Site icon Vistara News

Rajya sabha Election: ಕಾಂಗ್ರೆಸ್‌ನಿಂದ ರೆಸಾರ್ಟ್‌ ಪಾಲಿಟಿಕ್ಸ್‌; ಹೆಚ್ಚುವರಿ ಬಟ್ಟೆ ಜತೆ ಬರುವಂತೆ ಶಾಸಕರಿಗೆ ಡಿಕೆಶಿ ಪತ್ರ

DK Shivakumar

ಬೆಂಗಳೂರು: ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ (Rajya sabha Election) ರಾಜ್ಯದಲ್ಲಿ ರೆಸಾರ್ಟ್‌ ರಾಜಕೀಯ (Resort politics) ಶುರುವಾಗಿದೆ. ತನ್ನ ಮೂವರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ರಣತಂತ್ರ ರೂಪಿಸಿರುವ ಕಾಂಗ್ರೆಸ್‌, ಅಡ್ಡ ಮತದಾನ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಶಾಸಕರನ್ನು ಹೋಟೆಲ್‌ಗೆ ಕರೆದೊಯ್ದು, ಅಲ್ಲಿಂದಲೇ ನೇರವಾಗಿ ಮತದಾನಕ್ಕೆ ಕರೆದೊಯ್ಯಲು ಪ್ಲ್ಯಾನ್‌ ಮಾಡಿದೆ.

ಈ ಬಗ್ಗೆ ಶಾಸಕರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪತ್ರ ಬರೆದಿದ್ದು, ಫೆ. 27 ಬೆಳಗ್ಗೆ ರಾಜ್ಯಸಭಾ ಸದಸ್ಯರ ಆಯ್ಕೆಗೆ ಮತದಾನ ನಡೆಯುವ ಹಿನ್ನಲೆಯಲ್ಲಿ ಫೆ. 26ರಂದು ಮಧ್ಯಾಹ್ನ 3.30ಕ್ಕೆ ಮುಖ್ಯಮಂತ್ರಿಗಳು ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಹೀಗಾಗಿ ಎಲ್ಲ ಶಾಸಕರು‌ ಬೆಂಗಳೂರಿನ ಮಾನ್ಯತ ಟೆಕ್ ಪಾರ್ಕ್‌ನ ಹಿಲ್ಟನ್ ಹೋಟೆಲ್‌ಗೆ ಆಗಮಿಸಬೇಕು. ಸಭೆಯಲ್ಲಿ ಎಐಸಿಸಿ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ಎಐಸಿಸಿ ಖಜಾಂಚಿ ಅಜಯ್ ಮಕೇನ್ ಉಪಸ್ಥಿತರಿರುತ್ತಾರೆ. ಈ ಹಿನ್ನಲೆಯಲ್ಲಿ ಎಲ್ಲ ಶಾಸಕರು ತಪ್ಪದೇ ಅಂದು ಮದ್ಯಾಹ್ನ 12 ಗಂಟೆಗೆ ಹಿಲ್ಟನ್ ಹೋಟೆಲ್‌ಗೆ ಆಗಮಿಸಬೇಕು ಎಂದು ಕೋರಿದ್ದಾರೆ.

ಅಂದು ಎಲ್ಲ ವಿಧಾನಸಭೆ ಸದಸ್ಯರು ಈ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿ ಮಾರನೆಯ ದಿನ (ಫೆ.27ರಂದು) ಅಲ್ಲಿಂದಲೇ ನೇರವಾಗಿ ವಿಧಾನ ಸೌಧಕ್ಕೆ ಒಟ್ಟಿಗೆ ಬಸ್ಸಿನಲ್ಲಿ ತೆರಳಿ ಮತದಾನ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಆದುದರಿಂದ ಎಲ್ಲ ವಿಧಾನಸಭೆ ಸದಸ್ಯರು ತಪ್ಪದೇ ಒಂದು ದಿನದ ವಾಸ್ತವ್ಯಕ್ಕಾಗಿ ಸಿದ್ಧತೆ ಮಾಡಿಕೊಂಡು ಹೋಟೆಲ್‌ಗೆ ಬರಬೇಕು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Budget Session: ಪರಿಷತ್‌ನಲ್ಲಿ ಹಿಂದು ಧಾರ್ಮಿಕ ವಿಧೇಯಕ ತಿರಸ್ಕಾರ; ರಾಜ್ಯ ಸರ್ಕಾರಕ್ಕೆ ಮುಖಭಂಗ

ವಾಸ್ತವ್ಯಕ್ಕೆ ಸಂಬಂಧಪಟ್ಟಂತೆ ಸಮನ್ವಯತೆ ಕಾಯ್ದುಕೊಳ್ಳಲು ಈ ಕೆಳಕಂಡ ಮುಖಂಡರನ್ನು ನಿಯೋಜಿಸಲಾಗಿದೆ. ಈ ಸಂಬಂಧ ಅಗತ್ಯವಾದ ಸಹಕಾರಕ್ಕಾಗಿ ತಾವು ಇವರುಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

Rajyasabha Election Contestents

ನಾಲ್ಕು ರಾಜ್ಯಸಭೆ ಸ್ಥಾನಗಳಿಗೆ ಚುನಾವಣೆ

Rajyasabha Election Contestents

ಕರ್ನಾಟಕದಲ್ಲಿ ತೆರವಾಗಿರುವ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಐವರು ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್‌ನಿಂದ ಹಿರಿಯ ನಾಯಕ ಅಜಯ್‌ ಮಾಕೆನ್‌, ಸಯ್ಯದ್‌ ನಾಸಿರ್‌ ಹುಸೇನ್‌, ಜಿ.ಸಿ. ಚಂದ್ರಶೇಖರ್‌, ಬಿಜೆಪಿಯಿಂದ ನಾರಾಯಣ ಸಾ ಭಾಂಡಗೆ ಹಾಗೂ ಜೆಡಿಎಸ್‌ನಿಂದ ಉದ್ಯಮಿ ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಸಿದ್ದಾರೆ. ಇಲ್ಲಿ ಕಾಂಗ್ರೆಸ್‌ 135 ಶಾಸಕರನ್ನು ಹೊಂದಿದ್ದು ಸರಿಯಾಗಿ ಮೂರು ಸ್ಥಾನ ಗೆಲ್ಲುವಷ್ಟು ಮತ ಹೊಂದಿದೆ. ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಂಡಿದ್ದರಿಂದ ಈ ಕೂಟಕ್ಕೆ ಒಟ್ಟು 84 ಮತಗಳಿವೆ. ಅಂದರೆ ಬಿಜೆಪಿ ಒಂದು ಸ್ಥಾನವನ್ನು ಗೆಲ್ಲುವುದು ಖಚಿತವಾಗಿದೆ. ಆದರೆ, ಜೆಡಿಎಸ್‌ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಿ ಸ್ಪರ್ಧೆಯ ಕಣವನ್ನು ಸಿದ್ಧಪಡಿಸಿದೆ.

ಗೆಲುವಿನ ಸಾಧ್ಯತೆಗಳ ಲೆಕ್ಕಾಚಾರ ಹೇಗೆ?

ರಾಜ್ಯ ವಿಧಾನಸಭೆಯ ಒಟ್ಟು ಬಲ 224. ಅದರಲ್ಲಿ ಕಾಂಗ್ರೆಸ್‌ನ 135 ಶಾಸಕರಿದ್ದಾರೆ. 66 ಬಿಜೆಪಿ, 19 ಜೆಡಿಎಸ್‌, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಜನಾರ್ದನ ರೆಡ್ಡಿ, ಸರ್ವೋದಯ ಪಕ್ಷದ ದರ್ಶನ್‌ ಪುಟ್ಟಣ್ಣಯ್ಯ, ಪಕ್ಷೇತರರಾಗಿ ಲತಾ ಮಲ್ಲಿಕಾರ್ಜುನ್‌ ಹಾಗೂ ಪುಟ್ಟಸ್ವಾಮಿ ಗೌಡ ಇದ್ದಾರೆ. ಇತರರ ಪೈಕಿ ದರ್ಶನ್‌ ಪುಟ್ಟಣ್ಣಯ್ಯ, ಲತಾ ಮಲ್ಲಿಕಾರ್ಜುನ್‌, ಪುಟ್ಟಸ್ವಾಮಿ ಗೌಡ ಅವರು ಕಾಂಗ್ರೆಸ್‌ ಪರವಾಗಿದ್ದರೆ, ಜನಾರ್ದನ ರೆಡ್ಡಿ ಬಿಜೆಪಿ ಜತೆಗಿದ್ದಾರೆ.

ಬಲಾಬಲವನ್ನು ನೋಡಿದಾಗ ಕಾಂಗ್ರೆಸ್‌ 138 ಮತ್ತು ಬಿಜೆಪಿ-ಜೆಡಿಎಸ್‌ 86 ಮತಗಳನ್ನು ಹೊಂದಿದೆ. ಪ್ರತಿಯೊಬ್ಬ ಅಭ್ಯರ್ಥಿ ಗೆಲುವಿಗೆ 45 ಶಾಸಕರ ಬೆಂಬಲ ಬೇಕು. ಕಾಂಗ್ರೆಸ್‌ ಎರಡು ಸ್ಥಾನಗಳನ್ನು ನಿರಾಯಾಸವಾಗಿ ಗೆಲ್ಲಲಿದೆ. ಬಿಜೆಪಿ ಒಂದು ಸ್ಥಾನ ಗೆಲ್ಲುವುದು ಖಚಿತ. ಆದರೆ ಐದನೇ ಸ್ಥಾನಕ್ಕೆ ಪೈಪೋಟಿ ನಡೆಯಲಿದೆ.

ಇದನ್ನೂ ಓದಿ | Bhagyalakshmi Scheme: ಭಾಗ್ಯಲಕ್ಷ್ಮೀ ಯೋಜನೆ ಸ್ಥಗಿತಗೊಳಿಸಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಸಾಧ್ಯತೆ ಒಂದು

ಐದನೇ ಸ್ಥಾನಕ್ಕೆ ಕಾಂಗ್ರೆಸ್‌ ಬಳಿ 48 ಮತಗಳಿದ್ದರೆ ಬಿಜೆಪಿ-ಜೆಡಿಎಸ್‌ ಕೂಟದಲ್ಲಿ 41 ಮತಗಳಿವೆ. ಒಂದು ವೇಳೆ ಜೆಡಿಎಸ್‌ ಪಕ್ಷವು ಕಾಂಗ್ರೆಸ್‌ ಜತೆಗಿರುವ ಮೂವರು ಶಾಸಕರನ್ನು ಸೆಳೆದರೆ ಅದರ ಬಲ 44 ಆಗುತ್ತದೆ. ಕಾಂಗ್ರೆಸ್‌ನಿಂದ ಇನ್ನೊಂದು ಶಾಸಕರನ್ನು ಸೆಳೆದುಕೊಳ್ಳಲು ಯಶಸ್ವಿಯಾದರೆ ಕಾಂಗ್ರೆಸ್‌ ಬಲ 44ಕ್ಕೆ ಕುಸಿದು ಮೈತ್ರಿ ಬಲ 45 ಆಗಿ ಗೆಲುವು ಸಿಗಲಿದೆ.

ಸಾಧ್ಯತೆ ಎರಡು

ಅದೇ ಹೊತ್ತಿಗೆ ಇನ್ನೊಂದು ಲೆಕ್ಕಾಚಾರವೂ ಇದೆ. ಇಬ್ಬರು ಬಿಜೆಪಿ ಶಾಸಕರಾದ ಎಸ್‌.ಟಿ. ಸೋಮಶೇಖರ್‌ ಮತ್ತು ಶಿವರಾಮ ಹೆಬ್ಬಾರ್‌ ಅವರು ಪಕ್ಷದಿಂದ ದೂರವಾಗಿದ್ದಾರೆ. ಅವರು ಮತದಾನದಿಂದ ದೂರ ಉಳಿದರೆ ಮೈತ್ರಿ ಬಲ ಕುಸಿಯಲಿದೆ. ಒಂದು ವೇಳೆ ಪರಿಸ್ಥಿತಿಗೆ ಅಗತ್ಯವಿದ್ದರೆ ಅವರು ಕಾಂಗ್ರೆಸ್‌ ಪರ ಮತ ಚಲಾಯಿಸುವ ಸಾಧ್ಯತೆಯೂ ಇಲ್ಲದಿಲ್ಲ. ಹೀಗಾಗಿ ಚುನಾವಣಾ ಕಣ ರಂಗೇರಿದ್ದಂತೂ ನಿಜ.

Exit mobile version