Site icon Vistara News

Vishwadarshana School: ವಿಶ್ವದರ್ಶನ ಶಾಲೆಗೆ ಪುನರುಜ್ಜೀವನ ನೀಡಿರುವುದು ಉತ್ತಮ ಕಾರ್ಯ, ಬಿ.ಎಲ್‌. ಸಂತೋಷ್‌ ಮೆಚ್ಚುಗೆ

Vishwadarshana School

#image_title

ಯಲ್ಲಾಪುರ: “ಮಕ್ಕಳ ಮೇಲೆ ತಂದೆ-ತಾಯಿಯರ ಆಸೆಗಳನ್ನು ಹೇರಿಕೆ ಮಾಡಲಾಗುತ್ತದೆ. ಪ್ರತಿ ಮಕ್ಕಳಿಗೂ ಅವರದ್ದೇ ಆದ ಸಾಮರ್ಥ್ಯ, ಪ್ರತಿಭೆ ಇರುತ್ತದೆ. ಅದನ್ನು ಮುನ್ನೆಲೆಗೆ ತರುವ ಜವಾಬ್ದಾರಿ ಪಾಲಕರು ಹಾಗೂ ಶಿಕ್ಷಕರ ಮೇಲಿದೆ. ಇದರ ದೃಷ್ಟಿಯಿಂದ ವಿಶ್ವದರ್ಶನ (Vishwadarshana School) ಶಾಲೆಗೆ ಪುನರುಜ್ಜೀವನ ನೀಡುತ್ತಿರುವ ಹರಿಪ್ರಕಾಶ ಕೋಣೆಮನೆ ಅವರ ಕಾರ್ಯ ಶ್ಲಾಘನೀಯ” ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್‌ ಹೇಳಿದರು.

ಶನಿವಾರ ಸಂಜೆ ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, “ಶಾಲೆ ಮತ್ತು ಮನೆಯ ವಾತಾವರಣದ ನಡುವೆ ವ್ಯತ್ಯಾಸ ಇರಬೇಕು. ಹಾಗಾದಾಗ ಮಾತ್ರ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯ. ನಮ್ಮ ಸುತ್ತಮುತ್ತಲಿನ ವಾತಾವರಣವು ಮಕ್ಕಳಲ್ಲಿ ವ್ಯಾಘ್ರತೆ ಹುಟ್ಟಿಸುತ್ತದೆ. ಇದರ ಕುರಿತು ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ನನ್ನ ಹುಟ್ಟೂರಿಗೆ ನಾನೇನಾದರೂ ಒಳ್ಳೆಯದನ್ನು ಮಾಡುತ್ತೇನೆ ಎಂಬ ಗುಣ ಎಲ್ಲರಲ್ಲೂ ಬರುವುದಿಲ್ಲ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಲು, ಸಜ್ಜನರ ಜತೆಗೂಡಿ ಹಳೆಯ ಶಿಕ್ಷಣ ಸಂಸ್ಥೆಗೆ ಪುನರುಜ್ಜೀವನ ನೀಡುತ್ತಿರುವ ಹರಿಪ್ರಕಾಶ ಅವರ ಕಾರ್ಯ ಸಂತಸ ತಂದಿದೆ” ಎಂದರು.

ವಿಶ್ವದರ್ಶನ ಸಂಭ್ರಮ ಕಾರ್ಯಕ್ರಮ ಉದ್ಘಾಟನೆ ಬಳಿಕ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿದರು. “ವಿಶ್ವದರ್ಶನ ಸಂಸ್ಥೆಯ ಏಳಿಗೆಯನ್ನು ಪ್ರತ್ಯಕ್ಷವಾಗಿ ನೋಡಿದ್ದೇನೆ. ನಮ್ಮ ಹಿರಿಯರು ನಿಸ್ವಾರ್ಥವಾಗಿ ನೀಡಿದ ಕೊಡುಗೆಯ ಪರಿಣಾಮ ಇಂತಹ ಶಿಕ್ಷಣ ಸಂಸ್ಥೆಗಳು ಉತ್ತಮವಾಗಿ ಬೆಳೆದಿವೆ. ಒಂದು ಆದರ್ಶವಾದ ಶಿಕ್ಷಣ ಸಂಸ್ಥೆಯ ಕನಸಿನೊಂದಿಗೆ ಶಾಲೆ ಮುನ್ನಡೆಯುತ್ತಿದೆ. ನಮ್ಮ ಭವಿಷ್ಯದ ಯುವ ಜನಾಂಗ ಕೌಶಲಯುತ ಶಿಕ್ಷಣ ಪಡೆಯಬೇಕೆಂಬ ಸದುದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದಿರುವ ನೂತನ ಶಿಕ್ಷಣ ನೀತಿಯು ಉತ್ತಮ ಯೋಜನೆಯಾಗಿದೆ. ಮಕ್ಕಳು ಪಾಶ್ಚಿಮಾತ್ಯ ಸಂಸ್ಕೃತಿಯತ್ತ ವಾಲುತ್ತಿರುವ ಹಾಗೂ ಶಿಕ್ಷಣ ಎಂಬುದು ಹಣ ಗಳಿಕೆಯ ಹಾದಿಯಾಗುತ್ತಿರುವ ಕಾಲಘಟ್ಟದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ತರುತ್ತಿರುವ ವಿಶ್ವದರ್ಶನದಂತಹ ಸಂಸ್ಥೆಗಳ ಅವಶ್ಯಕತೆ ಹೆಚ್ಚಿದೆ” ಎಂದು ಹೇಳಿದರು.

ವಿಶ್ವದರ್ಶನ ಸಂಸ್ಥೆ ಅಧ್ಯಕ್ಷ, ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಹಾಗೂ ಸಿಇಒ ಹರಿಪ್ರಕಾಶ ಕೋಣೆಮನೆ ಮಾತನಾಡಿ, “ದಕ್ಷಿಣ ಭಾರತದ ಮೊದಲ ಸಂಸ್ಕೃತ ಬಿ.ಎಡ್‌ ಕಾಲೇಜನ್ನು ಶೀಘ್ರದಲ್ಲಿಯೇ ಪ್ರಾರಂಭಿಸಲಿದ್ದೇವೆ. ನಮ್ಮ ಶಿಕ್ಷಣ ಸಂಸ್ಥೆಯನ್ನು ಮಿನಿ ವಿಶ್ವವಿದ್ಯಾಲಯವನ್ನಾಗಿ ಪರಿವರ್ತಿಸುವ ಹಾದಿಯಲ್ಲಿ ಸಾಗುತ್ತಿದ್ದೇವೆ” ಎಂದು ಮಾಹಿತಿ ನೀಡಿದರು.

ವಿಶ್ವದರ್ಶನ ಶಿಕ್ಷಣ ಸಂಸ್ಥೆಯಿಂದ ನೀಡುವ 2023ನೇ ಸಾಲಿನ ವಿಶ್ವದರ್ಶನ ಪುರಸ್ಕಾರವನ್ನು ಬೆಂಗಳೂರಿನ ವಾಗ್ದೇವಿ ವಿಲಾಸ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಹರೀಶ್‌ ಹಾಗೂ ಬೆಂಗಳೂರಿನ ನ್ಯೂ ಬಾಲ್ಡ್‌ವಿನ್‌ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಟಿ. ವೇಣುಗೋಪಾಲ್‌ ಅವರಿಗೆ ನೀಡಿ ಗೌರವಿಸಲಾಯಿತು. ಹಾಗೆಯೇ, ಶೈಕ್ಷಣಿಕವಾಗಿ ಸಾಧನೆಗೈದ 23 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಇದನ್ನೂ ಓದಿ: Vishwadarshana School: ಸಂಸ್ಕಾರಯುತ ಶಿಕ್ಷಣ ನೀಡುವುದೇ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಉದ್ದೇಶ: ಹರಿಪ್ರಕಾಶ್‌ ಕೋಣೆಮನೆ

ವಿಧಾನ ಪರಿಷತ್‌ ಸದಸ್ಯ ಶಾಂತಾರಾಮ ಸಿದ್ದಿ, ಪಂಚಾಯತ್‌ ರಾಜ್‌ ವಿಕೇಂದ್ರೀಕರಣ ಉಪ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ತಹಸೀಲ್ದಾರ್‌ ಶ್ರೀಕೃಷ್ಣ ಕಾಮಕರ್‌, ವಿಶ್ವದರ್ಶನ ಶಿಕ್ಷಣ ಸಂಸ್ಥೆ ನಿರ್ದೇಶಕ ಎಚ್‌.ವಿ. ಧರ್ಮೇಶ್‌, ಸಂಸ್ಥೆಯ ಉಪಾಧ್ಯಕ್ಷ ಶ್ರೀನಿವಾಸ ಎಸ್‌.ಹೆಬ್ಬಾರ್‌, ಮುಖ್ಯ ಶೈಕ್ಷಣಿಕ ಅಧಿಕಾರಿ ಗುರುರಾಜ ಗಂಟಿಹೊಳೆ ಉಪಸ್ಥಿತರಿದ್ದರು. ಸೌಂದರ್ಯ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಸಂಸ್ಥೆಯ ಗೌರವ ಕಾರ್ಯದರ್ಶಿ ನರಸಿಂಹ ಕೋಣೆಮನೆ ಎಲ್ಲರನ್ನೂ ಸ್ವಾಗತಿಸಿದರು. ಆಸ್ಮಾ ಶೇಖ್ ಹಾಗೂ ಡಿ.ಕೆ. ಗಾಂವ್ಕರ್ ನಿರೂಪಿಸಿದರು.

Exit mobile version