ಧಾರವಾಡ: ಚುನಾವಣೆ ಹೊಸ್ತಿಲಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಶಾಕ್ ನೀಡಿದೆ. ಧಾರವಾಡ ಜಿಲ್ಲೆ ಪ್ರವೇಶ ನಿರ್ಬಂಧಕ್ಕೆ ವಿನಾಯಿತಿ ಕೋರಿ ವಿನಯ್ ಕುಲಕರ್ಣಿ (Vinay kulkarni) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿರುವುದರಿಂದ ತೀವ್ರ ಹಿನ್ನಡೆಯಾಗಿದೆ.
ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನವಾಗಿದ್ದರು. 9 ತಿಂಗಳು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದು, ಬಿಡುಗಡೆಯಾದ ಬಳಿಕ ಅವರಿಗೆ ಧಾರವಾಡ ಜಿಲ್ಲೆ ಪ್ರವೇಶಕ್ಕೆ ಕೋರ್ಟ್ ನಿರ್ಬಂಧ ವಿಧಿಸಿತ್ತು. ಹೀಗಾಗಿ ಧಾರವಾಡ ಜಿಲ್ಲೆ ಪ್ರವೇಶಕ್ಕಿರುವ ನಿರ್ಬಂಧ ತೆರವುಗೊಳಿಸಲು ಕೋರಿ 2 ತಿಂಗಳ ಹಿಂದೆ ಮಾಜಿ ಸಚಿವ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿದೆ.
ಇದನ್ನೂ ಓದಿ | Karnataka Election 2023: ಕಾಂಗ್ರೆಸ್ ತೊರೆದ ಎಂ.ಎಂ. ಹಿರೇಮಠಗೆ ಶಾಕ್; ಎಸ್‌ಸಿ ಜಾತಿ ಪ್ರಮಾಣಪತ್ರ ರದ್ದು
ಇನ್ನು ಟ್ರಯಲ್ ಕೋರ್ಟ್ (ವಿಚಾರಣಾ ನ್ಯಾಯಾಲಯದಲ್ಲಿ) ನ್ಯಾಯಾಲಯದಲ್ಲಿ ಮತ್ತೊಮ್ಮೆ ಅರ್ಜಿ ಸಲ್ಲಿಸಿ ಇತ್ಯರ್ಥ ಮಾಡಿಕೊಳ್ಳುವಂತೆ ಸುಪ್ರೀಂ ಕೋರ್ಟ್ ವಿನಯ್ ಕುಲಕರ್ಣಿಗೆ ಸೂಚನೆ ನೀಡಿದ್ದು, ಯಾವ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದೆಯೋ ಅದೇ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಇತ್ಯರ್ಥ ಮಾಡಿಕೊಳ್ಳುವಂತೆ ನಿರ್ದೇಶನ ನೀಡಿದೆ.
2016 ಜೂನ್ 15 ರಂದು ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಸದಸ್ಯ, ಬಿಜೆಪಿ ಮುಖಂಡ ಯೋಗೀಶಗೌಡ ಅವರ ಕೊಲೆಯಾಗಿತ್ತು. ನಂತರ ಆರೋಪಿಗಳು ತಾವೇ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡು ಪೊಲೀಸರುಗೆ ಶರಣಾಗಿದ್ದರು. ಆದರೆ ಯೋಗೇಶಗೌಡ ಗೌಡರ ಕುಟುಂಬಸ್ಥರು ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಪಟ್ಟುಹಿಡಿದಿದ್ದರು. ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಪ್ರಕರಣವನ್ನು ಸಿಬಿಐಗೆ ವಹಿಸಿತು. ತನಿಖೆಯಲ್ಲಿ ಯೋಗಶ್‌ಗೌಡ ಹತ್ಯೆ ಸಂಚಿನಲ್ಲಿ ಕಾಂಗ್ರೆಸ್ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಕೈವಾಡವಿದೆ ಇದೆ ಎಂದು ವಿನಯ್ ಕುಲಕರ್ಣಿಯನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು.
ಪ್ರಕರಣದಲ್ಲಿ ಬಂಧನವಾಗಿ 9 ತಿಂಗಳು ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಕಾಲ ಕಳೆದಿದ್ದ ಮಾಜಿ ಸಚಿವ, ಷರತ್ತು ಬದ್ಧ ಜಾಮೀನಿನ ಮೇಲೆ ಹೊರ ಬಂದಿದ್ದರು. ಆದರೆ ವಿನಯ್ ಕುಲಕರ್ಣಿಗೆ ಧಾರವಾಡ ಜಿಲ್ಲೆ ಪ್ರವೇಶಕ್ಕೆ ಕೋರ್ಟ್ ನಿರ್ಬಂಧ ವಿಧಿಸಿತ್ತು. ಇದೀಗ ನಿರ್ಬಂಧ ವಿನಾಯಿತಿಗೆ ಸಲ್ಲಿಸಿದ್ದ ಅರ್ಜಿಯನ್ನೂ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಇದನ್ನೂ ಓದಿ | Karnataka Election: ಎಎಪಿಯಿಂದ 300 ಯೂನಿಟ್ ವಿದ್ಯುತ್ ಉಚಿತ, 3000 ರೂ. ನಿರುದ್ಯೋಗ ಭತ್ಯೆ, ಒಪಿಎಸ್ ಜಾರಿ ಗ್ಯಾರಂಟಿ
ಶಿಗ್ಗಾಂವಿಯಿಂದ ವಿನಯ್ ಕುಲಕರ್ಣಿ ಸ್ಪರ್ಧೆ?
ಧಾರವಾಡ ಗ್ರಾಮೀಣ ಕ್ಷೇತ್ರದ ಮಾಜಿ ಶಾಸಕರೂ ಆಗಿರುವ ವಿನಯ್ ಕುಲಕರ್ಣಿಗೆ ಜಿಲ್ಲೆಯ ಪ್ರವೇಶಕ್ಕೆ ನಿರ್ಬಂಧ ಇರುವುದರಿಂದ ಕ್ಷೇತ್ರದ ರಾಜಕೀಯದಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರು ಹಾವೇರಿ ಜಿಲ್ಲೆಯ ಸಿಎಂ ಬಸವರಾಜ ಬೊಮ್ಮಾಯಿ ಅವರ ಕ್ಷೇತ್ರ ಶಿಗ್ಗಾಂವಿಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಕಾಂಗ್ರೆಸ್‌ನ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಶಿಗ್ಗಾಂವಿ ಕ್ಷೇತ್ರಕ್ಕೆ 2ನೇ ಪಟ್ಟಿಯಲ್ಲಿ ಅಭ್ಯರ್ಥಿ ಘೋಷಣೆಯಾಗಲಿದ್ದು, ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಟಿಕೆಟ್ ಸಿಗುವುದೋ, ಇಲ್ಲವೋ ಎಂಬ ಬಗ್ಗೆ ಕುತೂಹಲ ಮೂಡಿದೆ.