Site icon Vistara News

Road Accident : ಕಾರು- ಬೈಕ್‌ ನಡುವೆ ಭೀಕರ ಅಪಘಾತ; ಮೂವರ ದುರ್ಮರಣ

car accident

car accident

ಗದಗ: ಇಲ್ಲಿನ ಅಡವಿಸೋಮಾಪೂರ ಬಳಿ ಎರಡು ಬೈಕ್‌ ಹಾಗೂ ಕಾರಿನ ನಡುವೆ ಸರಣಿ ಅಪಘಾತ (Road Accident) ನಡೆದಿದೆ. ಈ ದುರ್ಘಟನೆಯಲ್ಲಿ ಮೂವರು ಮೃತಪಟ್ಟಿದ್ದಾರೆ. ಶಿವಪ್ಪ ನಾಯಕ್ (50), ಶಿವಾನಂದ ಲಮಾಣಿ (33) ಮತ್ತು ಕೃಷ್ಣಪ್ಪ ಚೌಹಾಣ್‌ ಮೃತ ದುರ್ದೈವಿಗಳಾಗಿದ್ದಾರೆ.

ಅಡವಿಸೋಮಾಪುರ ಗ್ರಾಮದಿಂದ ಮುಂಡರಗಿಗೆ ಮಾರ್ಗದ ಮಲ್ಲಿಕಾರ್ಜುನ ಮಠದ ಬಳಿ ಕಾರು ವೇಗವಾಗಿ ಬಂದಿದ್ದು, ನಿಯಂತ್ರಣಕ್ಕೆ ಸಿಗದೆ ಬೈಕ್‌ ಸವಾರರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ರಸ್ತೆಗೆ ಹಾರಿ ಬಿದ್ದ ಸವಾರರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಇತ್ತ ಕಾರು ರಸ್ತೆಯಿಂದ ಪಕ್ಕದ ಗದ್ದೆಗೆ ಬಿದ್ದು, ಜಖಂಗೊಂಡಿದೆ.

ಕಾರು-ಬೈಕ್‌ಗಳ ನಡುವೆ ಭೀಕರ ಅಪಘಾತ

ಮೃತ ಶಿವಪ್ಪ ನಾಯಕ್‌ ಮುಂಡರಗಿ ತಾಲೂಕಿನ ಸಿಂಗಟರಾಯನಕೇರಿ ತಾಂಡಾದವರಾದರೆ, ಶಿವಾನಂದ ಲಮಾಣಿ ಛಬ್ಬಿ ತಾಂಡಾದವರು. ಕೃಷ್ಣಪ್ಪ ಚೌಹಾಣ್ ಡೋಣಿ ತಾಂಡಾದವರು ಎಂದು ತಿಳಿದು ಬಂದಿದೆ. ಗದಗ ಕಡೆಯಿಂದ ಕಾರು ಅತೀ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಈ ವೇಳೆ ಎರಡೂ ದ್ವಿಚಕ್ರ ವಾಹನಗಳಲ್ಲಿ ಇದ್ದ ಸವಾರರ ಪೈಕಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮತ್ತೊಬ್ಬ ಗದಗ ಜಿಲ್ಲಾಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತರಲ್ಲಿ ಇಬ್ಬರು ಮದುವೆಗೆ ಬೇಕಾಗಿದ್ದ ವಸ್ತುಗಳನ್ನು ಖರೀದಿಸಲು ಹಾಗೂ ಮತ್ತೊಬ್ಬ ಸವಾರ ಹಲ್ಲು ನೋವಿನ ಚಿಕಿತ್ಸೆ ಪಡೆಯಲು ಗದಗಗೆ ಹೊರಟಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಆಟೋಗೆ ಬಸ್‌ ಡಿಕ್ಕಿಯಾಗಿ ಆರು ಮಂದಿ ಸಾವು

ಆಂಧ್ರಪ್ರದೇಶದ ಕಾಕಿನಾಡದ ತಾಳರೇವು ಬೈಪಾಸ್ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಆರು ಮಂದಿ ಸಾವಿಗೀಡಾಗಿದ್ದಾರೆ. ಆಟೋಗೆ ಖಾಸಗಿ ಬಸ್ ಡಿಕ್ಕಿ ಹೊಡೆದು ಈ ದುರ್ಘಟನೆ ನಡೆದಿದೆ. ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಇದನ್ನೂ ಓದಿ: Murder Case: ಒಂಟಿ ಮಹಿಳೆಯರೇ ಟಾರ್ಗೆಟ್‌; ಹಣಕ್ಕಾಗಿ ಹತ್ಯೆ ಮಾಡಿದ ಹಂತಕ ಅರೆಸ್ಟ್‌

ಭಾನುವಾರ ರಾತ್ರಿ ತಾಳರೇವು ಬೈಪಾಸ್ ರಸ್ತೆಯಲ್ಲಿ ಆಟೋ ಸಂಚರಿಸುತ್ತಿದ್ದಾಗ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಆಟೋದಲ್ಲಿ ಪ್ರಯಾಣಿಸುತ್ತಿದ್ದ ಆರು ಮಂದಿ ಮೃತಪಟ್ಟಿದ್ದಾರೆ. ಬಸ್ ಅತಿವೇಗದಲ್ಲಿ ಬಂದು ಗುದ್ದಿದ್ದರಿಂದ ಆಟೋ ನಜ್ಜುಗುಜ್ಜಾಗಿದೆ. ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಬಸ್ ಡಿಕ್ಕಿ ಹೊಡೆದಾಗ ಆಟೋದಲ್ಲಿ ಎಂಟು ಮಂದಿ ಇದ್ದರು. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಮೃತರ ವಿವರಗಳು ಇನ್ನಷ್ಟೇ ತಿಳಿಯಬೇಕಿದೆ.

Exit mobile version