Site icon Vistara News

Bangalore Rain : ಬೆಂಗಳೂರಿನ 18 ಸೇರಿ ರಾಜ್ಯದ ಅಂಡರ್‌ಪಾಸ್‌ಗಳ ಬಗ್ಗೆ ವರದಿ ಕೇಳಿದ ಡಿಕೆಶಿ

Report On All Underpasses Ordered, Says Karnataka Dy CM Shivakumar after techies death

Report On All Underpasses Ordered, Says Karnataka Dy CM Shivakumar after techies death

ಬೆಂಗಳೂರು: ವಿಧಾನಸೌಧದಿಂದ ಕೂಗಳತೆ ದೂರದಲ್ಲಿರುವ ಕೆ.ಆರ್‌. ಸರ್ಕಲ್‌ ಅಂಡರ್‌ಪಾಸ್‌ನೊಳಗೆ (Under pass) ನೀರಿನಲ್ಲಿ ಕಾರೊಂದು ಸಿಲುಕಿ ಇನ್ಫೋಸಿಸ್‌ನಲ್ಲಿ ಉದ್ಯೋಗಿಯಾಗಿದ್ದ ಯುವತಿ ಭಾನುರೇಖಾ (Bhanurekha) ಮೃತಪಟ್ಟ ಘಟನೆಯ ಬೆನ್ನಿಗೇ ಬೆಂಗಳೂರಿನ 18 ಸೇರಿದಂತೆ ರಾಜ್ಯದ ಎಲ್ಲ ಅಂಡರ್‌ ಪಾಸ್‌ಗಳ ಪರಿಸ್ಥಿತಿಯ ಬಗ್ಗೆ ವರದಿ ಸಲ್ಲಿಸುವಂತೆ (Study Report) ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DK Shivakumar) ಆದೇಶ ನೀಡಿದ್ದಾರೆ.

ಬೆಂಗಳೂರಿನಲ್ಲಿ ಉದ್ಯೋಗ ಪಡೆದಿದ್ದ ಭಾನುರೇಖಾ ಅವರು ಮೂಲತಃ ಆಂಧ್ರ ಪ್ರದೇಶದ ವಿಜಯವಾಡಾದವರು. ಅವರಿಗೆ ಬೆಂಗಳೂರಿನಲ್ಲಿ ಕೆಲಸ ಸಿಕ್ಕಿದ ಖುಷಿಯಲ್ಲಿ ಬಂಧುಗಳು ಆಗಮಿಸಿದ್ದರು. ಅವರಿಗೆ ಬೆಂಗಳೂರು ತೋರಿಸುವ ಉತ್ಸಾಹದಲ್ಲಿದ್ದರು ಭಾನರೇಖಾ. ಭಾನುವಾರ ಸಂಜೆ ಭಾರಿ ಮಳೆ ಸುರಿದ ಹಿನ್ನೆಲೆಯಲ್ಲಿ ಅವರು ಬೆಂಗಳೂರು ದರ್ಶನಕ್ಕೆಂದು ಗೊತ್ತು ಮಾಡಿದ್ದ ಕಾರು ಕೆಆರ್ ಸರ್ಕಲ್‌ ಅಂಡರ್‌ ಪಾಸ್‌ನಲ್ಲಿ ನೀರಿನಲ್ಲಿ ಸಿಲುಕಿತ್ತು. ಕಾರಿನಲ್ಲಿದ್ದ ಚಾಲಕ ಸೇರಿದಂತೆ ಆರು ಮಂದಿ ಹರಸಾಹಸದಿಂದ ರಕ್ಷಿಸಲ್ಪಟ್ಟರೆ ಅಷ್ಟು ಹೊತ್ತಿಗೆ ನೀರಿನೊಳಗೆ ಮುಳುಗಿ ಭಾನುರೇಖಾ ಪ್ರಾಣ ಬಿಟ್ಟಿದ್ದರು.

ಭಾನುವಾರ ಸಂಜೆಯೇ ಸಿಎಂ ಸಿದ್ದರಾಮಯ್ಯ ಮತ್ತು ರಾತ್ರಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದರು. ಅವರ ಜತೆ ಬಿಬಿಎಂಪಿ ಕಮಿಷನರ್‌ ಆಗಿರುವ ತುಷಾರ್‌ ಗಿರಿನಾಥ್‌ ಅವರು ಇದ್ದರು.

ಈ ನಡುವೆ, ಸೋಮವಾರ ಬೆಳಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು, ರಾಜ್ಯದ ಎಲ್ಲ ಅಂಡರ್‌ ಪಾಸ್‌ಗಳ ಪರಿಸ್ಥಿತಿಯ ವರದಿ ತರಿಸಿಕೊಳ್ಳುತ್ತಿರುವುದಾಗಿ ತಿಳಿಸಿದರು.

ʻʻಎಲ್ಲವನ್ನೂ ಒಂದೇ ದಿನದಲ್ಲಿ ಸರಿ ಮಾಡುತ್ತೇ ಎಂದು ನಾನು ಹೇಳುವುದಿಲ್ಲ. ಆದರೆ, ಇಂಥ ಘಟನೆಗಳು ಮರುಕಳಿಸುವುದಿಲ್ಲ ಎಂದು ಭರವಸೆ ನೀಡುತ್ತೇನೆ. ಜನರ ಪ್ರಾಣ ರಕ್ಷಣೆ ನಮ್ಮ ಕರ್ತವ್ಯʼʼ ಎಂದು ಡಿ.ಕೆ ಶಿವಕುಮಾರ್‌ ಹೇಳಿದರು.

ಸ್ಥಳಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೃತಪಟ್ಟ ಯುವತಿಯ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿದ್ದರು. ಮಳೆ ಬಂದ ಸಂದರ್ಭದಲ್ಲಿ ಅಂಡರ್‌ ಪಾಸ್‌ಗಳಲ್ಲಿ ಸಂಚಾರ ನಿರ್ಬಂಧಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಮೃತದೇಹ ವಿಜಯವಾಡಾಕ್ಕೆ ರವಾನೆ

ಭಾನುವಾರ ಮೃತಪಟ್ಟ ಯುವತಿ ಭಾನುರೇಖಾ ಅವರ ಮೃತದೇಹ ರಾತ್ರಿ ಇಡೀ ಸೈಂಟ್‌ ಮಾರ್ಥಾಸ್‌ ಆಸ್ಪತ್ರೆಯಲ್ಲೇ ಇತ್ತು. ಬೆಳಗ್ಗೆ ಅದನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಯಿತು. ಅಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ ಬಳಿಕ ಶವವನ್ನು ಕುಟುಂಬಿಕರಿಗೆ ಬಿಟ್ಟುಕೊಡಲಾಯಿತು. ಆಂಧ್ರ ಪ್ರದೇಶದ ವಿಜಯವಾಡಕ್ಕೂ ಸರ್ಕಾರದ ವೆಚ್ಚದಲ್ಲೇ ಶವವನ್ನು ಕಳುಹಿಸಿಕೊಡಲಾಯಿತು.

ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ ಸಿಕ್ಕಿದ ಖುಷಿಯಲ್ಲಿ ಬಂಧುಗಳನ್ನು ಕರೆಸಿಕೊಂಡು ಅವರಿಗೆ ಬೆಂಗಳೂರು ದರ್ಶನ ಮಾಡಿಸುವ ಸಂಭ್ರಮದಲ್ಲಿದ್ದ ಆ ಯುವತಿಯನ್ನು ಬೆಂಗಳೂರಿನ ರಕ್ಕಸ ಮಳೆ ಬಲಿ ಪಡೆದಿರುವುದು ಎಲ್ಲರನ್ನೂ ಮಾಯದ ಗಾಯವಾಗಿ ಕಾಡಿದೆ.

ಇದನ್ನೂ ಓದಿ : Bangalore Rain: ಬೆಂಗಳೂರಲ್ಲಿ ಅಸುರಕ್ಷಿತ ಅಂಡರ್‌ಪಾಸ್‌ ಬಂದ್‌; ಮಳೆಗಾಲ ಮುಗಿಯುವವರೆಗೆ ಕ್ರಮ

Exit mobile version