ಬೆಂಗಳೂರು: ಇದೇ ನವೆಂಬರ್ ೧೮ರಂದು ತೆರೆ ಕಾಣಲಿರುವ ಮಠ ಸಿನಿಮಾಗೆ (Mata Film) ಈಗ ಧರ್ಮ ಸಂಕಟ ಎದುರಾಗಿದೆ. ಈ ಸಿನಿಮಾದಲ್ಲಿ ಮಠಗಳನ್ನು ಅವಹೇಳನಕಾರಿಯಾಗಿ, ಹಾಸ್ಯಮಯವಾಗಿ ಬಿಂಬಿಸಲಾಗಿದೆ. ಎಲ್ಲ ಮಠಗಳ ದೂಷಣೆ ಸರಿಯಲ್ಲ. ಈ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ಕಾಳಿಕಾ ಮಠದ ಋಷಿ ಕುಮಾರ ಸ್ವಾಮಿ ಆಗ್ರಹಿಸಿದರು.
ವಾಣಿಜ್ಯ ಮಂಡಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಋಷಿ ಕುಮಾರ ಸ್ವಾಮಿ, ನೂತನವಾಗಿ ನಿರ್ಮಾಣವಾಗಿರುವ ಸಿನಿಮಾದ ಟ್ರೈಲರ್ ಅನ್ನು ನೋಡಿದ್ದೇನೆ. ಇದರಲ್ಲಿ ಕನ್ನಡ ಚಿತ್ರರಂಗದ ಹಾಸ್ಯ ಕಲಾವಿದರನ್ನು ಇಟ್ಟುಕೊಂಡು ಹಾಸ್ಯವಾಗಿ ಬಿಂಬಿಸಲಾಗಿದೆ. ಕೆಲವೊಂದು ಧಾರ್ಮಿಕ ಭಾವನೆಗೆ ಧಕ್ಕೆ ಬರುವಂತೆ ಚಿತ್ರಿಸಲಾಗಿದೆ. ಒಂದು ಮಠ ಮಾಡುವ ಕೆಲಸಕ್ಕೆ ಎಲ್ಲ ಮಠಗಳನ್ನು ದೂಷಣೆ ಮಾಡುವುದು ಸರಿಯಲ್ಲ. ನಾನು ಸಹಿತ ವಿವಿಧ ಮಠಾಧೀಶರು ಸೇರಿ ಈ ಸಿನಿಮಾದ ಮೊದಲ ದಿನದ ಶೋವನ್ನು ವೀಕ್ಷಿಸಲಿದ್ದು, ಎಲ್ಲರ ನಿರ್ಧಾರಕ್ಕೆ ನಾನು ಬದ್ಧವಾಗಿರುವೆ ಎಂದು ಎಚ್ಚರಿಕೆ ನೀಡಿದರು.
ಸಿನಿಮಾ ನೋಡಿ ಅಭಿಪ್ರಾಯ ತಿಳಿಸಿ- ರವೀಂದ್ರ ವಂಶಿ
ಮಠ ಸಿನಿಮಾಗಾಗಿ ಸಾಕಷ್ಟು ಶ್ರಮ ವಹಿಸಿದ್ದೇವೆ. ೨೦೦ಕ್ಕೂ ಹೆಚ್ಚು ಮಠಗಳನ್ನು ಸಂಪರ್ಕ ಮಾಡಿದ್ದೇವೆ. ೭೦ ಮಠಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ. ಇದಕ್ಕಾಗಿ ೩ ವರ್ಷ ತೆಗೆದುಕೊಂಡಿದ್ದೇವೆ. ಇದು ಕಾಲ್ಪನಿಕ ಕತೆಯಲ್ಲ. ಅವಹೇಳನಕಾರಿ ವಿಷಯ ನಮ್ಮ ಚಿತ್ರದಲ್ಲಿ ಇಲ್ಲ. 200 ಘಟನೆಯಲ್ಲಿ 60 ಘಟನೆಯನ್ನಷ್ಟೇ ನಾವು ಚಿತ್ರದಲ್ಲಿ ಚಿತ್ರೀಕರಿಸಿದ್ದೇವೆ. ಸ್ವತಃ ಅನುಭವ ಆಗಿರುವ ವಿಷಯವನ್ನು ಚಿತ್ರದಲ್ಲಿ ಚಿತ್ರಿಸಿದ್ದೇವೆ. ಆದರೂ ಕೆಲವೊಂದು ದೃಶ್ಯಗಳನ್ನು ಡಿಲೀಟ್ ಮಾಡಲಾಗಿದೆ ಎಂದು ನಿರ್ದೇಶಕ ರವೀಂದ್ರ ವಂಶಿ ಸ್ಪಷ್ಟೀಕರಣ ಮಾಧ್ಯಮದವರಿಗೆ ನೀಡಿದರು.
ಇದನ್ನೂ ಓದಿ | Death News | ನಿರ್ದೇಶಕ ಕೆ.ಆರ್. ಮುರಳಿ ಕೃಷ್ಣ ಇನ್ನಿಲ್ಲ
ಯಾರೋ ಒಬ್ಬರು ಮಾಡುವ ಕೆಲಸಕ್ಕೆ ಎಲ್ಲ ಮಠಗಳನ್ನು ನಾವು ದೂಷಿಸಿಲ್ಲ. ಮಠ ಸಿನಿಮಾ ಮಾಡುವ ಸಂದರ್ಭದಲ್ಲಿ ನಾನು, ನಮ್ಮ ಕ್ಯಾಮೆರಾಮನ್ ಸೇರಿದಂತೆ ಹಲವರು ಮಾಂಸಾಹಾರ ಸೇವನೆ ಮಾಡಿಲ್ಲ. ಮಾಂಸಾಹಾರವನ್ನು ತ್ಯಜಿಸಿದ್ದೇವೆ. ಥಿಯೇಟರ್ ಹಿಡಿದು ಸಿನಿಮಾ ಬಿಡುಗಡೆ ಮಾಡಲು ಎಷ್ಟು ಕಷ್ಟ ಇದೆ. ಬಿಡುಗಡೆ ದಿನಾಂಕ ಹತ್ತಿರದಲ್ಲಿರುವಾಗ ಹೀಗೆ ಮಾಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿರುವ ರವೀಂದ್ರ ವಂಶಿ, ಮೊದಲು ಸಿನಿಮಾ ನೋಡಿ ನಂತರ ಅಭಿಪ್ರಾಯ ತಿಳಿಸಲಿ ಎಂದು ಹೇಳಿದರು.
ಈಗಾಗಲೇ ಚಿತ್ರಕ್ಕೆ ಸೆನ್ಸಾರ್ ಯು/ಎ ಪ್ರಮಾಣ ಪತ್ರ ಕೊಟ್ಟಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಮಠ ಚಿತ್ರದಲ್ಲಿ ಹಳೆಯ ಮಠ ಚಿತ್ರದ ನಿರ್ದೇಶಕ ಗುರು ಪ್ರಸಾದ್, ಹಾಸ್ಯ ನಟರಾದ ಸಾಧು ಕೋಕಿಲಾ, ತಬಲಾ ನಾಣಿ, ಬಿರಾದಾರ ಸ್ವಾಮೀಜಿಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಗುರು ಪ್ರಸಾದ್ ನಿರ್ದೇಶನದ ಸೂಪರ್ ಹಿಟ್ ಸಿನಿಮಾ (Mata Film) ‘ಮಠ’ 2006ರಲ್ಲಿ ತೆರೆ ಕಂಡು ಸಾಕಷ್ಟು ಹೆಸರು ಗಳಿಸಿತ್ತು. ಇದೀಗ ಅದೇ ಹೆಸರಲ್ಲಿ 16 ವರ್ಷಗಳ ನಂತರ ಹೊಸದೊಂದು ಸಿನಿಮಾ ನಿರ್ಮಾಣವಾಗಿದೆ.
ಸಿನಿಮಾ ಬಿಡುಗಡೆ ಮಾಡದಂತೆ ಪತ್ರ ಬರೆದಿದ್ದ ಋಷಿ ಕುಮಾರ್
ಮಠ ಸಿನಿಮಾ ಬಿಡುಗಡೆಯನ್ನು ತಡೆ ಹಿಡಿಯಬೇಕೆಂದು ಋಷಿ ಕುಮಾರ ಸ್ವಾಮೀಜಿ ಸೋಮವಾರ (ನ. ೧೪) ಫಿಲ್ಮ್ ಚೇಂಬರ್‌ಗೆ ಪತ್ರ ಬರೆದು ಕೋರಿದ್ದರು. ಇದಕ್ಕೂ ಮೊದಲು ಮಠ ಸಿನಿಮಾದ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದ ಋಷಿ ಕುಮಾರ ಸ್ವಾಮಿ, “ತಾಕತ್ತು ಇದ್ದರೆ ಹಿಂದು ಸ್ವಾಮೀಜಿಗಳ ಬದಲು, ಮೌಲಿಗಳ ಬಗ್ಗೆ ಸಿನಿಮಾ ಮಾಡಿ. ಇವರಿಗೆ ಹಿಂದು ಧರ್ಮಗುರುಗಳು ಟಾರ್ಗೆಟ್ ಯಾಕೆ?’ ಎಂದು ಪ್ರಶ್ನೆ ಮಾಡಿ ಸುದ್ದಿಯಾಗಿದ್ದರು.
ಇದನ್ನೂ ಓದಿ | Mata Film |ʻಮಠ ಚಿತ್ರದ ಬಿಡುಗಡೆಯನ್ನು ತಡೆಹಿಡಿಯಬೇಕುʼ : ಫಿಲ್ಮ್ ಚೇಂಬರ್‌ಗೆ ಪತ್ರ ಬರೆದ ಕಾಳಿಕಾ ಮಠದ ಋಷಿ ಕುಮಾರ ಸ್ವಾಮೀಜಿ!