Site icon Vistara News

Kannada Writer | ಕನ್ನಡದ ಖ್ಯಾತ ಸಾಹಿತಿ, ನಾಡೋಜ ಪ್ರೊ. ಎಂ.ಎಚ್.ಕೃಷ್ಣಯ್ಯ ಇನ್ನಿಲ್ಲ

Kannada Writer

ಬೆಂಗಳೂರು: ಕನ್ನಡದ ಖ್ಯಾತ ಸಾಹಿತಿ (Kannada Writer), ವಿದ್ವಾಂಸರು, ವಿಮರ್ಶಕರು, ಬಿಎಂಶ್ರೀ ಪ್ರತಿಷ್ಠಾನದ ಗೌರವ ಅಧ್ಯಕ್ಷರೂ ಆದ ನಾಡೋಜ ಪ್ರೊ. ಎಂ.ಎಚ್.‌ಕೃಷ್ಣಯ್ಯ ಅವರು ನಿಧನರಾಗಿದ್ದಾರೆ. ಲಲಿತಕಲಾ ಕ್ಷೇತ್ರದ ಒಡನಾಡಿಯಾಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ ಅವರು ನಾಡಿನ ಮನೆಮಾತಾಗಿದ್ದರು. ಹಲವಾರು ದಿನಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಶುಕ್ರವಾರ ಮಧ್ಯಾಹ್ನ ಕೊನೆಯುಸಿರೆಳೆದರು.

ಕನ್ನಡ ಸಾಹಿತ್ಯ ಸೇವೆ

ಕಾವ್ಯಭಾಷೆ, ಶೃಂಗಾರ ಲಹರಿ, ಆಲೋಕನ, ಬಿರಿಮೊಗ್ಗು (ಪ್ರಬಂಧ), ಹೊಳಪು ಝಳಪು (ಕವನ), ಕುವೆಂಪು ಸಾಹಿತ್ಯ ಚಿತ್ರ ಸಂಪುಟ, ಗ್ರಹಿಕೆ ಮತ್ತು ಪ್ರಜ್ಞೆ ಸೇರಿ ಹಲವಾರು ಕೃತಿಗಳ ಮೂಲಕ ಕೃಷ್ಣಯ್ಯ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇವರ ನಿಧನಕ್ಕೆ ಲಲಿತಕಲಾ ಅಕಾಡೆಮಿ ಅಧ್ಯಕ್ಷರು ಸೇರಿ ರಾಜ್ಯದ ಹಲವು ಕಲಾವಿದರು, ಗಣ್ಯರು ಸಂತಾಪ ಸೂಚಿಸಿದ್ದಾರೆ.

1937ರ ಜುಲೈ 21ರಂದು ಮೈಸೂರಿನಲ್ಲಿ ಜನಿಸಿದ ಕೃಷ್ಣಯ್ಯ ಅವರು ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ್ದರು. ಲಲಿತಕಲೆ, ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ರಾಜ್ಯೋತ್ಸವ ಪ್ರಶಸ್ತಿ, ಮಾಸ್ತಿ ಪುರಸ್ಕಾರ ಸೇರಿ ಹಲವು ಪ್ರಶಸ್ತಿಗಳು ಇವರನ್ನು ಅರಸಿಕೊಂಡು ಬಂದಿವೆ. ಕೃಷ್ಣಯ್ಯ ಅವರ ಅಂತ್ಯಸಂಸ್ಕಾರವು ಬೆಂಗಳೂರಿನ ಹರಿಶ್ಚಂದ್ರ ಘಾಟ್‌ನಲ್ಲಿ ಶನಿವಾರ ಬೆಳಗ್ಗೆ 11 ಗಂಟೆಗೆ ನಡೆಯಲಿದೆ.

ಡಾ. ಮಹೇಶ್‌ ಜೋಶಿ ಸಂತಾಪ

ಪ್ರೊ. ಎಂ ಎಚ್‌ ಕೃಷ್ಣಯ್ಯ ಅವರ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್‌ ಜೋಶಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾವಿರಾರು ಮಂದಿಯನ್ನು ಸಜ್ಜುಗೊಳಿಸಿದ್ದ ಕೀರ್ತಿ ಅವರದು ಎಂದು ಡಾ. ಜೋಶಿ ಬಣ್ಣಿಸಿದ್ದಾರೆ.

Exit mobile version