ಬೆಂಗಳೂರು: ಇಲ್ಲಿನ ನೃಪತುಂಗ ರಸ್ತೆಯ ಮ್ಯಾಜಿಸ್ಟ್ರೇಟ್ ಕೋರ್ಟ್ ಬಳಿ ಶಾಸಕ ಹರತಾಳು ಹಾಲಪ್ಪ ಪಾಸ್ ಹೊಂದಿದ್ದ ಕಾರಿನಿಂದ (Road Accident) ಅಪಘಾತ ಸಂಭವಿಸಿದೆ. ಸೋಮವಾರ ಮಧ್ಯಾಹ್ನ ಅತಿವೇಗವಾಗಿ ಬಂದ ಇನ್ನೋವಾ ಕಾರೊಂದು ಬೈಕ್‌ಗಳಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ. ಎಚ್ಎಸ್ಆರ್ ಲೇಔಟ್ ನಿವಾಸಿ ಮಾಜಿದ್ ಖಾನ್ (39) ಮೃತ ದುರ್ದೈವಿ.
ಮಾಜಿದ್ ಖಾನ್ ಆಟೊಮೊಬೈಲ್ಸ್ ಅಂಗಡಿ ಇಟ್ಟುಕೊಂಡಿದ್ದರು ಎಂದು ತಿಳಿದು ಬಂದಿದೆ. ಮಾಜಿದ್ ಖಾನ್ ಹಾಗೂ ರಿಯಾಜ್ ಇಬ್ಬರು ಬೈಕ್‌ನಲ್ಲಿ ಹೋಗುತ್ತಿದ್ದಾಗ ಇನ್ನೋವಾ ಕಾರು ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದ ಮಾಜಿದ್ ಖಾನ್ ತಲೆ ಮೇಲೆ ಹಾಗೂ ರಿಯಾಜ್‌ನ ಕಾಲಿನ ಮೇಲೆ ಕಾರು ಹರಿದಿದೆ. ಪರಿಣಾಮ ತೀವ್ರ ಗಾಯಗೊಂಡ ಮಾಜಿದ್ ಮೃತಪಟ್ಟಿದ್ದರೆ, ರಿಯಾಜ್ ಕಾಲು ಫ್ರ್ಯಾಕ್ಚರ್ ಆಗಿದ್ದು, ತಲೆಗೆ ಗಾಯವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಘಟನೆಯಲ್ಲಿ ಮೂರ್ನಾಲ್ಕು ಬೈಕ್ ಸವಾರರಿಗೆ ಕಾರು ಡಿಕ್ಕಿ ಹೊಡೆದಿದ್ದು, ಹಲವರು ಗಾಯಗೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಲಸೂರು ಗೇಟ್ ಟ್ರಾಫಿಕ್ ಪೊಲೀಸರು ಭೇಟಿ ನೀಡಿದ್ದು, ಕಾರು ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇತ್ತ ಸರಣಿ ಅಪಘಾತದಿಂದಾಗಿ ನೃಪತುಂಗ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತೊಡಕುಂಟಾಯಿತು.
ಇದನ್ನೂ ಓದಿ: Turkey Earthquake: ಟರ್ಕಿಯಲ್ಲಿ ಎರಡನೇ ಬಾರಿಗೆ ಕಂಪಿಸಿದ ಭೂಮಿ, ಮೃತರ ಸಂಖ್ಯೆ 1200ಕ್ಕೆ ಏರಿಕೆ
ಶಾಸಕ ಹರತಾಳು ಹಾಲಪ್ಪ ಪಾಸ್ ಹೊಂದಿದ್ದ ಕಾರು
ಶಾಸಕ ಹರತಾಳು ಹಾಲಪ್ಪ ಪಾಸ್ ಹೊಂದಿದ್ದ ಕಾರ್‌ನಿಂದ ಅಪಘಾತ ಸಂಭವಿಸಿದ್ದು, ಸ್ಟೇಷನ್ ಬಳಿ ಕಾರ್‌ಗೆ ಅಂಟಿಸಿದ್ದ ಸ್ಟಿಕ್ಕರ್‌ನ್ನು ಬೆಂಬಲಿಗರು ತೆಗೆದಿದ್ದಾರೆ. ಇತ್ತ ಎಂಎಲ್‌ಎ ಹೆಸರನ್ನು ಚಾಲಕ ದುರುಪಯೋಗಪಡಿಸಿಕೊಂಡನಾ ಎಂಬ ಅನುಮಾನವೂ ಶುರುವಾಗಿದೆ. ರಾಮು ಸುರೇಶ್ ಎಂಬಾತನ ಹೆಸರಲ್ಲಿ ಕಾರು ನೋಂದಣಿ ಆಗಿದ್ದು, ಕುಡಿದು ಗಾಡಿ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ.