Site icon Vistara News

Panchamasali Reservation : ಪಂಚಮಸಾಲಿ ಹೋರಾಟದಲ್ಲಿ ಒಡಕು, ಮುಸ್ಲಿಮರಿಂದ ಕಿತ್ತು ಕೊಟ್ಟ ಮೀಸಲಾತಿ ಬೇಡ ಎಂದ ಕಾಶಪ್ಪನವರ್

Vijayananda kashappanavar

#image_title

ಬೆಂಗಳೂರು: ರಾಜ್ಯ ಸರ್ಕಾರ ಪರಿಷ್ಕೃತ ಮೀಸಲಾತಿ ನೀತಿ ಮೂಲಕ ಲಿಂಗಾಯತ ಪಂಚಮಸಾಲಿ (Panchamasali Reservation) ಸಮುದಾಯಕ್ಕೆ 2ಡಿ ಪ್ರವರ್ಗದಡಿ ಶೇ. 7ರಷ್ಟು ಮೀಸಲಾತಿ (ಹಿಂದಿನ 3ಸಿಗಿಂತ ಎರಡು ಶೇಕಡಾ ಹೆಚ್ಚು) ನೀಡಿದ್ದನ್ನು ಹೋರಾಟ ಸಮಿತಿ ಒಪ್ಪಿಕೊಂಡು ಎರಡು ವರ್ಷಗಳ ಹೋರಾಟವನ್ನು ಹಿಂದೆ ಪಡೆದಿದೆ. ಆದರೆ, ಈ ವಿಚಾರ ಸಮಿತಿಯಲ್ಲಿ ಬಿರುಕು ಮೂಡಿಸಿದೆ. ಹೋರಾಟದ ಮುಂಚೂಣಿಯಲ್ಲಿದ್ದ ಕಾಂಗ್ರೆಸ್‌ನ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್‌ ಅವರು ಈ ಮೀಸಲಾತಿಯನ್ನು ಧಿಕ್ಕರಿಸಿದ್ದಾರೆ. ಮುಸ್ಲಿಮರಿಂದ ಕಿತ್ತುಕೊಡುವ ಮೀಸಲಾತಿ ಬೇಡ ಎಂದು ಹೇಳಿದ್ದಾರೆ.

ಕೂಡಲಸಂಗಮದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಮತ್ತು ವಿಜಯಾನಂದ ಕಾಶಪ್ಪನವರ್‌ ಕಳೆದ ಎರಡು ವರ್ಷಗಳಿಂದ ಹೋರಾಟವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಈಗ ವಿಜಯಾನಂದ ಕಾಶಪ್ಪನವರ್‌ ತಾನು ಈ ಮೀಸಲಾತಿಯನ್ನು ಒಪ್ಪುವುದಿಲ್ಲ ಎಂದಿದ್ದಾರೆ.

ನಾವು 2ಎ ಮೀಸಲಾತಿಗಾಗಿ ಹೋರಾಟ ಮಾಡಿದ್ದೆವು. ಶೇ. 15 ಮೀಸಲಾತಿಗಾಗಿ ಆಗ್ರಹಿಸಿದ್ದೆವು. ಆದರೆ, ಈಗ ಕೇವಲ 2 ಶೇಕಡಾ ಹೆಚ್ಚು ಮಾಡಲಾಗಿದೆ. ಸಿಗುವುದು ಕೇವಲ ಶೇಕಡಾ 7 ಮಾತ್ರ. ಸರ್ಕಾರ ಈಗ ಘೋಷಣೆ ಮಾಡಿರೋ ಮೀಸಲಾತಿ ಚುನಾವಣೆಗೆ ಮಾಡಿರುವ ತಂತ್ರ ಎಂದು ಕಾಶಪ್ಪನವರ್‌ ಹೇಳಿದ್ದಾರೆ.

ಅದರಲ್ಲೂ ಮುಸ್ಲಿಮರ ಮೀಸಲಾತಿಯನ್ನು ಕಿತ್ತುಕೊಂಡು ನಮಗೆ ನೀಡಲಾಗಿದೆ. ಮುಸ್ಲಿಮರು ಮತ್ತು ಲಿಂಗಾಯತರ ನಡುವೆ ದ್ವೇಷ ಬಿತ್ತುವ ಕೆಲಸ. ಯಾವುದೋ ಒಂದು ಸಮುದಾಯಕ್ಕೆ ಅನ್ಯಾಯ ಮಾಡಿ, ನಮ್ಮ ಸಮುದಾಯಕ್ಕೆ ಕೊಡಿ ಅಂತಾ ನಾವು ಹೇಳಿಲ್ಲ. ಹೀಗಾಗಿ ಇದು ನಮಗೆ ಒಪ್ಪಿಗೆ ತಂದಿಲ್ಲ. ಇದು ನಮಗೆ ತೃಪ್ತಿ ತಂದಿಲ್ಲ ಎಂದಿದ್ದಾರೆ ಕಾಶಪ್ಪನವರ್‌.

ʻʻಅಲ್ಪಸಂಖ್ಯಾತರ ಮೀಸಲಾತಿ ಕಿತ್ತು ನಮಗೆ ನೀಡಿದೆ. ಆ ಮೂಲಕ ನಮ್ಮ ಮೇಲೆ ಗೂಬೆ ಕೂರಿಸುವ ಕುತಂತ್ರ ಮಾಡ್ತಿದೆ. ಇದಜಯನ್ನ ನಾವು ಒಪ್ಪುವುದಿಲ್ಲ. ನಾವು ಅಲ್ಪಸಂಖ್ಯಾತ ಪರವಾಗಿ ಇರುತ್ತೇವೆ. ಈ ಮೀಸಲಾತಿ ನಮಗೆ ಬೇಡ. ಇದನ್ನು ನಾನು ಧಿಕ್ಕರಿಸ್ತೀನಿʼʼ ಎಂದಿರುವ ಕಾಶಪ್ಪನವರ್‌, ಈ ಮೀಸಲಾತಿ ನೀತಿ ವಿರುದ್ಧ ಅನೇಕ ಮಂದಿ ಇನ್ನು ಕೋರ್ಟ್‌ಗೆ ಹೋಗುತ್ತಾರೆ. ಕೇವಲ ಚುನಾವಣೆಗಾಗಿ ಮಾಡಿರುವ ಇದನ್ನು ಒಪ್ಪುವಂತೆ ಸ್ವಾಮೀಜಿ ಮೇಲೂ ಒತ್ತಡ ಹೇರಲಾಗಿದೆʼʼ ಎಂದು ಕಾಶಪ್ಪನವರ್‌ ಹೇಳಿದರು.

ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದೇನು?

ಅದಕ್ಕಿಂತ ಮೊದಲು ಮಾರನಾಡಿದ್ದ ಜಯಮೃತ್ಯುಂಜಯ ಸ್ವಾಮೀಜಿ ಅವರು, ʻʻಬಸವನಗೌಡ ಪಾಟೀಲ್ ಯತ್ನಾಳ್ ಕೇಂದ್ರ ಸರ್ಕಾರಕ್ಕೆ ನಮ್ಮ ಹೋರಾಟವನ್ನು ಮನವರಿಕೆ‌ ಮಾಡಿಕೊಟ್ಟರು. ತಡವಾಗಿ ಆದರೂ ಪರವಾಗಿಲ್ಲ. ಎಲ್ಲ ಲಿಂಗಾಯತ ಪಂಗಡಗಳನ್ನು ಸೇರಿಸಿ ಮೀಸಲಾತಿ ನೀಡಿದ್ದು ಸಮಾಧಾನವಾಗಿದೆ. ನಮ್ಮ ಹೋರಾಟಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾ ಕೂಡ ಬೆಂಬಲ ನೀಡಲಿಲ್ಲ. ಸಿದ್ದಗಂಗಾ ಮಠ ಒಂದು ಬಿಟ್ರೆ, ಬೇರೆ ಯಾವುದೇ ಮಠಗಳು ಸಹ ಬೆಂಬಲ ನೀಡಲಿಲ್ಲ. ಆದರೂ ಎರಡೂ ವರ್ಷ ಹೋರಾಟಕ್ಕೆ‌ ಮೊದಲನೇ ಹೆಜ್ಜೆಯಾಗಿ ಸಫಲತೆ ಕಂಡಿದ್ದೇವೆʼʼ ಎಂದು ಹೇಳಿದರು.

2ಎಯಲ್ಲಿ ಏನೆಲ್ಲ ಸವಲತ್ತುಗಳು ಇವೆಯೋ ಅವೆಲ್ಲವೂ 2ಡಿ ಯಲ್ಲಿಯೂ ಸಿಗಲಿದೆ ಎಂದು ದೃಢಪಡಿಸಿಕೊಂಡಿದ್ದೇವೆ. ಇನ್ನು ಕೇಂದ್ರದ ಒಬಿಸಿ ಮೀಸಲಾತಿಗಾಗಿ ಹೋರಾಟ ಮಾಡೋಣ. ಚುನಾವಣೆಯ ಬಳಿಕ ಹೋರಾಟ ಮುಂದುವರಿಸೋಣ ಎಂದು ಸ್ವಾಮೀಜಿ ಹೇಳಿದರು.

ಇದನ್ನೂ ಓದಿ : Panchamasali Reservation : 2ಡಿ ಮೀಸಲಾತಿಗೆ ಪಂಚಮಸಾಲಿ ಒಪ್ಪಿಗೆ, ಎರಡು ವರ್ಷಗಳ ಹೋರಾಟಕ್ಕೆ ತೆರೆ

Exit mobile version