ಮಂಗಳೂರು: ಕಾಂತಾರ(Kantara) ಸಿನಿಮಾ ಭರ್ಜರಿ ಯಶಸ್ಸು ಪಡೆದ ಹಿನ್ನೆಲೆಯಲ್ಲಿ ಧರ್ಮಸ್ಥಳಕ್ಕೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ದಂಪತಿ ಬುಧವಾರ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿ ದರ್ಶನ ಮಾಡಿ, ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದ ಪಡೆದರು.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಷೇತ್ರಕ್ಕೆ ಪತ್ನಿ ಪ್ರಗತಿ ಶೆಟ್ಟಿ ಜತೆಗೆ ಭೇಟಿ ನೀಡಿದ್ದ ರಿಷಬ್ ಶೆಟ್ಟಿ, ಮಂಜುನಾಥ ಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಇವರಿಗೆ ನಟ ಪ್ರಮೋದ್ ಶೆಟ್ಟಿ ಸಾಥ್ ನೀಡಿದರು. ಬಳಿಕ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ರಿಷಬ್ ಶೆಟ್ಟಿ ದಂಪತಿ ಭೇಟಿಯಾಗಿ ಆಶೀರ್ವಾದ ಪಡೆದರು. ಕಾಂತಾರ ಸಿನಿಮಾ ಯಶಸ್ಸು ಕಂಡ ಹಿನ್ನೆಲೆಯಲ್ಲಿ ವೀರೇಂದ್ರ ಹೆಗ್ಗಡೆ ಮತ್ತು ಧರ್ಮಪತ್ನಿ ಹೇಮಾವತಿ ಹೆಗ್ಗಡೆ ಅವರು ಚಿತ್ರ ತಂಡದ ಶ್ರಮಕ್ಕೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಟ, ನಿರ್ದೇಶಕ ರಿಷಬ್ ಶೆಟ್ಟಿ ಮಾತನಾಡಿ, ಕಾಂತಾರ ಸಿನಿಮಾ ಮಾಡುವ ಮುನ್ನ ಹೆಗ್ಗಡೆ ಅವರನ್ನು ಭೇಟಿ ಮಾಡಿದ್ದೆ. ಟ್ರೇಲರ್ ರಿಲೀಸ್ ಆದ ಬಳಿಕ ಮತ್ತೆ ಬಂದಿದ್ದೆ. ಸಿನಿಮಾ ರಿಲೀಸ್ ಬಳಿಕ ಹೆಗ್ಗಡೆ ಅವರ ಭೇಟಿಗೆ ಸಾಕಷ್ಟು ಸಲ ಬರಬೇಕು ಅಂದುಕೊಂಡಿದ್ದೆ. ಆದರೆ, ಇದೀಗ ಕಾಲ ಕೂಡಿ ಬಂತು. ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದೆವು. ಸಿನಿಮಾ 30 ದಿನ ದಾಟಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ ಎಂದರು.
ಇದನ್ನೂ ಓದಿ | Kantara Movie | ಬೆಂಗಳೂರಿನಲ್ಲಿ ಕಾಂತಾರ ಸಿನಿಮಾ ವೀಕ್ಷಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್