Site icon Vistara News

Water Crisis: ರಾಜಧಾನಿಯಲ್ಲಿ ನೀರಿನ ಸಮಸ್ಯೆ; ವರ್ಕ್‌ ಫ್ರಮ್‌ ಹೋಮ್‌, ಆನ್‌ಲೈನ್‌ ಕ್ಲಾಸ್‌ಗೆ ಬೇಡಿಕೆ

Request for work from home, online classes in wake of water crisis

ಬೆಂಗಳೂರು: ರಾಜಧಾನಿಯಲ್ಲಿ ಬೇಸಿಗೆ ಹಿನ್ನೆಲೆಯಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದೆ. ಕುಡಿಯಲು, ನಿತ್ಯಬಳಕೆಗೆ ನೀರಿಲ್ಲದೇ ನಗರವಾಸಿಗಳು ಪರದಾಡುವಂತಾಗಿದೆ. ಇದರಿಂದ ಉದ್ಯೋಗಿಗಳು, ವಿದ್ಯಾರ್ಥಿಗಳಿಗೆ ಕೆಲಸ ಹಾಗೂ ಶಾಲಾ, ಕಾಲೇಜುಗಳಿಗೆ ಹೋಗಲು ಸಮಸ್ಯೆಯಾಗುತ್ತಿದೆ. ಹೀಗಾಗಿ ಕೋವಿಡ್‌-19 ಸಮಯದಲ್ಲಿ ಅನುಸರಿಸಿದಂತೆ ಮಳೆಗಾಲ ಆರಂಭವಾಗುವವರೆಗೆ ವರ್ಕ್‌ ಫ್ರಮ್‌ ಹೋಂ ಹಾಗೂ ಆನ್‌ಲೈನ್‌ ಕ್ಲಾಸ್‌ ಮಾಡಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಬೇಡಿಕೆ ಇಟ್ಟಿದ್ದಾರೆ.

ಈ ಬಗ್ಗೆ ಅನೇಕ ನಾಗರಿಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿದ್ದಾರೆ. ಐಟಿ ಕಂಪನಿಗಳಿಗೆ ವರ್ಕ್‌ ಫ್ರಂ ಹೋಂ ಕಡ್ಡಾಯಗೊಳಿಸುವಂತೆ ಹಾಗೂ ಮಕ್ಕಳಿಗೆ ಮನೆಯಿಂದಲೇ ಆನ್‌ಲೈನ್ ತರಗತಿಗಳನ್ನು ತೆಗೆದುಕೊಳ್ಳಲು ಅವಕಾಶ ಮಾಡಿಕೊಡಬೇಕು. ಈ ವಿಧಾನ ಕೋವಿಡ್‌ ಸಮಯದಲ್ಲಿ ಯಶಸ್ವಿಯಾಗಿದ್ದು, ನೀರಿನ ಬಿಕ್ಕಟ್ಟಿನ ಸಮಯದಲ್ಲಿಯೂ ಕೆಲಸ ಮಾಡಲಿದೆ ಎಂದು ಕೋರಿದ್ದಾರೆ.

“ಬೆಂಗಳೂರು ನಗರದಲ್ಲಿ ಬಿಸಿಲಿನ ಪ್ರಮಾಣ ಏರಿಕೆಯಾಗಿ, ನೀರಿನ ಸಮಸ್ಯೆ ತಲೆದೋರಿದೆ. ಸದ್ಯ ಮಳೆ ಬೀಳುವ ಯಾವುದೇ ಸೂಚನೆ ಇಲ್ಲ. ಹೀಗಾಗಿ ಮುಂಗಾರು ಪ್ರಾರಂಭವಾಗುವವರೆಗೆ ಮನೆಯಿಂದ ಕೆಲಸ ಮಾಡುವ ಆಯ್ಕೆ ನೀಡುವುದನ್ನು ಪರಿಗಣಿಸಲು ಕರ್ನಾಟಕ ಸರ್ಕಾರಕ್ಕೆ ಇದು ಸುಸಮಯ ಎಂದು ಕರ್ನಾಟಕ ವೆದರ್‌ ಹೆಸರಿನ ಹವಾಮಾನ ಉತ್ಸಾಹಿಗಳ ಗುಂಪು ಸಿಎಂಗೆ ಮನವಿ ಮಾಡಿದೆ.

ಇದನ್ನೂ ಓದಿ | Water Crisis: ಈಜು ಕೊಳಕ್ಕೆ ನೀರು ಬಳಸಿದರೂ ಬೀಳುತ್ತೆ ಭಾರಿ ದಂಡ; ಜಲ ಮಂಡಳಿ ಎಚ್ಚರಿಕೆ

“ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅನುಮತಿಸಿದರೆ, ಅನೇಕರು ತಮ್ಮ ಊರುಗಳಿಗೆ ಹಿಂತಿರುಗುತ್ತಾರೆ. ಈ ಮೂಲಕ ನಗರದ ಮೇಲಿನ ಒತ್ತಡ ಕಡಿಮೆಯಾಗಲಿದೆ ” ಎಂದು ಸಿಟಿಜನ್ಸ್‌ ಅಜೆಂಡಾ ಫಾರ್‌ ಬೆಂಗಳೂರು ಮನವಿ ಮಾಡಿದೆ.

ನಮ್ಮ ವೈಟ್‌ಫೀಲ್ಡ್‌ ಹೆಸರಿನ ವೈಟ್‌ಫೀಲ್ಡ್ ಪ್ರದೇಶದ ನಿವಾಸಿಗಳು ಮತ್ತು ನಿವಾಸಿ ಕಲ್ಯಾಣ ಸಂಘಗಳ ಒಕ್ಕೂಟವು, “ದಯವಿಟ್ಟು ಮನೆಯಿಂದಲೇ ಕೆಲಸ ಮಾಡುವುದನ್ನು ಅದರಲ್ಲೂ ವಿಶೇಷವಾಗಿ ಐಟಿ ಕ್ಷೇತ್ರಕ್ಕೆ ಕಡ್ಡಾಯ ಮಾಡಿ. ಇದು ಉದ್ಯೋಗಿಗಳಿಗೆ ತಮ್ಮ ಊರುಗಳಿಗೆ ಮರಳಲು ಅನುವು ಮಾಡಿಕೊಡುತ್ತದೆ. ಮತ್ತು ಬೆಂಗಳೂರಿನ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ! ದಯವಿಟ್ಟು ಶಾಲೆಗಳು ಮತ್ತು ಕಾಲೇಜುಗಳಿಗೆ ಆನ್‌ಲೈನ್‌ ಕ್ಲಾಸ್‌ ಕಡ್ಡಾಯಗೊಳಿಸಿ,” ಎಂದು ಕೋರಿದೆ.

ಐಎಂಡಿ ವಿಜ್ಞಾನಿ ಎ.ಪ್ರಸಾದ್ ಅವರ ಪ್ರಕಾರ, ಕಳೆದ ವರ್ಷ ಎಲ್‌ ನಿನೋ ಪರಿಣಾಮವಿತ್ತು, ಇದು ಈ ವರ್ಷವೂ ಮುಂದುವರಿದಿದ್ದು, ಅದರ ಪ್ರಭಾವ ಕಡಿಮೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಪ್ರತಿ ವರ್ಷ ಮಾರ್ಚ್‌ ಆರಂಭದಲ್ಲಿ ಬೇಸಿಗೆ ಆರಂಭವಾಗುತ್ತಿತ್ತು, ಆದರೆ, ಎಲ್‌ ನಿನೋ ಪರಿಣಾಮದಿಂದ ಈ ಬಾರಿ ಫೆಬ್ರವರಿ ಮೂರನೇ ಮತ್ತು ನಾಲ್ಕನೇ ವಾರದಲ್ಲಿ ಬೇಸಿಗೆ ಪ್ರಾರಂಭವಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Bangalore Water Crisis: ಜಲಬಿಕ್ಕಟ್ಟಿನ ನಡುವೆಯೂ‌, ಬಳಸಿದ ನೀರಿನ ನಿರ್ವಹಣೆಯಲ್ಲಿ ಬೆಂಗಳೂರು ‌2ನೇ ರ್‍ಯಾಂಕ್!

ಇನ್ನು ಈ ವರ್ಷ ಬೇಸಿಗೆಯ ತೀವ್ರತೆ ಹೆಚ್ಚಾಗಿರಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ರಾಜ್ಯದ 7082 ಗ್ರಾಮಗಳು ಹಾಗೂ ಬೆಂಗಳೂರು ನಗರ ಸೇರಿ 1193 ವಾರ್ಡ್‌ಗಳಲ್ಲಿ ನೀರಿನ ಬಿಕ್ಕಟ್ಟು ಉಂಟಾಗಿದೆ. ಇನ್ನು ಕೃಷ್ಣರಾಜಸಾಗರ ಜಲಾಶಯದಲ್ಲಿ ಬೇಸಿಗೆಗೆ ಆಗುವಷ್ಟು ನೀರಿನ ಪ್ರಮಾಣ ಇಲ್ಲದ ಕಾರಣ ಮುಂಬರುವ ದಿನಗಳಲ್ಲಿ ನೀರಿಗೆ ಮತ್ತಷ್ಟು ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.

Exit mobile version