ಬೆಂಗಳೂರು: ವಿಪಕ್ಷ ನಾಯಕರ ಸಭೆಗೆ ಬಂದ ಮುಖಂಡರ ಸೇವೆಗೆ ಪ್ರೊಟೊಕಾಲ್ ಉಲ್ಲಂಘಿಸಿ (protocol breach) ಐಎಎಸ್ ಅಧಿಕಾರಿಗಳ (IAS Officers) ದುರ್ಬಳಕೆ ಮಾಡಿಕೊಂಡಿರುವುದನ್ನು ಪ್ರಶ್ನಿಸಿ ನಿವೃತ್ತ ಐಎಎಸ್ ಅಧಿಕಾರಿ ಎಂ. ಮದನ್ ಗೋಪಾಲ್ ಅವರು ತನಿಖೆಗೆ ಮನವಿ ಸಲ್ಲಿಸಿದ್ದಾರೆ.
ಕೇಂದ್ರ ಸಂಪುಟ ಕಾರ್ಯದರ್ಶಿ, ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಕಾರ್ಯದರ್ಶಿಗೆ ಈ ಕುರಿತು ಪತ್ರ ಬರೆದಿರುವ ಅವರು, ಈ ಕುರಿತು ತನಿಖೆ ನಡೆಸುವಂತೆ ಕೋರಿದ್ದಾರೆ. 30 ನಾಗರಿಕ ಸೇವಾ ಅಧಿಕಾರಿಗಳನ್ನು ವಿಪಕ್ಷ ನಾಯಕರ ಸಭೆಯ ರಾಜಕೀಯ ಕಾರ್ಯಕ್ರಮಕ್ಕೆ ನಿಯೋಜಿಸಿದ ಕ್ರಮವನ್ನು ಅವರು ಪ್ರಶ್ನಿಸಿದ್ದಾರೆ.
ʼʼರಾಜಕೀಯವಾಗಿ ಐಎಎಸ್ ಅಧಿಕಾರಿಗಳನ್ನು ಬಳಸಿಕೊಂಡ ಈ ಕ್ರಮ ಐಎಎಸ್ ನೀತಿ ಸಂಹಿತೆಯ ರೂಲ್ 5(1)ರ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ರಾಜಕೀಯ ನಾಯಕರನ್ನು ರಾಜ್ಯ ಸರ್ಕಾರದ ಅತಿಥಿಗಳು ಎಂದು ಸರ್ಕಾರ ಒಂದು ವೇಳೆ ಘೋಷಿಸಿದರೂ, ಸೇವೆಯಲ್ಲಿರುವ ಇಷ್ಟು ಪ್ರಮಾಣದ ಅಧಿಕಾರಿಗಳನ್ನು ರಾಜಕೀಯವಾದ ಈ ಕಾರ್ಯಕ್ರಮಕ್ಕೆ ಪ್ರೋಟೋಕಾಲ್ ಕರ್ತವ್ಯಕ್ಕೆ ನಿಯೋಜಿಸುವುದು ಊಹಾತೀತʼʼ ಎಂದು ಮದನ್ ಗೋಪಾಲ್ ಆಕ್ಷೇಪಿಸಿದ್ದಾರೆ.
ಮದನ್ ಗೋಪಾಲ್ ಅವರು ಕರ್ನಾಟಕ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತಿ ಹೊಂದಿದ್ದಾರೆ. ಈ ಕುರಿತು ಅವರು ಟ್ವೀಟ್ ಕೂಡ ಮಾಡಿದ್ದು, ಈ ಟ್ವೀಟನ್ನು ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳ ಖಾತೆಗೆ ಟ್ಯಾಗ್ ಮಾಡಿದ್ದಾರೆ. ʼʼಇಲ್ಲಿ ಕಾನೂನು ಉಲ್ಲಂಘನೆಯಾಗಿದೆ. ಆದರೆ ಸೇವೆಯಲ್ಲಿರುವ ಅಧಿಕಾರಿಗಳ ಮೇಲೆ ಸರ್ಕಾರದ ಒತ್ತಡವನ್ನು ನಾನು ಊಹಿಸಬಲ್ಲೆʼʼ ಎಂದು ಅವರು ಹೇಳಿದ್ದಾರೆ.
ಒಂದು ವಾರದ ಹಿಂದೆ ಬೆಂಗಳೂರಿನಲ್ಲಿ ನಡೆದ ಮಹಾಘಟಬಂಧನ್ ಸಭೆಗೆ ಆಗಮಿಸಿದ ಇಪ್ಪತ್ತಕ್ಕೂ ಅಧಿಕ ವಿಪಕ್ಷ ನಾಯಕರಿಗೆ ರಕ್ಷಣೆ ಹಾಗೂ ಸೇವೆಗಾಗಿ ರಾಜ್ಯದ 30 ನಾಗರಿಕ ಸೇವಾ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ರಾಜಕೀಯ ಕಾರ್ಯಕ್ರಮವಾಗಿದ್ದ ಇದಕ್ಕೆ ಐಎಎಸ್ ಅಧಿಕಾರಿಗಳನ್ನು ಬಳಸಿಕೊಂಡಿರುವುದು ದುರ್ಬಳಕೆ ಎಂದು ರಾಜ್ಯ ವಿಪಕ್ಷ ನಾಯಕರು ಆಕ್ಷೇಪಿಸಿದ್ದಾರೆ. ಇದು ಶಿಷ್ಟಾಚಾರ ಉಲ್ಲಂಘನೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ನಿನ್ನೆ ಸದನದ ಬಾವಿಗೆ ಇಳಿದು ಧರಣಿ ನಡೆಸಿದ್ದರು. ಸಿಎಂ ಅವರು ಅಧಿಕಾರಿಗಳ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು. ಈ ಗದ್ದಲ ಮುಂದುವರಿದು ಪ್ರಸ್ತುತ ಅಧಿವೇಶನದಿಂದ ಬಿಜೆಪಿಯ 10 ಶಾಸಕರನ್ನು ಅಮಾನತು ಮಾಡಲಾಗಿತ್ತು.
ಇದನ್ನೂ ಓದಿ: Speaker UT Khader : ಬಿಜೆಪಿ ದೂರಿಗೆ ಮುನ್ನವೇ ಖಾದರ್ ಅಲರ್ಟ್: ರಾಜ್ಯಪಾಲರಿಗೆ ಅಮಾನತು ವರದಿ ಸಲ್ಲಿಕೆ