ದಾವಣಗೆರೆ: ಒಬಿಸಿ ೩ಎ ಮೀಸಲಾತಿ ಹೊಂದಿದ್ದ ಒಕ್ಕಲಿಗರಿಗೆ 2ಸಿ ಹಾಗೂ ೩ಬಿ ಮೀಸಲಾತಿ ಹೊಂದಿದ್ದ ಪಂಚಮಸಾಲಿ ಸಮುದಾಯಕ್ಕೆ 2ಡಿ ಎಂದು ರಾಜ್ಯ ಸರ್ಕಾರ ಹೊಸದಾಗಿ ಪ್ರವರ್ಗ ಸೃಷ್ಟಿಸಿದೆ. ಈ ಬಗ್ಗೆ ನಮಗೆ ಪೂರ್ಣ ಮಾಹಿತಿ ಸಿಕ್ಕಿಲ್ಲ. ಮೀಸಲಾತಿ (Reservation) ಶೇಕಡಾ ಇಂತಿಷ್ಟೇ ನೀಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಎಲ್ಲಿಂದ ಕೊಡುತ್ತಾರೆ ಎಂದು ತೀರ್ಮಾನವಾಗಿಲ್ಲ. ಈ ಮೀಸಲಾತಿ ಪರಿಷ್ಕರಣೆ ಎಲೆಕ್ಷನ್ ಗಿಮಿಕ್ ಆಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಪಂಚಮಸಾಲಿ, ಒಕ್ಕಲಿಗರ ಒಬಿಸಿ ಮೀಸಲಾತಿ ಪರಿಷ್ಕರಣೆ ಬಗ್ಗೆ ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸದಾಗಿ ಸೃಜಿಸಿರುವ ಪ್ರವರ್ಗಗಳಿಗೆ ಮೀಸಲಾತಿ ಎಲ್ಲಿಂದ ಕೊಡುತ್ತಾರೆ. ಇಡಬ್ಲ್ಯುಎಸ್‌ನಿಂದ ಅಥವಾ ಜನರಲ್ ಕೆಟಗರಿಯಿಂದ ತೆಗೆದುಕೊಳ್ಳಬೇಕಾ ಎಂಬುದು ತೀರ್ಮಾನವಾಗಿಲ್ಲ ಎಂದು ತಿಳಿಸಿದರು.
1992ರಲ್ಲಿ ಸುಪ್ರೀಂಕೋರ್ಟ್ 9 ನ್ಯಾಯಾಧೀಶರ ಪೀಠ, ಮೀಸಲಾತಿ ಶೇ.50 ಮೀರಬಾರದು ಎಂದು ತೀರ್ಪು ನೀಡಿತ್ತು. ಕೇಂದ್ರದಿಂದ ಈಗಾಗಲೇ 49.5 ರಷ್ಟು ಮೀಸಲಾತಿ ಇದೆ. ಆದರೆ, ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ (ಇಡಬ್ಲ್ಯುಎಸ್) ಶೇ.೧೦ ಮೀಸಲಾತಿ ಕೊಟ್ಟಿದ್ದಾರೆ. ಇದರಿಂದ ಒಟ್ಟು ಮೀಸಲಾತಿ 59.5 ಆಗಿದೆ. ಇತ್ತೀಚೆಗೆ ಎಸ್‌ಸಿ-ಎಸ್‌ಟಿಗೆ ಶೇ.6 ಮೀಸಲಾತಿ ಕೊಡುತ್ತೇವೆ ಎಂದು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ಇದೆಲ್ಲ ಸೇರಿ ಎಷ್ಟು ಪ್ರತಿಶತ ಆಗುತ್ತದೆ ಎಂಬುದನ್ನು ನೋಡಿ ಆಮೇಲೆ ಮಾತನಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ | Reservation | ಪಂಚಮಸಾಲಿ-ಒಕ್ಕಲಿಗರಿಗೆ 2D ವರ್ಗ ಸೃಜನೆ: 2A ಮೀಸಲಾತಿ ಕುರಿತು ಸರ್ಕಾರದ ಮಹತ್ವದ ನಿರ್ಧಾರ
ಮಹದಾಯಿ ಯೋಜನೆ ಜಾರಿ ಬಗ್ಗೆ ಪ್ರತಿಕ್ರಿಯಿಸಿ, 2020ರ ಫೆಬ್ರವರಿ 2ರಂದು ಮಹದಾಯಿ ನೋಟಿಫಿಕೇಶನ್ ಆಗಿದೆ. 2.10 ವರ್ಷ ಕಳೆದರೂ ವಿಸ್ತೃತ ಯೋಜನಾ ವರದಿ (ಡಿಪಿಆರ್) ಮಾಡಿರಲಿಲ್ಲ. ನಾವು ಬೃಹತ್ ಸಮಾವೇಶ ಮಾಡುತ್ತೇವೆ ಎಂದ ಮೇಲೆ ಡಿಪಿಆರ್ ಮಾಡುತ್ತಿದ್ದಾರೆ. ಎಲೆಕ್ಷನ್ ಬಂದಿದೆ ಎಂದು ಈಗ ಡಿಪಿಆರ್ ಮಾಡುತ್ತಿದ್ದಾರೆ. ಈ ಗಿಮಿಕ್ ಎಲ್ಲ ಬಿಡಬೇಕು, ಯಾವುದೇ ವಿಷಯವನ್ನು ಜನರ ಹಿತದೃಷ್ಟಿಯಿಂದ ನೋಡಬೇಕು ಎಂದು ಕಿಡಿಕಾರಿದರು.
ಮೋದಿ ಬಂದರೂ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಗೆಲ್ಲಲ್ಲ
ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಆಗಮಿಸಿರುವ ಬಗ್ಗೆ ಸಿದ್ದರಾಮಯ್ಯ ಸ್ಪಂದಿಸಿ, ಅಮಿತ್ ಶಾ ಬಂದು ಮಾಯಾ ಮಂತ್ರ ಮಾಡುತ್ತಾರಾ? ಅವರು ಮಂತ್ರಗಾರರಾ? ಪಶ್ಚಿಮ ಬಂಗಾಳ ಹಾಗೂ ಹಿಮಾಚಲ ಪ್ರದೇಶದ ಚುನಾವಣೆ ಸಂದರ್ಭದಲ್ಲಿ ಅಮಿತ್ ಶಾ ಹೋಗಿ ಅಲ್ಲೇ ಉಳಿದಿದ್ದರು, ಅಲ್ಲಿ ಏನಾಯಿತು ಎಂಬುದು ಗೊತ್ತಿದೆಯಲ್ಲ. ಕೇಂದ್ರದ ಮಂತ್ರಿ ಎಂದು ಅವರನ್ನು ಆಹ್ವಾನಿಸುತ್ತಾರೆ, ಅವರು ಬರುತ್ತಾರೆ, ಹೋಗುತ್ತಾರೆ. ಹಳೇ ಮೈಸೂರು ಭಾಗದಲ್ಲಿ ಅವರು ಬಂದರೆ ಗೆಲ್ಲುತ್ತಾರಾ? ಮೋದಿ ಬಂದರೂ ಗೆಲ್ಲಲ್ಲ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ | ಹಳೆ ಮೈಸೂರಿನಲ್ಲಿ ಶೇ.50 ಸೀಟು ಗೆಲ್ಲುತ್ತದೆ ಬಿಜೆಪಿ: ಬೂತ್ ವಿಜಯ ಅಭಿಯಾನಕ್ಕೆ ಅಮಿತ್ ಶಾ ಚಾಲನೆ ಎಂದ ಡಿ.ವಿ. ಸದಾನಂದಗೌಡ