Site icon Vistara News

Republic Day 2023: ಕರ್ನಾಟಕದ ನಾರಿಶಕ್ತಿ ಟ್ಯಾಬ್ಲೋ ಜತೆ ಉತ್ತರ ಕನ್ನಡದ ಹಾಲಕ್ಕಿ ಸುಗ್ಗಿ ಕುಣಿತ

NariShakti Tableau uttara kannada

ಕಾರವಾರ: ನವ ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ (Republic Day 2023) ಪರೇಡ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಹಾಲಕ್ಕಿ ಸುಗ್ಗಿ ಕುಣಿತದ ಪ್ರದರ್ಶನವಿದೆ. ಕರ್ನಾಟಕದ ನಾರಿಶಕ್ತಿ ಟ್ಯಾಬ್ಲೋ ಜತೆಗೆ ಸುಗ್ಗಿ ಕುಣಿತಕ್ಕೆ ಇದೇ ಮೊದಲ ಬಾರಿಗೆ ಅವಕಾಶ ದೊರೆತಿದೆ.

74ನೇ ಗಣರಾಜ್ಯೋತ್ಸವದ ಅಂಗವಾಗಿ ರಾಜಪಥದಲ್ಲಿ ಪ್ರತಿ ವರ್ಷದಂತೆ ನಡೆಯಲಿರುವ ಪಥಸಂಚಲನದಲ್ಲಿ ಈ ಬಾರಿ ಕರ್ನಾಟಕದ ಸಾಧಕರಾದ ಪದ್ಮಶ್ರೀ ಪುರಸ್ಕಾರಕ್ಕೆ ಪಾತ್ರರಾಗಿರುವ ಸಾಲುಮರದ ತಿಮ್ಮಕ್ಕ, ವೃಕ್ಷಮಾತೆ ತುಳಸಿ ಗೌಡ ಹಾಗೂ ಸೂಲಗಿತ್ತಿ ನರಸಮ್ಮ ಅವರ ಟ್ಯಾಬ್ಲೋ ಪ್ರದರ್ಶನವಿದೆ. ಈ ಟ್ಯಾಬ್ಲೋ ಜತೆ ಸುಗ್ಗಿ ಕುಣಿತ ಇರುವುದು ಉತ್ತರ ಕನ್ನಡ ಜಿಲ್ಲೆ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿದೆ.

ಇದನ್ನೂ ಓದಿ: Road Accident: ಮಲೆಮಹದೇಶ್ವರ ಬೆಟ್ಟ ಹತ್ತುತ್ತಿದ್ದ ಗುಜರಾತ್‌ ಬಸ್‌ ಪಲ್ಟಿ; 15ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲು

ಪ್ರದರ್ಶನಕ್ಕೆ ಕಲಾತಂಡ ಸಜ್ಜು

ಹಾಲಕ್ಕಿ ಸಮುದಾಯದವರು ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಸಮುದಾಯಗಳಲ್ಲಿ ಒಂದಾಗಿದ್ದು, ಸುಗ್ಗಿ ಕುಣಿತವು ಇವರ ಸಂಸ್ಕೃತಿಯ ಪ್ರತೀಕವಾಗಿದೆ. ಕಲಾವಿದ ಪುರುಷೋತ್ತಮ ಗೌಡ ನೇತೃತ್ವದಲ್ಲಿ 25 ಕಲಾವಿದರ ತಂಡ ದೆಹಲಿಗೆ ತೆರಳಿದ್ದು, ಅಭ್ಯಾಸದಲ್ಲಿ ನಿರತವಾಗಿವೆ. ಸೋಮವಾರ (ಜ.23) ಅಂತಿಮ ಹಂತದ ತಾಲೀಮು ಸಹ ನಡೆದಿದೆ.

ಗಮನಸೆಳೆಯುವ ಟ್ಯಾಬ್ಲೋ

ಪಥಸಂಚಲನದಲ್ಲಿ ನಾರಿಶಕ್ತಿ ಟ್ಯಾಬ್ಲೋಗೆ ಕೊನೇ ಹಂತದಲ್ಲಿ ಅನುಮತಿ ದೊರೆತಿದ್ದು, ಇರುವ ಅಲ್ಪ ಅವಧಿಯಲ್ಲಿಯೇ ವಿನ್ಯಾಸಕಾರ ಶಶಿಧರ ಅಡಪ ನೇತೃತ್ವದಲ್ಲಿ ತಂಡ ಟ್ಯಾಬ್ಲೋವನ್ನು ಸಿದ್ಧಪಡಿಸಿದೆ. ಇನ್ನು ಸುಗ್ಗಿ ಕುಣಿತ ತಂಡದಲ್ಲಿ 12 ಹೆಣ್ಣು ಮಕ್ಕಳು ಹಾಗೂ 13 ಮಂದಿ ಪುರುಷರಿದ್ದಾರೆ. ಜನವರಿ 16ರಂದೇ ನವ ದೆಹಲಿಗೆ ಆಗಮಿಸಿರುವ ತಂಡ ನಿರಂತರ ಅಭ್ಯಾಸ ನಡೆಸಿದೆ. ದೆಹಲಿಯ ಆರ್ಮಿ ಕ್ಯಾಂಪ್‌ನಲ್ಲಿ ಈಚೆಗೆ ನಡೆದ ರಾಷ್ಟ್ರಮಟ್ಟದ ಕಲಾ ಪ್ರದರ್ಶನದಲ್ಲಿಯೂ ಈ ತಂಡವು ಉತ್ತಮ ಪ್ರದರ್ಶನ ನೀಡಿ ಜನರ ಮನಸ್ಸನ್ನು ಗೆದ್ದಿದೆ ಎಂದು ಪುರುಷೋತ್ತಮ್‌ ಹೇಳಿದ್ದಾರೆ.

ಇದನ್ನೂ ಓದಿ: Vasant Panchami 2023 : ನಾಳೆ ಸರಸ್ವತಿ ಅವತರಿಸಿದ ದಿನ ವಸಂತ ಪಂಚಮಿ

ಏನಿದು ಸುಗ್ಗಿ ಕುಣಿತ?

ಹಾಲಕ್ಕಿ ಒಕ್ಕಲಿಗ ಸಮುದಾಯದವರು ಪ್ರತಿ ವರ್ಷ ಹೋಳಿ ಹಬ್ಬದ ವೇಳೆ ಸುಗ್ಗಿ ಕುಣಿತವನ್ನು ಮಾಡುತ್ತಾರೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ತಾಲೂಕುಗಳಲ್ಲಿ ಇದು ಕಂಡುಬರಲಿದೆ. ಹಾರ, ತುರಾಯಿ, ಕುಂಚ, ಗುಮ್ಮಟೆ ವಾದ್ಯ, ಅವರ ವೇಷ ಭೂಷಣಗಳೇ ಈ ಸುಗ್ಗಿ ಕುಣಿತದ ಪ್ರಮುಖ ಆಕರ್ಷಣೆಯಾಗಿರಲಿದೆ. ಕೃಷಿಯನ್ನೇ ಮೂಲ ಕಸುಬನ್ನಾಗಿಸಿಕೊಂಡಿರುವ ಹಾಲಕ್ಕಿ ಸಮುದಾಯದವರು ಕೃಷಿ ಚಟುವಟಿಕೆ ಮುಗಿದ ಬಳಿಕ ಬರುವ ಹೋಳಿ ವೇಳೆ ಮನೆ ಮನೆಗೆ ತೆರಳಿ ಸುಗ್ಗಿ ಆಡುವುದು ವಾಡಿಕೆ.

Exit mobile version