ಬೆಂಗಳೂರು: ಇಡೀ ವಿಶ್ವದ ಸಂವಿಧಾನಗಳನ್ನೆಲ್ಲಾ ಅಧ್ಯಯನ ಮಾಡಿ ಎಲ್ಲದರಲ್ಲಿರುವ ಅತ್ಯುತ್ತಮ ಸಾರವನ್ನು ತೆಗೆದು ಅಂಬೇಡ್ಕರ್ ಅವರು ಸಾಮಾಜಿಕ ನ್ಯಾಯದ ಹಕ್ಕುಗಳನ್ನು ನಮ್ಮ ಸಂವಿಧಾನದಲ್ಲಿ ಸೇರಿಸಿದ್ದಾರೆ. ಬುದ್ಧ, ಬಸವಾದಿ ಶರಣರು, ವಚನ ಕ್ರಾಂತಿಯ ಆಶಯಗಳು ಮತ್ತು ಕುವೆಂಪು, ನಾರಾಯಣಗುರು, ವಿವೇಕಾನಂದ ಸೇರಿ ಮುಂತಾದವರ ಆಶಯಗಳ ಮೂರ್ತರೂಪ ನಮ್ಮ ಸಂವಿಧಾನವಾಗಿದೆ. ಹೀಗಾಗಿ ಸಂವಿಧಾನ ಬದಲಾಯಿಸಲು ಬಂದಿರುವವರನ್ನು ಅಧಿಕಾರದಿಂದ ಕಿತ್ತೊಗೆಯದಿದ್ದರೆ ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಅರಮನೆ ಮೈದಾನದಲ್ಲಿ ನಡೆದ ಸಂವಿಧಾನ ಮತ್ತು ರಾಷ್ಟ್ರೀಯ ಐಕ್ಯತಾ ಸಮಾವೇಶದ (Constitution and National Unity conference) ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ನರೇಂದ್ರ ಮೋದಿಯವರ ಮಂತ್ರಿ ಮಂಡಲದಲ್ಲಿ ಇದ್ದುಕೊಂಡೇ ಕೇಂದ್ರ ಸಚಿವ ಆಗಿದ್ದ ಅನಂತ್ ಕುಮಾರ ಹೆಗ್ಡೆ, “ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು” ಎಂದು ಘೋಷಿಸಿದ್ದರು. ಈ ಘೋಷಣೆಯನ್ನು ಪ್ರಧಾನಿ ಮೋದಿಯವರಾಗಲೀ, ಅಮಿತ್ ಶಾ ಆಗಲೀ, ಬಿಜೆಪಿಯಾಗಲೀ, RSS ಆಗಲಿ ಖಂಡಿಸಲಿಲ್ಲ. ವಿರೋಧಿಸಲಿಲ್ಲ. ಹೀಗಾಗಿ BJP ಮತ್ತು RSS ನ ಅಜೆಂಡಾವನ್ನು, ಉದ್ದೇಶವನ್ನು ಅನಂತಕುಮಾರ ಹೆಗ್ಡೆ ಬಾಯಲ್ಲಿ ಹೇಳಿಸಿದರು. ಈ ಬಗ್ಗೆ ಇಡಿ ದೇಶದ ಜನತೆ ಎಚ್ಚೆತ್ತುಕೊಳ್ಳಬೇಕು ಎಂದರು.
ಈ ದೇಶ, ನಮ್ಮ ನಾಡಿನ ದುಡಿಯುವವರ ಹಕ್ಕುಗಳು, ಶ್ರಮಿಕರು, ರೈತರು, ಕಾರ್ಮಿಕರು ಮತ್ತು ಮಹಿಳಾ ಸಮುದಾಯದ ಅಸ್ತಿತ್ವ ಅಡಗಿರುವುದೇ ನಮ್ಮ ಸಂವಿಧಾನದಲ್ಲಿ. ಸಂವಿಧಾನ ಬದಲಾವಣೆಯಿಂದ ಈ ಎಲ್ಲಾ ಸಮುದಾಯಗಳು ಮರಳಿ ಗುಲಾಮಗಿರಿಗೆ ದೂಡಲ್ಪಡುತ್ತಾರೆ. ಸಂವಿಧಾನ ಇಲ್ಲದ ಸಂದರ್ಭದಲ್ಲಿ ಶೂದ್ರ, ದಲಿತ ಮತ್ತು ಶ್ರಮಿಕರನ್ನು ಹೇಗೆ ನಡೆಸಿಕೊಳ್ಳಲಾಗುತ್ತಿತ್ತು ಎನ್ನುವುದನ್ನು ಸ್ಮರಿಸಿಕೊಳ್ಳಿ ಎಂದರು.
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಎಚ್.ಸಿ.ಮಹದೇವಪ್ಪ, INDIA ಒಕ್ಕೂಟದ ಮುಖಂಡರಾದ ಫಾರೂಕ್ ಅಬ್ದುಲ್ಲಾ, ಸೀತಾರಾಮ್ ಯೆಚೂರಿ ಸೇರಿ 18 ರಾಜ್ಯಗಳ 40 ಮಂದಿ ಮುಖಂಡರು, 12 ಪಕ್ಷಗಳ ನಾಯಕರು ಸಂವಿಧಾನ ರಕ್ಷಣೆ ಮಾಡಬೇಕಾದ ಅನಿವಾರ್ಯತೆ ಕುರಿತು ಜನರನ್ನು ಜಾಗೃತಗೊಳಿಸಿದರು.
ಇದನ್ನೂ ಓದಿ | Basavaraja Rayareddy : ಬಸ್ಸಲ್ಲಿ ಮುಸ್ಲಿಮರು ಮಾತ್ರ ಹೋಗೋದಾ? ಗೃಹಲಕ್ಷ್ಮಿ ಮುಸ್ಲಿಮರಿಗೆ ಮಾತ್ರಾನಾ?: ರಾಯರೆಡ್ಡಿ ಪ್ರಶ್ನೆ
ಸಂವಿಧಾನಕ್ಕೆ ಧಕ್ಕೆಯಾದ್ರೆ ದೇಶದಲ್ಲಿ ಸರ್ವಾಧಿಕಾರಿ ಆಡಳಿತ: ಮಲ್ಲಿಕಾರ್ಜುನ ಖರ್ಗೆ
ಬೆಂಗಳೂರು: ಪ್ರಜಾಪ್ರಭುತ್ವ ಉಳಿದರೆ ದೇಶ ಸಮೃದ್ಧಿಯಾಗಿರುತ್ತದೆ. ಸಂವಿಧಾನದ ಆಶಯಗಳನ್ನು ಇಟ್ಟುಕೊಂಡು ಕೆಲಸ ಮಾಡುವ ಸರ್ಕಾರ ಕೇಂದ್ರದಲ್ಲಿ ಇಲ್ಲ. ಸಂವಿಧಾನ (Constitution and National Unity) ಬದಲಾವಣೆ ಮಾಡಬೇಕು ಎಂದು ಸಾಕಷ್ಟು ಜನ ಪ್ರಯತ್ನ ಮಾಡುತ್ತಿದ್ದಾರೆ. ಬರುವ ಚುನಾವಣೆಯಲ್ಲಿ ನೀವು ಗಟ್ಟಿಯಾಗಿ, ಒಗ್ಗಟಾಗಿ ನಿಲ್ಲದೆ ಹೋದರೆ, ಸಂವಿಧಾನಕ್ಕೆ ಧಕ್ಕೆ ಆದರೆ, ಮುಂದೆ ಸರ್ವಾಧಿಕಾರಿ ಆಡಳಿತ ಬರಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶದ ಸಮಾರೋಪ (Constitution and National Unity Conference) ಸಮಾರಂಭದಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮ ಬಹಳ ಮಹತ್ವದ್ದು, ಸಂವಿಧಾನ ಉಳಿದರೆ ದೇಶದಲ್ಲಿ ಐಕ್ಯತೆ ಉಳಿಯುತ್ತದೆ ಎಂದರು.
ಇಡೀ ಪ್ರಪಂಚದಲ್ಲಿ ಅಂಬೇಡ್ಕರ್ ಬರೆದ ಸಂವಿಧಾನ ಉತ್ತಮವಾಗಿದೆ. ಒಬ್ಬರಿಗೆ ಒಂದು ಮತ, ಒಂದು ಬೆಲೆ ಕೊಟ್ಟಿದ್ದು ಅಂಬೇಡ್ಕರ್. ಗಂಡು ಮಕ್ಕಳಿಗೆ ಎಷ್ಟು ಸ್ವಾತಂತ್ರ್ಯ ಇದೆಯೋ ಅಷ್ಟೇ ಸ್ವಾತಂತ್ರ್ಯ ಹೆಣ್ಣು ಮಕ್ಕಳಿಗೂ ಇರಬೇಕು. ಮೊದಲು ಮಹಿಳೆಯರಿಗೆ ಮತದಾನ ಹಕ್ಕು ಇರಲಿಲ್ಲ. ಆದರೆ ಅಂಬೇಡ್ಕರ್, ನೆಹರು ಅವರು ಮತದಾನ ಹಕ್ಕು ಎಲ್ಲರಿಗೂ ಇರಬೇಕು ಎಂದು ಮತದಾನದ ಹಕ್ಕು ನೀಡಿದರು. ಆದರೆ, ಕೆಲ ಜನ ತಮ್ಮದೆ ತತ್ವ ಹೇಳಿ ಜನರಿಗೆ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಎಲ್ಲಿ ವಿದ್ಯಾವಂತರು ತಮ್ಮ ಹಕ್ಕಿಗೆ ಹೋರಾಟ ಮಾಡಿದ್ದಾರೋ ಅಲ್ಲಿ ಪ್ರಜಾಪ್ರಭುತ್ವ ಉಳಿದಿದೆ. ಕರ್ನಾಟಕ, ಮಣಿಪುರ, ಗೋವಾ, ಉತ್ತರಾಖಂಡ್‌ನಲ್ಲಿ ಶಾಸಕರ ಖರೀದಿ ನಡೆಯಿತು. ಇದು ಪ್ರಜಾಪ್ರಭುತ್ವದ ಸಂವಿಧಾನ ಪ್ರಕಾರ ಸರಿಯೇ ಎಂಬುವುದನ್ನು ಮೋದಿ ಹೇಳಬೇಕು. ಎಲೆಕ್ಷನ್ ರೂಲ್ಸ್ ಪ್ರಕಾರ ಆರಿಸಿ ಬರೋವವರನ್ನು ನೀವು ಕರೆದುಕೊಳ್ಳುತ್ತಿದ್ದೀರಾ? ಇದೇ ಚಟ ಮುಂದುವರಿದ್ರೆ ದೇಶದಲ್ಲಿ ಸರ್ವಾಧಿಕಾರಿ ಆಡಳಿತ ಬರುತ್ತೆ ಎಂದು ಹೇಳಿದರು.
ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಒಪ್ಪಿಸುವಾಗ, ಅನೇಕ ಬಾರಿ ಸ್ವಾತಂತ್ರ್ಯ ಬಂದಾಗ ಕಳೆದುಕೊಂಡಿದ್ದೇವೆ. ಈ ಬಾರಿ ಕಳೆದುಕೊಂಡರೆ ಮತ್ತೆ ಸಿಗಲ್ಲಾ, ನಮ್ಮ ಕೊನೆ ರಕ್ತದ ಹನಿ ಇರುವವರಿಗೂ ದೇಶದ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಣೆ ಮಾಡಬೇಕು ಎಂದಿದ್ದರು. ಆದರೆ, ಮೋದಿ ರಕ್ತ ಹೀರುತ್ತಿದ್ದಾರೆ. ನಮ್ಮ ಗ್ಯಾರಂಟಿ ಇದೆ, ನಿಮ್ಮದು ಯಾವ ಗ್ಯಾರಂಟಿ ಇದೆ. ಟ್ಯಾಕ್ಸ್ ನಾವು ಕಟ್ಟುತ್ತೇವೆ, ನಿಮ್ಮದು ಯಾವುದು ಗ್ಯಾರಂಟಿ? ಒಬ್ಬ ವ್ಯಕ್ತಿ ಈ ರೀತಿ ಹೇಳುತ್ತಾನೆ ಎಂದರೆ ದೇಶವನ್ನು ಸರ್ವಾಧಿಕಾರದ ಕಡೆ ಒಯ್ಯುತ್ತಾನೆ ಎಂದರ್ಥ ಎಂದರು.
ಇದನ್ನೂ ಓದಿ | Pralhad Joshi: ಸಿದ್ದರಾಮಯ್ಯನವರೇ ರಾಹುಲ್ ಗಾಂಧಿಯಂತೆ ಮಾತಾಡ್ಬೇಡಿ: ಪ್ರಲ್ಹಾದ್ ಜೋಶಿ
ದೇಶದ 140 ಕೋಟಿ ಜನರಿಗೆ ಈ ಸಂವಿಧಾನದಿಂದ ಅನುಕೂಲ ಆಗುತ್ತೆ. ಕೆಲವರಿಗೆ ಬೈಬಲ್, ಕುರಾನ್ ಪ್ರೀತಿ ಇರಬಹುದು. ಆದರೆ, ಎಲ್ಲರನ್ನು ಮನುಷ್ಯರನ್ನಾಗಿ ಮಾಡಿದ್ದು ಈ ಸಂವಿಧಾನ. ದೇಹದಲ್ಲಿ ಕೊನೆ ರಕ್ತದ ಹನಿ ಇರುವವರೆಗೂ ಹೋರಾಟ ಮಾಡಬೇಕು ಎಂದು ಅಂಬೇಡ್ಕರ್ ಹೇಳಿದ್ದಾರೆ. ನೀವೆಲ್ಲ ಹುಷಾರಾಗಿ ಇರಬೇಕು, ಜಾಗೃತರಾಗಿರಬೇಕು, ಮನೆಮನೆಗೂ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಬೇಕು. ಇಲ್ಲವಾದರೆ ಐದು ಸಾವಿರ ವರ್ಷಗಳ ಹಿಂದಿನ ಜೀವನಕ್ಕೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.