ಬೆಂಗಳೂರು: ಕಂದಾಯ ಸಚಿವ ಆರ್. ಅಶೋಕ್ ಅವರು ಶನಿವಾರ ಮಾಜಿ ಪ್ರಧಾನಿ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆಯ ಮೇರೆಗೆ ಅವರು ಪದ್ಮನಾಭ ನಗರದ ಮನೆಗೆ ಹೋಗಿದ್ದರು.
ದೇವೇಗೌಡರು ಕಳೆದ ಕೆಲವು ದಿನಗಳಿಂದ ಸಣ್ಣ ಪ್ರಮಾಣದ ಅನಾರೋಗ್ಯ ಎದುರಿಸುತ್ತಿದ್ದಾರೆ. ಕಾಲು ನೋವು ಅವರನ್ನು ಕಾಡುತ್ತದೆ. ಕೆಲವು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರೇ ದೇವೇಗೌಡರ ಆರೋಗ್ಯ ವಿಚಾರಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಆರ್. ಅಶೋಕ್ ಅವರನ್ನು ಕಳುಹಿಸಿದ್ದಾರೆ ಎನ್ನಲಾಗಿದೆ.
ಮನೆಗೆ ಬಂದ ಆರ್. ಅಶೋಕ್ ಅವರನ್ನು ದೇವೇಗೌಡರು ಆತ್ಮೀಯವಾಗಿ ಸ್ವಾಗತಿಸಿದ್ದಲ್ಲದೆ ಶಾಲು, ಹಾರ ಹಾಕಿ ಗೌರವಿಸಿದರು. ಅಶೋಕ್ ಅವರ ಜತೆ ತಮ್ಮ ಆರೋಗ್ಯದ ವಿವರಗಳನ್ನು ಹಂಚಿಕೊಂಡರು ದೇವೇಗೌಡರು. ಈ ನಡುವೆ ಆರ್. ಅಶೋಕ್ ಅವರು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಫೊನ್ ಕನೆಕ್ಟ್ ಮಾಡಿ ಮಾತನಾಡಿಸಿದರು.
ದೇವಸ್ಥಾನದ ಅಭಿವೃದ್ಧಿಗೆ ಕೋರಿಕೆ
ಮನೆಗೆ ಬಂದ ಅಶೋಕ್ ಅವರಲ್ಲಿ ಪದ್ಮನಾಭನಗರದಲ್ಲಿರುವ ದೇವಗಿರಿ ಶ್ರೀನಿವಾಸ ದೇವಸ್ಥಾನದ ಅಭಿವೃದ್ಧಿ ವಿಚಾರವಾಗಿ ಕ್ರಮ ತೆಗೆದುಕೊಳ್ಳಲು ದೇವೇಗೌಡರು ಕೇಳಿಕೊಂಡರು. ಮುಂದಿನ ಸಂಪುಟ ಸಭೆಯಲ್ಲಿ ಇದರ ಬಗ್ಗೆ ಚರ್ಚೆ ಮಾಡುವುದಾಗಿ ಅಶೋಕ್ ಭರವಸೆ ನೀಡಿದರು.
ಬೇರೆ ಆಯಾಮಗಳಿವೆಯಾ?
ಕಂದಾಯ ಸಚಿವರಾಗಿರುವ ಆರ್. ಅಶೋಕ್ ಅವರು ಮಾಜಿ ಪ್ರಧಾನಿ ದೇವೇಗೌಡರ ಮನೆಗೆ ಹೋಗಿರುವ ಈ ಬೆಳವಣಿಗೆಯ ಹಿಂದೆ ಬೇರೆ ರಾಜಕೀಯ ವಿಚಾರಗಳಿವೆಯೇ ಎನ್ನುವ ಚರ್ಚೆಗಳೂ ಜೋರಾಗಿ ನಡೆಯುತ್ತಿವೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಇತ್ತೀಚೆಗೆ ರಾಜ್ಯದ ಪ್ರಭಾವಿ ಸಚಿವರೊಬ್ಬರ ಹಗರಣವನ್ನು ಬಿಚ್ಚಿಡುವುದಾಗಿ ಎಚ್ಚರಿಕೆ ನೀಡಿದ್ದರು. ಇದು ಯಾರು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಒಂದೊಮ್ಮೆ ಅದು ತಮ್ಮ ವಿರುದ್ಧವೂ ಇರಬಹುದೇ ಎಂಬ ಗುಮಾನಿಯೊಂದಿಗೆ ಅಶೋಕ್ ಅವರು ಆರೋಗ್ಯ ವಿಚಾರಣೆಯ ನೆಪದಲ್ಲಿ ದೊಡ್ಡ ಗೌಡರನ್ನು ಭೇಟಿಯಾದರೇ ಎನ್ನುವ ಪ್ರಶ್ನೆಯೂ ಚರ್ಚೆಯಲ್ಲಿದೆ.
ಇದನ್ನೂ ಓದಿ | Bihar Politics | ಮತ್ತೆ ಒಂದಾಗಲಿದೆಯೇ ಜನತಾ ಪರಿವಾರ? ದೇವೇಗೌಡರಲ್ಲಿ ಹೊಸ ಭರವಸೆ