ಹಾವೇರಿ: ಮತಧರ್ಮಗಳೇ ಜಗತ್ತಿನ ಶಾಂತಿಗೆ ಬಹುದೊಡ್ಡ ಕಂಟಕವಾಗಿವೆ ಎಂದು ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠದ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನುಡಿದರು. ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಗೋಷ್ಠಿ ‘ಸಾಮರಸ್ಯದ ಭಾವ- ಕನ್ನಡದ ಜೀವ’ದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತನ್ನ ಭಾಷೆ, ಧರ್ಮ ಹಾಗೂ ಊರಿನ ಸೆಳೆತ ಇನ್ನೊಬ್ಬರಿಗೆ ಮಾರಕವಾಗಬಾರದು. ಮತಧರ್ಮಗಳು ಇಂದು ಸಾಮರಸ್ಯದ ವೈಫಲ್ಯಕ್ಕೆ ಕಾರಣವಾಗಿವೆ. ಸಹಪ್ರಯಾಣಿಕರ ಜಾತಿ ಹುಡುಕುವ ಹುಚ್ಚು ನಮ್ಮದಾಗಿದೆ. ಆದರೆ ಸರ್ವರಿಗೆ ಶ್ರೇಯಸ್ಸನ್ನು ಬಯಸುವುದೇ ಧರ್ಮ. ಪ್ರತಿಯೊಬ್ಬನೂ ತನ್ನ ಶುದ್ಧ ಆತ್ಮದ ಧ್ವನಿಯಂತೆ ನಡೆದಾಗ ಸಾಮರಸ್ಯದ ಸಮಾಜ ಸಾಧ್ಯವಾಗುತ್ತದೆ ಎಂದವರು ಹೇಳಿದರು.
ಸಾಮರಸ್ಯಕ್ಕೆ ಹೆಸರಾದ ನಾಡು ಕನ್ನಡನಾಡು. ಕನಕದಾಸ, ಸರ್ವಜ್ಞ ಮತ್ತು ಶಿಶುನಾಳ ಷರೀಫರು ಇದನ್ನು ಅನುಷ್ಠಾನಕ್ಕೆ ತರುವ ಚಿಂತನೆಯನ್ನು ಜನಮನದಲ್ಲಿ ಮೂಡಿಸಿದವರು ಎಂದು ಗೋಷ್ಠಿಯ ಆಶಯ ನುಡಿ ನುಡಿದ ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ನುಡಿದರು.
ಕನಕದಾಸರು ಜಾತಿ ಧರ್ಮಗಳ ಯಾಂತ್ರಿಕ ಆಚರಣೆಗಳನ್ನು ಟೀಕೆ ಮಾಡಿದರು. ಸಮಾಜವನ್ನು ಒಡೆಯುವವರು ಬೇಕಾಗಿಲ್ಲ. ಭಿನ್ನ ಜಾತಿಗಳು ದೇವರನ್ನು ಕಾಣುವ ಭಿನ್ನ ಮಾರ್ಗಗಳು ಅಷ್ಟೇ. ಪರಹಿತಾರ್ಥವನ್ನು ಬಯಸುವುದೇ ಧರ್ಮ ಎಂದು ಸಾರಿದವರು ಕನಕದಾಸರು ಎಂದು ಡಾ.ವೈ.ಎಂ.ಯಾಕೊಳ್ಳಿ ಹೇಳಿದರು.
ಪರಂಪರೆಯ ಸತ್ವವನ್ನು ನೆನಪಿಸಿದ ಸಂತ ಕವಿ ಸರ್ವಜ್ಞ. ಸಮಾಜದಲ್ಲಿ ರೂಢಿಯಾಗಿರುವ ಉತ್ತಮ- ಅಧಮ ಎಂಬ ನಂಬಿಕೆಗಳನ್ನೇ ಪ್ರಶ್ನಿಸಿದವನು, ನಿಷ್ಠುರ ಸತ್ಯಗಳನ್ನು ನುಡಿದವನು ಸರ್ವಜ್ಞ ಎಂದು ‘ಸರ್ವಜ್ಞರ ಸಾಮಾಜಿಕ ದೃಷ್ಟಿ’ ಕುರಿತು ಮಾತಾಡಿದ ಡಾ. ನಾಗರಾಜ ದ್ಯಾಮನಕೊಪ್ಪ ನುಡಿದರು.
ಜಾತಿ ವೈಷಮ್ಯ ಕಿತ್ತೊಗೆದು ಸಮಾಜದಲ್ಲಿ ಸಾಮರಸ್ಯ ಬೆಳೆಸಬೇಕು ಎಂಬ ಸಂದೇಶವನ್ನು ತಮ್ಮ ತತ್ವಪದಗಳ ಮೂಲಕ ಸಾರಿದವನು ಶಿಶುನಾಳ ಶರೀಫರು ಎಂದು ಆಡಿವೆಪ್ಪ ವಾಲಿ ನುಡಿದರು.
ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಆನ್‌ಲೈನ್ ಪೇಮೆಂಟ್ ಸ್ಥಗಿತವಾಗಿ ಲಕ್ಷಾಂತರ ರೂ. ನಷ್ಟ ಅನುಭವಿಸುತ್ತಿರುವ ಪುಸ್ತಕ ಮಳಿಗೆಗಳು