Site icon Vistara News

Congress Guarantee: ಅಕ್ಕಿ ವಿಚಾರದಲ್ಲಿ ಸುಳ್ಳು ಹೇಳಿದರೇ ಸಿದ್ದರಾಮಯ್ಯ? ಸತ್ಯ ತಿಳಿಸಿದ ಕೇಂದ್ರ ಸರ್ಕಾರ

Chief Minister Siddaramaiah

ಬೆಂಗಳೂರು/ನವದೆಹಲಿ: ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ (Congress Guarantee) ಅನ್ನಭಾಗ್ಯವನ್ನು ಜಾರಿ ಮಾಡಲು ಕೇಂದ್ರ ಸರ್ಕಾರ ಅಡ್ಡಗಾಲು ಹಾಕಿದೆ. ರಾಜ್ಯಗಳಿಗೆ ಅಕ್ಕಿ ಮಾರಾಟ ಮಾಡುವ ಪ್ರಕ್ರಿಯೆಯನ್ನು ಭಾರತೀಯ ಆಹಾರ ನಿಗಮ ನಿಲ್ಲಿಸಿದೆ. ಅಕ್ಕಿ ವಿತರಣೆ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ ಎಂಬ ಆರೋಪಕ್ಕೆ ಕೇಂದ್ರ ಸರ್ಕಾರ ತಿರುಗೇಟು ನೀಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪದ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಸ್ಪಷ್ಟನೆ ನೀಡಿದೆ. “ಕೇಂದ್ರ ಸರ್ಕಾರವು ಹಣದುಬ್ಬರ ನಿಯಂತ್ರಿಸಲು ಯತ್ನಿಸುತ್ತಿದೆ. ಅದಕ್ಕೆ, ಭಾರತೀಯ ಆಹಾರ ನಿಗಮವು ಮುಕ್ತ ಮಾರುಕಟ್ಟೆಯಲ್ಲಿ ಗೋಧಿ ಹಾಗೂ ಅಕ್ಕಿಯನ್ನು ಮಾರಾಟ ಮಾಡುತ್ತದೆ. ಅಕ್ಕಿ ಹಾಗೂ ಗೋಧಿ ಮಾರಾಟದ ಕುರಿತು 2023-24ನೇ ಸಾಲಿನ ಮೊದಲ ಹರಾಜು ಜೂನ್‌ 28ರಂದು ನಡೆಯಲಿದೆ” ಎಂದು ಸ್ಪಷ್ಟಪಡಿಸಿದೆ. ಆ ಮೂಲಕ ಅಕ್ಕಿಯ ಮಾರಾಟವನ್ನು ಸ್ಥಗಿತಗೊಳಿಸಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.

ಸಿದ್ದರಾಮಯ್ಯ ಹೇಳಿದ್ದೇನು?

ಅಕ್ಕಿ ನೀಡುವ ಕುರಿತು ಭಾರತೀಯ ಆಹಾರ ನಿಗಮದ ಜತೆಗೆ ಮಾತನಾಡಲಾಗಿದೆ. ನಮ್ಮ ಬಳಿ ಸ್ಟಾಕ್‌ ಇದೆ, ಕೊಡುತ್ತೇವೆ ಎಂದು ಎಫ್‌ಸಿಐನವರು ಹೇಳಿದ್ದಾರೆ. ಅದಾದ ನಂತರ ಎಫ್‌ಸಿಐ ಉಪ ಪ್ರಧಾನ ವ್ಯವಸ್ಥಾಪಕರನ್ನು ಕರೆದು ಮಾತನಾಡಲಾಗಿತ್ತು. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಮುನಿಯಪ್ಪ ಅವರೂ ಮಾತನಾಡಿದ್ದರು. ನೀವು ಒಪ್ಪಿಕೊಂಡಮೇಲೆ ತಪ್ಪಿಸಬಾರದು ಎಂದು ಹೇಳಿದೆವು. ಇದಕ್ಕೆ ಅವರು ಒಪ್ಪಿದ್ದಾರೆ. ಎಫ್‌ಸಿಐನಲ್ಲಿ 7 ಲಕ್ಷ ಟನ್‌ ಅಕ್ಕಿ ಇದೆ ಎಂದು ಹೇಳಿದ್ದರು ಎಂಬುದಾಗಿ ಸಿದ್ದರಾಮಯ್ಯ ಹೇಳಿದರು.

ಜೂನ್‌ 13ರಂದು ಎಫ್‌ಸಿಐ ಪತ್ರ ಬರೆದಿದೆ. ಕೇಂದ್ರ ಗ್ರಾಹಕ ಸಚಿವಾಲಯ ಪತ್ರ ಬರೆದಿದೆ. ಗೋಧಿ ಹಾಗೂ ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಲ್ಲಿ (ಓಪನ್‌ ಮಾರ್ಕೆಟ್‌ ಸೇಲ್ಸ್ ಸ್ಕೀಂ) ರಾಜ್ಯ ಸರ್ಕಾರಗಳಿಗೆ ಮಾರಾಟ ಮಾಡುವುದನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಆದರೆ ಈಶಾನ್ಯ ರಾಜ್ಯಗಳಿಗೆ ಮಾತ್ರ ಈ ಯೋಜನೆ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ. ಇ ಹರಾಜಿಗೆ ಮುಂದೆ ಎಫ್‌ಸಿಐ ಮಾರ್ಗಸೂಚಿ ಬಿಡುಗಡೆ ಮಾಡುತ್ತದೆ ಎಂದೂ ಹೇಳಿದ್ದಾರೆ ಎಂದರು.

ಇದನ್ನೂ ಓದಿ: Congress Guarantee: ಅನ್ನಭಾಗ್ಯ ಅಕ್ಕಿಗೆ ಕೇಂದ್ರ ಸರ್ಕಾರದ ಕೊಕ್ಕೆ!: ಗ್ಯಾರಂಟಿ ಫೇಲ್‌ ಮಾಡಲು ಷಡ್ಯಂತ್ರ ಎಂದ ಸಿಎಂ ಸಿದ್ದರಾಮಯ್ಯ

ಅಂದರೆ ರಾಜಕೀಯ ನಿರ್ಧಾರ ಮಾಡಿದ್ದಾರೆ. ಮೊದಲಿಗೆ ಅಕ್ಕಿ ಕೊಡುತ್ತೇವೆ ಎಂದು ಒಪ್ಪಿಕೊಂಡಿದ್ದರು. ಅದರ ಆಧಾರದಲ್ಲಿ ನಾವು ಜುಲೈ 1ರಿಂದ ಕೊಡಲು ಘೋಷಣೆ ಮಾಡಿದ್ದೆವು. ಕರ್ನಾಟಕದಲ್ಲಿ ಅಕ್ಕಿ ಸಿಗುವುದಿಲ್ಲವಾದ್ಧರಿಂದ ಎಫ್‌ಸಿಐ ಮೇಲೆ ಭರವಸೆ ಇಟ್ಟಿದ್ದೆವು. ಒಪ್ಪಿಕೊಂಡ ಒಂದೇ ದಿನದಲ್ಲಿ ಕೇಂದ್ರ ಸರ್ಕಾರ ರಾಜಕೀಯ ನಿರ್ಧಾರ ಮಾಡಿ ಅಕ್ಕಿ ಕೊಡಬಾರದು ಎಂದು ತಿಳಿಸಿದೆ. ಇದರಿಂದ ಕರ್ನಾಟಕ ಸರ್ಕಾರಕ್ಕೆ, ಕಾಂಗ್ರೆಸ್‌ ಪಕ್ಷಕ್ಕೆ ಒಳ್ಳೆಯ ಹೆಸರು ಬರುತ್ತದೆ ಎಂಬ ಕಾರಣಕ್ಕೆ ಈ ನಿರ್ಧಾರ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

Exit mobile version