Site icon Vistara News

Reservation in Karnataka | ಬಿಲ್ಲವ, ಈಡಿಗಕ್ಕೆ 2ಎ ಮೀಸಲಾತಿ ಹೆಚ್ಚಳಕ್ಕಾಗಿ ಮಂಗಳೂರು to ಬೆಂಗಳೂರು ಪಾದಯಾತ್ರೆ

pranavananda seer 2A reservation Padayatre

ಶಿವಮೊಗ್ಗ: ರಾಜ್ಯದಲ್ಲಿ ಮೀಸಲಾತಿ ಕೂಗು ದಿನೇ ದಿನೆ ಹೆಚ್ಚಾಗುತ್ತಿದೆ. ಒಂದು ಸಮುದಾಯಕ್ಕೆ, ವರ್ಗಕ್ಕೆ ಮೀಸಲಾತಿ (Reservation in Karnataka) ಸಿಗುತ್ತಿದ್ದಂತೆ ಇನ್ನೊಂದು, ಮಗದೊಂದು ವರ್ಗಗಳು ತಮ್ಮ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಒತ್ತಡ ಹೇರುತ್ತಿವೆ. ಈಗ ಬಿಲ್ಲವ, ಈಡಿಗ, ನಾಮಧಾರಿ ಸಮಾಜಕ್ಕೆ 2ಎ ಮೀಸಲಾತಿ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜ. ೬ರಿಂದ ಮಂಗಳೂರಿನಿಂದ ಬೆಂಗಳೂರುವರೆಗೆ ಪಾದಯಾತ್ರೆಯನ್ನು ಹಮ್ಮಿಕೊಳ್ಳುತ್ತಿರುವುದಾಗಿ ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿ ಹೇಳಿದರು.

ಅವರು ಈ ಕುರಿತು ಶನಿವಾರ (ನ. ೧೯) ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ೨೦೨೩ರ ಜನವರಿ 6ರಿಂದ ಐತಿಹಾಸಿಕ ಪಾದಯಾತ್ರೆಯನ್ನು ಹಮ್ಮಿಕೊಳ್ಳುತ್ತಿದ್ದು, 658 ಕಿ.ಮೀ. ನಡೆಯಲು ನಿರ್ಧಾರ ಮಾಡಲಾಗಿದೆ. ಬಿಲ್ಲವ, ಈಡಿಗ, ನಾಮಧಾರಿ ಸಮಾಜದ ಬೇಡಿಕೆ ಈಡೇರಿಕೆಗಾಗಿ ಈ ಪಾದಯಾತ್ರೆಯನ್ನು ಆಯೋಜನೆ ಮಾಡಲಾಗುತ್ತಿದೆ. ಈಡಿಗ ಸಮಾಜದ ಸಮಸ್ಯೆಯನ್ನು ಇಟ್ಟುಕೊಂಡು ಕಳೆದ ಎರಡೂವರೆ ವರ್ಷಗಳಿಂದ ಹೋರಾಟ ನಡೆಸುತ್ತಾ ಬರಲಾಗುತ್ತಿದೆ. ಬೇಡಿಕೆಯನ್ನು ಈಡೇರಿಸುವುದಾಗಿ ಸಚಿವ ಮುರುಗೇಶ ನಿರಾಣಿ ಭರವಸೆ ನೀಡಿದ್ದರೂ ಇದುವರೆಗೆ ಈಡೇರಿಲ್ಲ ಎಂದು ಆರೋಪಿಸಿದರು.

ಇನ್ನು ಈ ಬಗ್ಗೆ ಸಚಿವ ಮುರುಗೇಶ ನಿರಾಣಿ ಅವರನ್ನು ಪ್ರಶ್ನಿಸಿದರೆ, ಈಡಿಗ ಸಮಾಜದ ಶಾಸಕರೇ ಬೆಂಬಲ ಕೊಡುತ್ತಿಲ್ಲ ಎಂದು ತಿಳಿಸಿದ್ದಾರೆ. ಒಟ್ಟಾರೆಯಾಗಿ ಈ ಸರ್ಕಾರವು ಹಿಂದುಳಿದ ವರ್ಗಗಳನ್ನು ಹತ್ತಿಕ್ಕುವ ಕೆಲಸವನ್ನು ಮಾಡುತ್ತಿದೆ. ಸಮಾಜದ ನಿಗಮ ಮಾಡಲು ಒತ್ತಾಯಿಸಿದ್ದೆವು. ಆದರೆ, ಸರ್ಕಾರ ಕೋಶ ರಚಿಸಿ ಕೈತೊಳೆದುಕೊಂಡಿದೆ. ಮೇಲಿನ ವರ್ಗದವರಿಗೆ ನಿಗಮ, ಹಿಂದುಳಿದ ವರ್ಗಕ್ಕೆ ಕೋಶ ಎಂದು ಶ್ರೀ ಪ್ರಣವಾನಂದ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ | 2A Reservation | ಡಿ.12ಕ್ಕೆ ವಿಧಾನಸೌಧಕ್ಕೆ ಮುತ್ತಿಗೆ, ಪಂಚಮಸಾಲಿ ಶಕ್ತಿ ಪ್ರದರ್ಶನ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಸೇಂದಿ ಮಾರಾಟಕ್ಕೆ ಬೇಕು ಅನುಮತಿ
ಸೇಂದಿಯು ಈಡಿಗ ಸಮುದಾಯದವರ ಕುಲಕಸುಬಾಗಿದೆ. ಆದರೆ, ಇದರ ಮಾರಾಟಕ್ಕೆ ಅವಕಾಶ ಇಲ್ಲದಂತಾಗಿದೆ. ಇದರಿಂದ ಸಮಾಜದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಸೇಂದಿ ಮಾರಾಟಕ್ಕೆ ಸರ್ಕಾರ ಅನುಮತಿ ನೀಡಬೇಕು. ನೆರೆಯ ಗೋವಾ, ಕೇರಳದಲ್ಲಿ ಅನುಮತಿ ಇರಬೇಕಾದರೆ ನಮ್ಮ ರಾಜ್ಯದಲ್ಲಿ ಏಕಿಲ್ಲ ಎಂದು ಅವರು ಪ್ರಶ್ನೆ ಮಾಡಿದರು.

ಸಾಗರ ತಾಲೂಕಿನ ಸಿಗಂದೂರು ಚೌಡೇಶ್ವರಿ ದೇಗುಲದ ಮೇಲೆ ಸರ್ಕಾರದಿಂದ ದೌರ್ಜನ್ಯ ನಡೆಯುತ್ತಿದೆ. ಈ ದೌರ್ಜನ್ಯ ನಿಲ್ಲಬೇಕು. ನಮ್ಮ ಸಮಾಜದ ಮಂತ್ರಿಗಳು, ಶಾಸಕರು ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ಸಮುದಾಯದ ಮತ ಪಡೆದು ಅಧಿಕಾರಕ್ಕೆ ಬಂದವರು ಸಮಾಜವನ್ನು ನಿರ್ಲಕ್ಷಿಸಿದ್ದಾರೆ ಎಂದು ಶ್ರೀ ಪ್ರಣವಾನಂದ ಸ್ವಾಮೀಜಿ ಆಗ್ರಹಿಸಿದರು.

ಬೆಂಗಳೂರಲ್ಲಿ ನಾರಾಯಣ ಗುರು ಪ್ರತಿಮೆಯನ್ನು ಸ್ಥಾಪಿಸಬೇಕು. ಸರ್ಕಾರ ಹೆಂಡದ ಮಾರಯ್ಯನ ಜಯಂತಿಯನ್ನು ಆಚರಿಸಬೇಕು. ಎಲ್ಲ ವಿವಿಗಳಲ್ಲಿ ನಾರಾಯಣ ಗುರು ಅಧ್ಯಯನ ಪೀಠ ಸ್ಥಾಪಿಸಬೇಕು. ಸರ್ಕಾರಿ ಗೋಮಾಳದಲ್ಲಿ ಸರ್ಕಾರ ಈಚಲು, ತೆಂಗು, ತಾಳೆ ಮರ ನೆಡಬೇಕು. ಸೇಂದಿ ಇಳಿಸುವವರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಬೇಕು‌ ಎಂದು ಶ್ರೀ ಪ್ರಣವಾನಂದ ಸ್ವಾಮೀಜಿ ಸರ್ಕಾರವನ್ನು ಒತ್ತಾಯಿಸಿದರು.

ಚುನಾವಣೆಯಿಂದ ದೂರ
ಚುನಾವಣೆಯಲ್ಲಿ ಸ್ಪರ್ಧಿಸುವ ತೀರ್ಮಾನ ಮಾಡಿಲ್ಲ. ರಾಜಕೀಯಕ್ಕೆ ನಾನು ಎಂದೂ ಬರಲಾರೆ. ಚುನಾವಣಾ ರಾಜಕೀಯದಿಂದ ದೂರ ಇರುತ್ತೇನೆ. ಆದರೆ, ಮತ ಹಾಕುವ ಮೂಲಕ ನಮ್ಮ ಹಕ್ಕನ್ನು ಪಡೆಯಲು ಸಮಾಜದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಮಗೆ ಬೆದರಿಕೆಗಳೂ ಬಂದಿವೆ. ನಮ್ಮ ಸಮಾಜದ ಏಳು ಶಾಸಕರಿಗೆ ಹಕ್ಕನ್ನು ಕೇಳುವ ಶಕ್ತಿ ಇಲ್ಲ. ಅವರು ತಮ್ಮ ಶಾಸಕತ್ವಕ್ಕೆ ರಾಜೀನಾಮೆ ನೀಡಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬೇಕು. ನಮ್ಮ ಸಮಾಜದ ಇತರ ಶ್ರೀಗಳು ಬೆಂಬಲ ಕೊಟ್ಟಿದ್ದಾರೆ. ಆದರೆ ಅವರ‌್ಯಾರಿಗೂ ಬಹಿರಂಗವಾಗಿ ಮಾತನಾಡಲು ಆಗುತ್ತಿಲ್ಲ. ಯಾಕೆಂದರೆ ಅವರೆಲ್ಲ ಸರ್ಕಾರದ ನೆರವಿನಲ್ಲಿ ಮಠ, ಮತ್ತಿನ್ನೇನನ್ನೋ ಮಾಡಿರುತ್ತಾರೆ. ನನಗೆ ಯಾವ ಹಂಗೂ ಇಲ್ಲ. ಹಾಗಾಗಿ ನಾನು ಮಾತನಾಡುತ್ತಿದ್ದೇನೆ ಎಂದು ಶ್ರೀ ಪ್ರಣವಾನಂದ ಸ್ವಾಮೀಜಿ ತಿಳಿಸಿದರು.

ಇದನ್ನೂ ಓದಿ | Vishwakarma Community | ವಿಶ್ವಕರ್ಮರಿಗೂ ಬೇಕು ಮೀಸಲಾತಿ; ಬೀದರ್‌ ಟು ಬೆಂಗಳೂರು ಪಾದಯಾತ್ರೆ: ಕೆ.ಪಿ. ನಂಜುಂಡಿ

Exit mobile version