ಕೊಡಗು: ಮಳೆಯಿಂದ ಸಂಪೂರ್ಣ ಮನೆ ಹಾನಿಯಾಗಿರುವ ಕುಟುಂಬಗಳಿಗೆ 5 ಲಕ್ಷ ರೂಪಾಯಿ, ಭಾಗಶಃ ಹಾನಿಯಾದರೆ 50 ಸಾವಿರ ರೂಪಾಯಿ ಹಾಗೂ ನೀರು ಮನೆಗೆ ನುಗ್ಗಿ ಸಮಸ್ಯೆಯಾಗಿದ್ದರೆ 10 ಸಾವಿರ ರೂಪಾಯಿ ಪರಿಹಾರ ನೀಡಲಾಗುತ್ತದೆ. ಈ ಬಗ್ಗೆ ಬೆಂಗಳೂರಿಗೆ ತಲುಪಿದ ತಕ್ಷಣ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಭೂಕಂಪನ ಸಂಭವಿಸಿದ್ದ ಜಿಲ್ಲೆಯ ಮಡಿಕೇರಿ ತಾಲೂಕಿನ ಚೆಂಬು ಗ್ರಾಮಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಆಗಿರುವ ಭೂಕಂಪನಕ್ಕೆ ಜನರು ಯಾವುದೇ ಆತಂಕ ಪಡಬೇಕಾದ ಅಗತ್ಯವಿಲ್ಲ. ಈಗಾಗಲೇ ಹೈದರಾಬಾದ್‌ನಿಂದ 5 ಹಿರಿಯ ವಿಜ್ಞಾನಿಗಳ ತಂಡ ಜಿಲ್ಲೆಗೆ ಬಂದು ಚೆಂಬು ಗ್ರಾಮದ ಸುತ್ತಮುತ್ತ ಅಧ್ಯಯನ ನಡೆಸುತ್ತಿದೆ. ರಿಕ್ಟರ್ ಮಾಪಕದಲ್ಲಿ ಅಲ್ಪ ಪ್ರಮಾಣದಲ್ಲಿ ತೀವ್ರತೆ ದಾಖಲಾಗಿದೆ. ಇದರಿಂದ ಯಾವುದೇ ಸಮಸ್ಯೆ ಇಲ್ಲ. ಇದೆಲ್ಲ ಪ್ರಕೃತಿಯಲ್ಲಿ ನಡೆಯುವ ಸ್ವಾಭಾವಿಕ ಕ್ರಿಯೆ ಎಂದು ಹೇಳಿದರು.
ಖಾಲಿ ಮಾಡಿ ಹೋಗುವ ಮನೆಗೆ ಸರ್ಕಾರಿ ರಕ್ಷಣೆ
ಸರ್ಕಾರ ಜನರ ಜತೆ ಇದ್ದು, ಒಂದು ವೇಳೆ ಏನಾದರೂ ಸಮಸ್ಯೆ ಎದುರಾದರೆ ಅಪಾಯದ ಸ್ಥಳದಿಂದ ಜನರನ್ನು ಸ್ಥಳಾಂತರ ಮಾಡಲೂ ಸಿದ್ಧವಿದ್ದೇವೆ. ಮನೆಗಳನ್ನು ಖಾಲಿ ಮಾಡಿ ಹೋಗುವುದು ಹೇಗೆ ಎಂಬ ಭಯ ಜನರಿಗಿದ್ದರೆ, ಮನೆಗಳಿಗೆ ಸರ್ಕಾರ ರಕ್ಷಣೆಯನ್ನೂ ಕೊಡಲಿದೆ. ಮಳೆಯಿಂದಾಗಿ ಈಗಾಗಲೇ ಜಿಲ್ಲೆಯಲ್ಲಿ 44 ಮನೆಗಳು ಹಾನಿಗೀಡಾಗಿವೆ. ಎನ್‌ಡಿಆರ್‌ಎಫ್ ನಿಯಮಗಳ ಪ್ರಕಾರ 96 ಸಾವಿರ ರೂ. ಮತ್ತು ರಾಜ್ಯ ಸರ್ಕಾರದಿಂದ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ | Rain News | ಮಹಾಮಳೆಯಿಂದ ಕೊಲ್ಲಾಪುರದಲ್ಲಿ ರೆಡ್ ಅಲರ್ಟ್, ಉತ್ತರ ಕರ್ನಾಟಕದಲ್ಲಿ ಪ್ರವಾಹ ಭೀತಿ
ಭಾರಿ ಮಳೆಯಿಂದ ಜಿಲ್ಲೆಯಲ್ಲಿ 1000ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು, ಸರ್ಕಾರದಿಂದ ಪರಿಹಾರ ಕಾರ್ಯ ಮಾಡಲಾಗುತ್ತಿದೆ. ಇದಕ್ಕೂ ಮೊದಲು ಗ್ರಾಮದಲ್ಲಿ ಮಳೆ ಮತ್ತು ಭೂಕುಸಿತದಿಂದ ಹಾನಿಗೀಡಾದ ವಿವಿಧ ಮನೆಗಳ ಕುಟುಂಬಗಳಿಗೆ ೫ ಲಕ್ಷ ರೂಪಾಯಿಯಲ್ಲಿ ಮೊದಲ ಹಂತವಾಗಿ ತಲಾ 24 ಸಾವಿರ ರೂಪಾಯಿ ಚೆಕ್ ಅನ್ನು ಸಚಿವ ಅಶೋಕ್ ವಿತರಿಸಿದರು. ಇದೇ ವೇಳೆ ರಾಷ್ಟ್ರೀಯ ಹೆದ್ದಾರಿ 275ರ ಕರ್ತೋಜಿ ಗುಡ್ಡ ಕುಸಿತ ಪ್ರದೇಶವನ್ನು ಸಚಿವರು ವೀಕ್ಷಿಸಿದರು.
ಚೆಂಬು ಗ್ರಾಮ ಪಂಚಾಯಿತಿಯಲ್ಲಿ ಹೈದರಾಬಾದ್‌ನಿಂದ ಬಂದಿದ್ದ ಐದು ವಿಜ್ಞಾನಿಗಳು ಮತ್ತು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಜತೆಗೆ ಸಚಿವರು ಸಭೆ ನಡೆಸಿದರು. ಆ ಮೂಲಕ ಗ್ರಾಮದ ಜನರಿಗೆ ಭೂಕಂಪನ ಮತ್ತು ಭೂಕುಸಿತದ ಬಗ್ಗೆ ಆತಂಕ ಬೇಡ ಎಂದು ಮನವರಿಕೆ ಮಾಡಿದರು. ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ, ಶಾಸಕ ಕೆ.ಜಿ ಬೋಪಯ್ಯ, ರವಿ ಕುಶಾಲಪ್ಪ ಮತ್ತಿತರರು ಇದ್ದರು.
ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಶಾಲಾ ಕಾಲೇಜುಗಳಿಗೆ ರಜೆ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿಕೆ ಹಾಗೂ ಆರೆಂಜ್ ಅಲರ್ಟ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜುಲೈ 8ರಂದು ಶಾಲಾ-ಕಾಲೇಜುಗಳಿಗೆ ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ್ ರಜೆ ಘೋಷಿಸಿದ್ದಾರೆ.
ಗುಡ್ಡಕುಸಿದು ಮೃತಪಟ್ಟವರ ಕುಟುಂಬಗಳಿಗೆ ೫ ಲಕ್ಷ ರೂ. ಪರಿಹಾರ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಚ್ಚಿಲದಲ್ಲಿ ಕಡಲ್ಕೊರೆತ ಉಂಟಾಗಿ ಮೀನುಗಾರರ ಮನೆಗಳು ಬಿದ್ದಿವೆ. ಹೀಗಾಗಿ ಸಮುದ್ರಕ್ಕೆ ತಡೆಗೋಡೆ ನಿರ್ಮಾಣ ಸಂಬಂಧ ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಡಲ್ಕೊರೆತ ಉಂಟಾದ ಪ್ರದೇಶಗಳನ್ನು ವೀಕ್ಷಿಸಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಂಜಿಕಲ್ಲು ಎಂಬಲ್ಲಿ ಗುಡ್ಡ ಕುಸಿತವಾಗಿ ಮೃತಪಟ್ಟ ಕೇರಳದ ಮೂವರು ಕಾರ್ಮಿಕರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರಧನವನ್ನು ಸಚಿವರು ಘೋಷಿಸಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಅವರ ಸ್ವಗ್ರಾಮಗಳಿಗೆ ಮೃತ ದೇಹಗಳ ರವಾನೆಗೂ ವ್ಯವಸ್ಥೆ ಮಾಡಲು ಸೂಚಿಸಿದ್ದೇನೆ ಎಂದು ತಿಳಿಸಿದರು.
ಕಡಲ್ಕೊರೆತ, ಪ್ರಕೃತಿ ವಿಕೋಪ ಪರಿಹಾರ ಕಾರ್ಯದಲ್ಲಿ ಸರ್ಕಾರದಿಂದ ಬೆಂಬಲ ಸಿಗುತ್ತಿಲ್ಲ ಎಂಬ ಶಾಸಕ ಯು.ಟಿ. ಖಾದರ್ ಆರೋಪಕ್ಕೆ ಪ್ರತಿಕ್ರಿಯಿಸಿ, ವಿರೋಧ ಪಕ್ಷದ ವ್ಯಕ್ತಿಯಾಗಿ ಚುನಾವಣೆ ಗಮನದಲ್ಲಿಟ್ಟುಕೊಂಡು ಮಾತನಾಡಬಾರದು. ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಕೇವಲ ಹತ್ತು ವರ್ಷ ಮಾತ್ರ ಇದ್ದು, ಇವರ ಕಾಂಗ್ರೆಸ್ ಪಕ್ಷವು 60 ವರ್ಷ ಅಧಿಕಾರದಲ್ಲಿ ಇರಲಿಲ್ಲವೇ..? ಆಗಿನಿಂದಲೂ ಕಡಲು ಕೊರೆತ ಸಮಸ್ಯೆ ಇತ್ತು. ಅವರ ಅವಧಿಯಲ್ಲಿ ಏನೂ ಮಾಡದೇ ನಮ್ಮ ಮೇಲೆ ಆರೋಪ ಮಾಡುವುದು ಸರಿಯಲ್ಲ. ನಾವು ಈ ವಿಚಾರದಲ್ಲಿ ರಾಜಕಾರಣ ಮಾಡಲ್ಲ. ಟೀಕೆ-ಟಿಪ್ಪಣಿ ಸಹಜ, ಆದರೆ ನಾವು ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ | ಕೊಡಗು ಜಿಲ್ಲೆಯಾದ್ಯಂತ ವರುಣನ ಅಬ್ಬರ, ರಾಜ್ಯದಲ್ಲಿ ಮುಂಗಾರು ಮಳೆ ಚುರುಕು