ನವದೆಹಲಿ: ಮನ್ ಕೀ ಬಾತ್ ಸರಣಿಯ 108ನೇ, 2023ರ ಕೊನೆಯ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಫಿಟ್‌ನೆಸ್ ಹಾಗೂ ಮಾನಸಿಕ ಆರೋಗ್ಯದ ಕುರಿತು ಮಾತನಾಡಿದರು. ಅಲ್ಲದೆ, ಬೆಂಗಳೂರಿನಲ್ಲಿ ನೆಲೆಸಿರುವ, ಫಿಟ್‌ನೆಸ್ ಸ್ಟಾರ್ಟಪ್ ಆರಂಭಿಸಿರುವ ರಿಷಭ್ ಮಲ್ಹೋತ್ರಾ (Rishabh Malhotra) ಅವರು ಮನ್ ಕೀ ಬಾತ್ ಕಾರ್ಯಕ್ರಮದ ಮೂಲಕ ದೇಶದ ಜನರಿಗೆ ಸಾಂಪ್ರದಾಯಿಕವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು, ಫಿಟ್‌ನೆಸ್ ಕಾಪಾಡುವುದು ಹೇಗೆ ಎಂಬುದರ ಕುರಿತು ಸಲಹೆ ನೀಡಿದರು.
ರಿಷಭ್ ಮಲ್ಹೋತ್ರಾ ಅವರು ಬೆಂಗಳೂರಿನಲ್ಲಿ ತಗ್ಡಾ ರಹೋ ಎಂಬ ಫಿಟ್‌ನೆಸ್ ಸ್ಟಾರ್ಟಪ್ ಮುನ್ನಡೆಸುತ್ತಿದ್ದಾರೆ. “ಭಾರತದಲ್ಲಿ ವ್ಯಾಯಾಮ, ಫಿಟ್‌ನೆಸ್‌ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬೆಂಗಳೂರಿನಲ್ಲಿ ನಾವು ತಗ್ಡಾ ರಹೋ ಎಂಬ ಫಿಟ್‌ನೆಸ್ ಸ್ಟಾರ್ಟಪ್ ಮುನ್ನಡೆಸುತ್ತಿದ್ದೇವೆ. ದೇಶದ ಸಾಂಪ್ರದಾಯಿಕ ವ್ಯಾಯಾಮ ಪದ್ಧತಿಯಾದ ಗದಾ ವ್ಯಾಯಾಮ ಪದ್ಧತಿಯನ್ನು ನಾವು ಅಳವಡಿಸಿಕೊಂಡಿದ್ದೇವೆ. ಯುವಕರಿಗೆ ಗದಾ ವ್ಯಾಯಾಮ ಮೂಲಕ ಅವರ ಫಿಟ್‌ನೆಸ್ ಕಾಪಾಡುತ್ತಿದ್ದೇವೆ” ಎಂದು ರಿಷಭ್ ಮಲ್ಹೋತ್ರಾ ತಿಳಿಸಿದರು.
“ಭಾರತದ ಪಾರಪಂರಿಕ ವ್ಯಾಯಾಮ ಪದ್ಧತಿಯನ್ನು ಮುಂದುವರಿಸುವುದು ನಮ್ಮ ಗುರಿಯಾಗಿದೆ. ಗದಾ ಬಳಸಿ ವ್ಯಾಯಾಮ ತರಬೇತಿ ಹೇಗೆ ನೀಡಲಾಗುತ್ತದೆ ಎಂಬುದು ಜನರ ಪ್ರಶ್ನೆಯಾಗಿದೆ. ಆದರೆ, ಗದಾ ಬಳಸಿ ನಾವು ವ್ಯಾಯಾಮದ ತರಬೇತಿ ನೀಡುತ್ತಿರುವುದು ಯಶಸ್ವಿಯಾಗಿದೆ. ಗದಾ ವ್ಯಾಯಾಮದಿಂದ ಜನರ ಬಲ ಹೆಚ್ಚುವ, ಫಿಟ್ ಆಗಿರುವ ಜತೆಗೆ ಉಸಿರಾಟದ ಸಮಸ್ಯೆಯೂ ಬಗೆಹರಿಯುತ್ತದೆ” ಎಂದು ಹೇಳಿದರು.
ರಿಷಭ್ ಮಲ್ಹೋತ್ರಾ ಫಿಟ್‌ನೆಸ್ ಟಿಪ್ಸ್
Rishabh Malhotra, founder of fitness start-up 'Tagda Raho' sharing his views on fitness in today's #MannKiBaat programme. pic.twitter.com/Mq2EUttns7
— Mann Ki Baat Updates मन की बात अपडेट्स (@mannkibaat) December 31, 2023
ಮಾನಸಿಕ, ದೈಹಿಕ ಆರೋಗ್ಯ ಪ್ರಸ್ತಾಪ
ದೇಶದ ಜನರಲ್ಲಿ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಸಮಸ್ಯೆ ಕಾಡುತ್ತಿರುವ ಕುರಿತು ನರೇಂದ್ರ ಮೋದಿ ಹೇಳಿದರು. “ಮಾನಸಿಕ ಹಾಗೂ ದೈಹಿಕ ಆರೋಗ್ಯವು ಪ್ರತಿಯೊಬ್ಬರ ಆದ್ಯತೆಯಾಗಲಿ. ಫಿಟ್ ಇಂಡಿಯಾ ಅಭಿಯಾನದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು” ಎಂದು ನರೇಂದ್ರ ಮೋದಿ ಹೇಳಿದರು. ಹಾಗೆಯೇ, ಮಾನಸಿಕ ಆರೋಗ್ಯದ ಕುರಿತು ಜಗ್ಗಿ ವಾಸುದೇವ್, ಕ್ರಿಕೆಟ್ ಆಟಗಾರ್ತಿ ಹರ್ಮನ್‌ಪ್ರೀತ್ ಕೌರ್, ಚೆಸ್ ದಂತಕತೆ ವಿಶ್ವನಾಥನ್ ಆನಂದ್, ನಟ ಅಕ್ಷಯ್ ಕುಮಾರ್ ಅವರ ಸಂದೇಶವನ್ನು ಕೂಡ ಕೇಳಿಸಿದರು.
ಇದನ್ನೂ ಓದಿ: ಮನ್ ಕೀ ಬಾತ್‌ನಲ್ಲಿ ಚಾಮರಾಜನಗರದ ವರ್ಷಾ ಎಂಬ ಮಹಿಳೆಯ ನೆನೆದ ಮೋದಿ; ಏನಿವರ ಸಾಧನೆ?
“ದೇಶದ ಎಲ್ಲರೂ ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಹೊಸ ವರ್ಷದ ಸಂದರ್ಭದಲ್ಲಿ ಎಲ್ಲರೂ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ನಿರ್ಣಯ ಮಾಡೋಣ” ಎಂದು ಪ್ರಧಾನಿ ಹೇಳಿದರು. ಹಾಗೆಯೇ ಮೋದಿ ಅವರು ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಹಿಳೆಯರ ಶಿಕ್ಷಣ, ಸಮಾಜ ಸೇವೆ, ಅಯೋಧ್ಯೆ ರಾಮಮಂದಿರ ಸೇರಿ ಹಲವು ವಿಷಯಗಳ ಕುರಿತು ಮಾತನಾಡಿದರು. ರಾಮಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಜನರು ರಾಮಭಜನೆ ರಚಿಸುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ. ದೇಶಕ್ಕೆ ದೇಶವೇ ರಾಮಮಯವಾಗಲಿ ಎಂದು ಕರೆ ನೀಡಿದರು. ಎಲ್ಲರಿಗೂ ದೇಶವೇ ಮೊದಲು ಎಂಬ ತತ್ವವೇ ಮೊದಲಾಗಲಿ, ದೇಶದ ಏಳಿಗೆಗೆ ಎಲ್ಲರೂ ಶ್ರಮಿಸಿ ಎಂದು ಕೂಡ ಹೇಳಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ