ಬಾಗಲಕೋಟೆ: ಹಳೇ ಪಿಂಚಣಿಗಾಗಿ (Old Pension) ಅನುದಾನಿತ ಶಾಲೆಗಳ ಶಿಕ್ಷಕರ ಸಂಘ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಸುತ್ತಿದ್ದ ಪ್ರತಿಭಟನೆ ವೇಳೆ (Teachers Protest) ವಿಷ ಸೇವಿಸಿ ಮೃತಪಟ್ಟಿದ್ದ ನಿವೃತ್ತ ಶಿಕ್ಷಕ ಸಿದ್ದಯ್ಯ ಹಿರೇಮಠ (65) ಮೃತದೇಹವು ಬಾದಾಮಿಗೆ ಆಗಮಿಸಿದ್ದು, ಪಿಎಲ್‌ಡಿ ಬ್ಯಾಂಕ್ ಮುಂದೆ ಶವವಿಟ್ಟು ಕುಟುಂಬಸ್ಥರು, ಅನುದಾನಿತ ಶಾಲಾ ಶಿಕ್ಷಕರು ಪ್ರತಿಭಟಿಸಿದ್ದಾರೆ.
ಈ ಸಾವಿಗೆ ಸರ್ಕಾರವೇ ಹೊಣೆ ಎಂದು ಕುಟುಂಬಸ್ಥರು, ಶಿಕ್ಷಕರು ಆರೋಪಿಸಿದ್ದಾರೆ. ಸ್ಥಳದಲ್ಲಿ ಮೃತ ಶಿಕ್ಷಕನ ಪತ್ನಿ, ಮಕ್ಕಳು ಗೋಳಾಡುತ್ತಿದ್ದು, ತಮಗೆ ನ್ಯಾಯ ಬೇಕು ಎಂದು ಆಗ್ರಹಿಸಿದ್ದಾರೆ. ಅನುದಾನಿತ ಶಾಲೆಗಳ ಶಿಕ್ಷಕರು ಬೆಂಗಳೂರಿನಲ್ಲಿ ಕಳೆದ ೧೪೧ ದಿನದಿಂದ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಆದರೆ, ಎಷ್ಟೇ ಒತ್ತಾಯ ಮಾಡಿದರೂ ಸರ್ಕಾರ ಪ್ರತಿಭಟನೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಮನನೊಂದು ಸಿದ್ದಯ್ಯ ವಿಷ ಸೇವಿಸಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು.
ಇದನ್ನೂ ಓದಿ: 7th Pay commission : ಮಾ.1 ರಿಂದ ಸರ್ಕಾರಿ ನೌಕರರ ಮುಷ್ಕರ ಖಚಿತ; ಆಸ್ಪತ್ರೆ, ಶಾಲೆ, ಸರ್ಕಾರಿ ಕಚೇರಿಗಳಲ್ಲಿ ಸೇವೆ ಬಂದ್
ಸಿದ್ದಯ್ಯ ಅವರು ಪಟ್ಟದಕಲ್ಲು ಗ್ರಾಮದ ವೀರಶೈವ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರು. ಆರು ವರ್ಷದ ಹಿಂದೆ ನಿವೃತ್ತರಾಗಿದ್ದರು. ೨೦೦೬ರಿಂದ ಪಿಂಚಣಿ ರದ್ದಾದ ಹಿನ್ನೆಲೆಯಲ್ಲಿ ನಿವೃತ್ತಿ ವೇತನ ಸಿಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ತಮ್ಮ ಜೀವನ ನಿರ್ವಹಣೆ ಕಷ್ಟಕರವಾಗಿದೆ ಎಂದು ಹೇಳಿಕೊಳ್ಳುತ್ತಿದ್ದರು. ಪಿಂಚಣಿಗಾಗಿ ಆಗ್ರಹಿಸಿ ಬೆಂಗಳೂರಿನಲ್ಲಿ ಅನುದಾನಿತ ಶಾಲೆ ಶಿಕ್ಷಕರು ಪ್ರತಿಭಟನೆ ನಡೆಸುತ್ತಿದ್ದರಿಂದ ಇವರೂ ಸಹ ಭಾಗಿಯಾಗಿದ್ದರು.
ಇದು ಸರ್ಕಾರಿ ಕೊಲೆ- ಸಿದ್ದರಾಮಯ್ಯ
ನಿವೃತ್ತ ಶಿಕ್ಷಕ ಸಿದ್ದಯ್ಯ ಆತ್ಮಹತ್ಯೆ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರ ವಿರುದ್ಧ ಹರಿಹಾಯ್ದಿದ್ದಾರೆ. ಇದು ಸರ್ಕಾರಿ ಕೊಲೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
೧. ಪಿಂಚಣಿಗಾಗಿ ಮುಷ್ಕರದಲ್ಲಿ ತೊಡಗಿದ್ದ ಬಾಗಲಕೋಟೆ ಮೂಲದ ಶಿಕ್ಷಕ ಸಿದ್ದಯ್ಯ ಹಿರೇಮಠ ಮತ್ತು ರಾಯಚೂರು ಜಿಲ್ಲೆ ಸಿಂಧನೂರು ಮೂಲಕ ಶಂಕರಪ್ಪ ಬೋರಡ್ಡಿ ಅವರು ಸರ್ಕಾರ ತಮ್ಮ ಹೋರಾಟಕ್ಕೆ ಸ್ಪಂದಿಸದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನು ಸರ್ಕಾರಿ ಕೊಲೆಗಳು ಅನ್ನದೆ ಬೇರೇನು ಹೇಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪ್ರಶ್ನೆ ಮಾಡಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಮಾಜಿ ಸಿಎಂ ಸಿದ್ದರಾಮಯ್ಯ
೨. ಕಳೆದ 141 ದಿನಗಳಿಂದ ಫ್ರೀಡಂ ಪಾರ್ಕ್‌ನಲ್ಲಿ ಮುಷ್ಕರ ನಿರತರಾಗಿರುವ ಅನುದಾನಿತ ಶಾಲಾ ಶಿಕ್ಷಕರ ಗೋಳು ಕೇಳುವವರಿಲ್ಲ. ಶಿಕ್ಷಕರು ಕೇಳುತ್ತಿರುವುದು ತಮ್ಮ ಹಕ್ಕಿನ ಪಿಂಚಣಿಯನ್ನು ಎಂಬ ಕನಿಷ್ಠ ಜ್ಞಾನವಾದರೂ ರಾಜ್ಯ ಬಿಜೆಪಿ ಸರ್ಕಾರಕ್ಕೆ ಬೇಡವೇ? ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಣ್ಣು ಬಿಟ್ಟು ನೋಡಲು ಇನ್ನೆಷ್ಟು ಹೆಣ ಬೀಳಬೇಕು?
೩. ಅನುದಾನಿತ ಶಾಲಾ ಶಿಕ್ಷಕರು ಪ್ರತಿಭಟನೆ ಆರಂಭಿಸಿ 141 ದಿನಗಳು ಕಳೆದರೂ ಇನ್ನು ಈ ವಿಚಾರ ತಮ್ಮ ಗಮನಕ್ಕೆ ಬಂದಿರಲಿಲ್ಲ ಎಂದು ಹೇಳುವ ಮೂಲಕ ರಾಜ್ಯ ಬಿಜೆಪಿ ಸರ್ಕಾರವು ಇಷ್ಟು ದಿನ ಕೋಮಾದಲ್ಲಿತ್ತು ಎಂಬುದನ್ನು ಸ್ವತಃ ಒಪ್ಪಿಕೊಂಡಿದೆ. ಸದಾ ಕಾಲ ಕಿವಿಯಲ್ಲಿ ಕಮಿಷನ್ ಸದ್ದು ಗುಯ್ಗುಡುವಾಗ ಬಡವರ ಕೂಗು ಕೇಳುವುದಾದರೂ ಹೇಗೆ ಬೊಮ್ಮಾಯಿಯವೇ?
ಇದನ್ನೂ ಓದಿ: BJP Rathayatre : ಈ ಬಾರಿ 150 ಗುರಿ; ಮಾ.1ರಿಂದ 4 ತಂಡಗಳಲ್ಲಿ ರಾಜ್ಯಾದ್ಯಂತ ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆ
೪. ಕೋಮುಗಲಭೆ ನಡೆದು ಕೊಲೆಯಾದರೆ ಗಂಟೆಯೊಳಗೆ ಹೆಣದ ಸುತ್ತ ನೊಣದಂತೆ ಹೋಗಿ ಕೂರುವ ಬಿಜೆಪಿಯವರು ಸರ್ಕಾರಕ್ಕೆ, ಸಾವಿರಾರು ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರ ಜೀವಗಳು ಅಮೂಲ್ಯ ಅನ್ನಿಸುವುದಿಲ್ಲವೇ? ಎಂದು ಸಿದ್ದರಾಮಯ್ಯ ಟ್ವೀಟ್ ಮೂಲಕ ಹರಿಹಾಯ್ದಿದ್ದಾರೆ.