Site icon Vistara News

Republic Day : ಕರ್ತವ್ಯ ಪಥದಲ್ಲಿ ಕರ್ನಾಟಕದ ʼನಾರಿ ಶಕ್ತಿʼ ಪ್ರದರ್ಶನ; ಗಮನ ಸೆಳೆದ ಸುಗ್ಗಿ ನೃತ್ಯ: ಸಿಎಂ ಬೊಮ್ಮಾಯಿ ಪ್ರಶಂಸೆ

republic-day-tableau of karnataka

ಬೆಂಗಳೂರು: ಗಣರಾಜ್ಯ ದಿನದಂದು (Republic Day) ನವದೆಹಲಿಯ ಕರ್ತವ್ಯ ಪಥದಲ್ಲಿ ನಡೆದ ಸ್ತಬ್ಧಚಿತ್ರ ಪ್ರದರ್ಶನದಲ್ಲಿ ಕರ್ನಾಟಕದ ʼನಾರಿ ಶಕ್ತಿʼ ಸ್ತಬ್ಧಚಿತ್ರ ಗಮನ ಸೆಳೆಯಿತು.

ಈ ಬಾರಿ ಕರ್ನಾಟಕದ ಸಾಧಕರಾದ ಪದ್ಮಶ್ರೀ ಪುರಸ್ಕಾರಕ್ಕೆ ಪಾತ್ರರಾಗಿರುವ ಸಾಲುಮರದ ತಿಮ್ಮಕ್ಕ, ವೃಕ್ಷಮಾತೆ ತುಳಸಿ ಗೌಡ ಹಾಗೂ ಸೂಲಗಿತ್ತಿ ನರಸಮ್ಮ ಅವರ ಸ್ತಬ್ಧ ಪ್ರದರ್ಶನವಾಯಿತು. ಸೂಲಗಿತ್ತಿ ನರಸಮ್ಮ ಅವರ ಪ್ರತಿಮೆಯು ಮಗುವನ್ನು ಕೈಯಲ್ಲಿ ಹಿಡಿದು ತೂಗುತ್ತಿರುವಂತೆ ಚಲನೆ ನೀಡಲಾಗಿತ್ತು. ಸಾಲು ಮರದ ತಿಮ್ಮಕ್ಕ ಅವರು ವೃಕ್ಷಗಳಿಗೆ ನೀರುಣಿಸುತ್ತಿರುವಂತೆ ಯಾಂತ್ರಿಕ ಚಲನೆ ನೀಡಲಾಗಿತ್ತು.

ಸ್ತಬ್ಧಚಿತ್ರದ ಎರಡೂ ಬದಿಯಲ್ಲಿ ಉತ್ತರ ಕನ್ನಡದ ಸುಗ್ಗಿ ಕುಣಿತ ಗಮನ ಸೆಳೆಯಿತು. ಹಾಲಕ್ಕಿ ಸಮುದಾಯದವರು ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಸಮುದಾಯಗಳಲ್ಲಿ ಒಂದಾಗಿದ್ದು, ಸುಗ್ಗಿ ಕುಣಿತವು ಈ ಸಮುದಾಯದ ಸಂಸ್ಕೃತಿಯ ಪ್ರತೀಕವಾಗಿದೆ. ಕಲಾವಿದ ಪುರುಷೋತ್ತಮ ಗೌಡ ನೇತೃತ್ವದಲ್ಲಿ 25 ಕಲಾವಿದರ ತಂಡ ಈ ಪ್ರದರ್ಶನ ನೀಡಿತು.

ಕರ್ನಾಟಕದ ಸ್ತಬ್ಧಚಿತ್ರವನ್ನು ಕಂಡ ಗಣ್ಯರು ಸಂತಸ ವ್ಯಕ್ತಪಡಿಸಿದರು. ಈ ಕುರಿತು ಟ್ವೀಟ್‌ ಮಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, “ಕರ್ನಾಟಕದ ಎಲೆಮರೆಯ ಮಹಿಳಾ ಸಾಧಕರ ಪ್ರತೀಕವಾಗಿ ಸೂಲಗಿತ್ತಿ ನರಸಮ್ಮ, ವೃಕ್ಷ ಮಾತೆ ತುಳಸಿ ಗೌಡ ಹಾಲಕ್ಕಿ ಹಾಗೂ ಸಾಲು ಮರದ ತಿಮ್ಮಕ್ಕರನ್ನೊಳಗೊಂಡ “ನಾರಿ ಶಕ್ತಿ” ಸ್ತಬ್ಧ ಚಿತ್ರ ನವದೆಹಲಿಯ ಕರ್ತವ್ಯ ಪಥದಲ್ಲಿ ವಿಜೃಂಭಿಸಿದೆ” ಎಂದಿದ್ದಾರೆ.

Exit mobile version