ಬೆಳಗಾವಿ: ಇಲ್ಲಿನ ರಾಮದುರ್ಗ ತಾಲೂಕಿನ ಹಲಗತ್ತಿ ಬೈಪಾಸ್ ಬಳಿ 5 ವರ್ಷದ ಬಾಲಕನೊಬ್ಬ ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಕಾರೊಂದು ಡಿಕ್ಕಿ (Road Accident) ಹೊಡೆದಿದೆ. ಉಮರ್ ಫಾರುಖ್ (5) ಕಾರು ಅಪಘಾತದಿಂದ ಗಂಭೀರವಾಗಿ ಗಾಯಗೊಂಡಿರುವ ಬಾಲಕನಾಗಿದ್ದಾನೆ.
ಕಾರು ಅಪಘಾತದ ಭೀಕರ ದೃಶ್ಯವು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಉಮರ್ ಫಾರುಖ್ ತನ್ನ ಕುಟುಂಬದವರೊಂದಿಗೆ ರಸ್ತೆ ಬದಿ ನಡೆದುಕೊಂಡು ಬರುತ್ತಿದ್ದಾಗ ರಸ್ತೆ ದಾಟಲು ಮುಂದಾಗಿದ್ದು, ನೋಡನೋಡುತ್ತಿದ್ದಂತೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬಾಲಕ ಎಗರಿ ದೂರಕ್ಕೆ ಹಾರಿ ಬಿದ್ದಿದ್ದಾನೆ.
ಅಪಘಾತದ ವಿಡಿಯೊ ಇಲ್ಲಿದೆ
ಸದ್ಯ ಕಾರು ಅಪಘಾತಕ್ಕೊಳಗಾಗಿರುವ ಬಾಲಕ ಜೀವನ್ಮರಣ ಹೋರಾಟದಲ್ಲಿದ್ದು, ಚಿಕಿತ್ಸೆಗಾಗಿ ಮಗುವನ್ನು ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಮದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಸಿಡಿ ಕಂಬದಿಂದ ಕೆಳಗೆ ಬಿದ್ದು ಮಹಿಳೆ ದಾರುಣ ಮೃತ್ಯು
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಾಂಬಾ ಗ್ರಾಮದ ಮಹಾಲಕ್ಷ್ಮೀ ದೇಗುಲದಲ್ಲಿ ಸಿಡಿ ಆಡುವ ವೇಳೆ ಮಹಿಳೆಯೊಬ್ಬರು ಕಂಬದಿಂದ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ (Tragic death). ಲಕ್ಷ್ಮೀಬಾಯಿ ಪೂಜಾರಿ ಎಂಬ ಮಹಿಳೆ ಮೃತಪಟ್ಟವರು.
ಮಹಾಲಕ್ಷ್ಮಿ ದೇಗುಲದಲ್ಲಿ ಪ್ರತಿ ಶುಕ್ರವಾರ ಸಿಡಿ ಆಡುವ ಕಾರ್ಯಕ್ರಮ ಇರುತ್ತದೆ. ಹರಕೆ ಹೇಳಿಕೊಂಡವರು ಇಲ್ಲಿಗೆ ಬಂದು ಸಿಡಿ ಆಡುವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಇದೇ ರೀತಿ ಲಕ್ಷ್ಮೀ ಬಾಯಿ ಅವರು ಸಿಡಿ ಆಡಲು ಬಂದಿದ್ದರು. ಸಿಡಿ ಕಂಬದಲ್ಲಿ ನೇತಾಡುತ್ತಿದ್ದ ಅವರು ಸುಮಾರು 50 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದು, ಅಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.
ಏನಿದು ಸಿಡಿ ಸೇವೆ?
ಸಿಡಿ ಎಂದರೆ ಕರ್ನಾಟಕದಲ್ಲಿ ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿದ್ದ, ನಿರ್ದಿಷ್ಟ ದೈವಕ್ಕೆ ಹೊತ್ತ ಹರಕೆ ತೀರಿಸುವ ಜನಪದ ಉಗ್ರ ಸಂಪ್ರದಾಯಗಳಲ್ಲಿ ಒಂದು. ಈ ಸಂಪ್ರದಾಯ ಶಾಕ್ತೇಯ ಪಂಥದ ಪ್ರಭಾವದಿಂದ ರೂಢಿಗೆ ಬಂದಂತೆ ತಿಳಿಯುತ್ತದೆ. ಸಿಡಿ ಆಡುವುದು ನಿರ್ದಿಷ್ಟ ದೇವತೆಯ ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ನಡೆಯುತ್ತದೆ. ಆದರೆ ಕೆಲವು ಕಡೆ ಪ್ರತಿ ವಾರವೂ ನಡೆಯುತ್ತದೆ. ತಾಂಬಾ ಗ್ರಾಮದ ದೇವಸ್ಥಾನದಲ್ಲಿ ಪ್ರತಿ ಶುಕ್ರವಾರ ನಡೆಯುತ್ತಿದೆ
ಸಿಡಿಯಲ್ಲಿ ಮುಖ್ಯವಾಗಿ ಬೆನ್ನುಸಿಡಿ, ಬಟ್ಟೆಸಿಡಿ ಎಂಬ ಎರಡು ವಿಧಾನಗಳಿವೆ. ಬೆನ್ಸಿಡಿ ಎಂದರೆ ವ್ಯಕ್ತಿಯ ಬೆನ್ನು(ಹುರಿ)ನರವನ್ನು ಹಿಡಿದು, ಶಸ್ತ್ರದಿಂದ ಅದರ ಹಿಂದಿನ ಭಾಗಕ್ಕೆ ಚುಚ್ಚಿ, ಕಬ್ಬಿಣದ ಕೊಂಡಿಗಳನ್ನು ನರಕ್ಕೆ ಸಿಕ್ಕಿಸುವುದು. ಆತನಿಂದ ಕೆಂಡ ಹಾಯಿಸಿದ ಅನಂತರ, ಸಿಡಿ ಕಂಬವನ್ನು ನೆಲದತ್ತ ಬಗ್ಗಿಸಲಾಗುತ್ತದೆ. ಕಲ್ಲುಕಂಬದ ನಡುವೆ ನೆಟ್ಟ ತಿರುಗಣೆಗೆ ಅಡ್ಡಲಾಗಿ ಏತದ ಮರದಂತೆ ತೋರುವ ದಪ್ಪ ಮರದ ಮುಂದಿನ ತುದಿಗೆ ಸಿಕ್ಕಿಸಿದ ಕಬ್ಬಿಣದ ಕೊಂಡಿಗೆ ಸಿಡಿಯಾಡುವಾತನ ಬೆನ್ನ ಸರಪಳಿಗಳನ್ನು ಸಮಾಂತರವಾಗಿ ಕಟ್ಟಿ, ಸಿಡಿಕಂಬವನ್ನು ಭೂಮಿಗೆ ಸಮಾಂತರವಾಗಿ ಮೇಲಕ್ಕೆ ಏರಿಸುವರು. ಆಗ ಸಿಡಿ ಕಂಬಕ್ಕೆ ಬೆನ್ನು ಹಿಂದಾಗಿ ನೇತು ಬಿದ್ದ ಸಿಡಿಯಾಡುವಾತ ಮರಕ್ಕೆ ಕಾಲು ಮೇಲಾಗಿ ನೇತುಬಿದ್ದ ಬಾವಲಿಯಂತೆ ತೋರುತ್ತಿದ್ದು, ತನಗಾದ ನೋವಿನ ಪರಿವೆಯೇ ಇಲ್ಲದೆ ಅಟ್ಟಹಾಸದಿಂದ ಕತ್ತಿಯನ್ನು ಎಡಬಲಕ್ಕೆ ಬೀಸುತ್ತ, ದೇವತೆಗೆ ಎತ್ತಿ ಎತ್ತಿ ಕೈಮುಗಿಯುತ್ತಿರುತ್ತಾನೆ.
ಇದನ್ನೂ ಓದಿ: Murder Case: ವಿಜಯಪುರದಲ್ಲಿ ಕ್ಷುಲ್ಲಕ ಕಾರಣಕ್ಕೆ ಬಾಲಕನ ಹತ್ಯೆಗೈದ ಪಾಪಿ; ಹಂತಕನ ಬಂಧನ
ಅನಂತರ ಸಿಡಿಕಂಬ ಮೆಲ್ಲಗೆ ತಿರುಗಲಾರಂಭಿಸುತ್ತದೆ. ಎಡಗಡೆ ಯಿಂದ ಬಲಗಡೆಗೆ, ಬಲಗಡೆಯಿಂದ ಎಡಗಡೆಗೆ ಮೂರಾವರ್ತಿ ತಿರುಗಿದ ಅನಂತರ, ಸಿಡಿಯಾಡುವವನನ್ನು ಸಿಡಿಕಂಬದಿಂದ ಕೆಳಗಿಳಿಸುತ್ತಾರೆ. ಅಲ್ಲಿಂದ ಆತನನ್ನು ದೇವರೆದುರು ಕರೆದೊಯ್ದು, ಅಲ್ಲಿ ಬೆನ್ನಿಗೆ ಸಿಕ್ಕಿಸಿದ ಕೊಂಡಿಗಳನ್ನು ತೆಗೆದು, ಗಾಯಗಳಿಗೆ ದೇವರ ಭಂಡಾರವನ್ನು (ಅರಿಸಿನ ಕುಂಕುಮದ ವಿಶೇಷ ಮಿಶ್ರಣ) ಮೆತ್ತಿ ಬಿಳಿಯ ವಸ್ತ್ರದ ಪಟ್ಟು ಕಟ್ಟುತ್ತಾರೆ. ಗಾಯಗಳು ಅಲ್ಲಿಂದ ಒಂಬತ್ತು ದಿನಗಳಲ್ಲಿ ಸಂಪೂರ್ಣ ವಾಸಿಯಾಗುತ್ತವಂತೆ. ಬಟ್ಟೆ ಸಿಡಿ ಎಂದರೆ ಮೈಗೆ ಬಟ್ಟೆ ಕಟ್ಟಿ ಅದಕ್ಕೆ ಕಬ್ಬಿಣದ ಕೊಂಡಿಗಳನ್ನು ಸಿಕ್ಕಿಸುತ್ತಾರೆ.