೆ ತಿನ್ನೋಕೆ ಗತಿ ಇಲ್ಲ ನಿಮ್ಮ ಸರ್ಕಾರ ತಂದು ಕೊಡುತ್ತಾ? ಎಂದು ಕೇಳುತ್ತಾರೆ. ಬದುಕಲು, ಊಟಕ್ಕೆ ಜಾತಿ ಇಲ್ಲ. ಅದು ಇಲ್ಲದೇ ಇದ್ದಾಗಲೇ ಅಲ್ಲವೇ ಬೇರೆ ಕಡೆ ಹೋಗುವುದು. ಕಸುಬುಗಳನ್ನು ನಂಬಿ ಶೋಚನೀಯ ಸ್ಥಿತಿ ತಲುಪಿದ್ದು, ಸಾಮಾಜಿಕ ನ್ಯಾಯದಿಂದ ಸಮುದಾಯ ವಂಚಿತವಾಗಿದೆ ಎಂದು ಸ್ವ ಪಕ್ಷ ಮತ್ತು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಎಂಎಲ್‌ಸಿ ಸ್ಥಾನ ಅಧಿಕಾರವಲ್ಲ, ಒಂದು ಗೌರವ ಇಟ್ಟುಕೊಂಡಿದ್ದೆನಷ್ಟೇ. ಬದಲಾವಣೆ ಏನೂ ಇಲ್ಲ, ಒಂದು ಮನೆ ಕೊಡಿಸಿ ಎಂದರೂ ಆಗುವುದಿಲ್ಲ. ನಮ್ಮ ಸಮಾಜಕ್ಕೆ ಸಾಮಾಜಿಕ ನ್ಯಾಯ ಕೊಡಬೇಕು. ಈಗ ಏನನ್ನೂ ನಾನು ಸರ್ಕಾರ ಅಥವಾ ಪಕ್ಷದಲ್ಲಿ ಕೇಳುತ್ತಿಲ್ಲ. ಕೇಳಿ ಕೇಳಿ ನಮಗೆ ನಾಚಿಕೆ, ಅವಮಾನ ಆಗುತ್ತಿದೆ. ದೇವೇಗೌಡರು, ಸಿದ್ದರಾಮಯ್ಯ, ಯಡಿಯೂರಪ್ಪ ಎಲ್ಲರೂ ನನ್ನನ್ನು ಸಮಾಜ ಸಂಘಟಕ ಎಂದು ಹೊಗಳಿದ್ದರು. ಆದರೆ ಏನೂ ಪ್ರಯೋಜನವಾಗಿಲ್ಲ ಎಂದಿದ್ದಾರೆ.
ಪರಿವರ್ತನಾ ಯಾತ್ರೆಯಲ್ಲಿ ಯಡಿಯೂರಪ್ಪ ಜತೆ 224 ಕ್ಷೇತ್ರ ಸುತ್ತಿದ್ದೇನೆ. ಇಡೀ ಸಮಾಜವನ್ನು ಪ್ರಾಮಾಣಿಕವಾಗಿ ಪಕ್ಷಕ್ಕೆ ತೆಗೆದುಕೊಂಡು ಹೋಗಿದ್ದೆ. ಈಗ ಎದೆ ಬಗೆದು ಅದನ್ನು ತೋರಿಸಲು ಆಗುವುದಿಲ್ಲ. ಇದರಿಂದ ತುಂಬಾ ನೊಂದಿದ್ದೇವೆ. ನಮ್ಮನ್ನು ಎಷ್ಟು ಬೇಕೋ ಅಷ್ಟು ಉಪಯೋಗಿಸಿಕೊಂಡಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಇದನ್ನೂ ಓದಿ | Voter Data | ಕಾಡು, ಬೆಟ್ಟ, ನಾಡು ನುಂಗಿದ ಜೇಬು ಕಳ್ಳರಿವರು: ಡಿಕೆಶಿ ವಿರುದ್ಧ ಸಚಿವ ಅಶ್ವತ್ಥನಾರಾಯಣ ಕಿಡಿ