ಬಂಟ್ವಾಳ: ಸಮೀಪದ ಪುಂಜಾಲಕಟ್ಟೆ ಬಳಿ ನಡೆದ ರಸ್ತೆ ಅಪಘಾತದಲ್ಲಿ (Road Accident) ರಂಗಭೂಮಿ ಕಲಾವಿದ ಗೌತಮ್ (26) (Theatre artiste Gautam) ಮೃತಪಟ್ಟಿದ್ದಾರೆ. ಇವರು ಬಂಟ್ವಾಳ ತಾಲೂಕಿನ ದೇವಶ್ಯಪಡೂರು ಗ್ರಾಮದ ಮರದೊಟ್ಟು ನಿವಾಸಿಯಾಗಿದ್ದಾರೆ.
ಮೂಡುಬಿದಿರೆ ಪಿಂಗಾರ ಕಲಾವಿದರ ತಂಡದ ಕಲಾವಿದರಾಗಿದ್ದ ಗೌತಮ್ ಅವರು ಡಿ.30ರಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬೆಳುವಾಯಿಯಲ್ಲಿ ನಾಟಕ ಮುಗಿಸಿ ಮನೆಗೆ ತೆರಳುತ್ತಿದ್ದರು. ಇನ್ನೇನು ಅವರ ಸ್ವಲ್ಪವೇ ದೂರದಲ್ಲಿ ಮನೆಯನ್ನು ತಲುಪುವವರಿದ್ದರು. ಆದರೆ, ವಿಧಿ ಆಟವೇ ಬೇರೆ ಇತ್ತು. ಅವರನ್ನು ಬಾರದ ಲೋಕಕ್ಕೆ ಕರೆದೊಯ್ದಿದೆ.
ಬೆಳುವಾಯಿಯಲ್ಲಿ ನಾಟಕ ಮುಗಿಸಿ ಮನೆಗೆ ಹಿಂದಿರುಗುವಾಗ ಅವರ ಮನೆ ಸಮೀಪದ ಮರಕ್ಕೆ ಬೈಕ್ ಡಿಕ್ಕಿ ಹೊಡೆದಿದೆ. ಈ ವೇಳೆ ಗೌತಮ್ ಅವರು ರಸ್ತೆಗೆ ಬಿದ್ದಿದ್ದು, ತಲೆಗೆ ಗಂಭೀರ ಗಾಯಗಳಾಗಿತ್ತು. ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಅವಿವಾಹಿತರಾಗಿದ್ದ ಗೌತಮ್ ಅವರು ಬಿ.ಸಿ.ರೋಡ್ ನ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಜತೆಗೆ ರಂಗಭೂಮಿಯಲ್ಲಿ ಆಸಕ್ತಿ ಹೊಂದಿದ್ದರು. ಹೀಗಾಗಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ತಾಯಿ, ಸಹೋದರ ಮತ್ತು ಸಹೋದರಿ ಇದ್ದಾರೆ.
ಗರ್ಲ್ ಫ್ರೆಂಡ್‌ಗೆ ಫೋನ್ ಮಾಡಿ ಟಾರ್ಚರ್ ಕೊಟ್ಟ ಗೆಳೆಯನಿಗೆ ಮಚ್ಚಿನೇಟು!
ಬೆಂಗಳೂರು: ಕಳೆದ ಡಿಸೆಂಬರ್ 19 ರಂದು ನಾಯಂಡಹಳ್ಳಿಯ ನಿರ್ಜನ ಪ್ರದೇಶದಲ್ಲಿ ಯುವಕನೊಬ್ಬನನ್ನು ಅಟ್ಟಾಡಿಸಿ ಕೆಲ ದುಷ್ಕರ್ಮಿಗಳು ದಾಳಿ ಮಾಡಿದ್ದರು. ಮಾರಕಾಸ್ತ್ರಗಳಿಂದ ಯುವಕನ ತಲೆಗೆ ಹಲ್ಲೆ ಮಾಡಿ, ಕೆಳಗೆ ಬಿದ್ದವನ ಮೇಲೆ ಸಿಕ್ಕ ಸಿಕ್ಕಲ್ಲಿ ಚಾಕುವಿನಿಂದ ಇರಿದು (Attempt To Murder) ಕಾಲ್ಕಿತ್ತಿದ್ದರು.
ಇರಿತಕ್ಕೊಳಗಾದ ಕಾರ್ತಿಕ್ ಎಂಬಾತ ರಕ್ತದ ಮಡುವಿನಲ್ಲೇ ಹೇಗೋ ಬೈಕ್ ರೈಡ್ ಮಾಡಿಕೊಂಡು ಸಮೀಪದ ಆಸ್ಪತ್ರೆಗೆ ದಾಖಲಾಗಿದ್ದ. ಪ್ರಾಣಾಪಾಯದಿಂದ ಪಾರಾಗಿದ್ದ. ಇತ್ತ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಚಂದ್ರಾಲೇಔಟ್ ಪೊಲೀಸರು ಕಾರ್ತಿಕ್‌ನಿಂದ ಹೇಳಿಕೆ ಪಡೆದಿದ್ದರು. ಆ ಬಳಿಕ ಕಾರ್ಯಾಚರಣೆ ನಡೆಸಿದ ಪೊಲೀಸರು ಕಾರ್ತಿಕ್ ಮೇಲೆ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಧನುಷ್ ಹಾಗೂ ಶಾಬುದ್ದೀನ್ ಬಂಧಿತ ಆರೋಪಿಗಳು.
ಧನುಷ್ ಹಾಗೂ ಹಲ್ಲೆಗೊಳಗಾದ ಕಾರ್ತಿಕ್ ಒಂದೇ ಏರಿಯಾದವರು. ಜತೆಗೆ ಪರಿಚಯಸ್ಥರಾಗಿದ್ದ ಇವರು ಸ್ನೇಹಿತರು ಕೂಡ ಆಗಿದ್ದರು. ಈ ಕಾರ್ತಿಕ್ ಇತ್ತೀಚೆಗೆ ಧನುಷ್ ಪ್ರೀತಿ ಮಾಡುತ್ತಿದ್ದ ಯುವತಿಯ ಫೋನ್ ನಂಬರ್ ಕಲೆಕ್ಟ್ ಮಾಡಿಕೊಂಡಿದ್ದ. ಬಳಿಕ ಆಕೆಗೆ ಫೋನ್ ಮಾಡಿ ಸಿಕ್ಕಾಪಟ್ಟೆ ಟಾರ್ಚರ್ ಕೊಡುತ್ತಿದ್ದ. ಕಾರ್ತಿಕ್ ಟಾರ್ಚರ್ ಅನ್ನು ಸಹಿಸಿಕೊಳ್ಳಲು ಆಗದೆ ಈ ವಿಚಾರವನ್ನು ಪ್ರಿಯಕರ ಧನುಷ್‌ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಳು.
ಇದನ್ನೂ ಓದಿ: ಹಾಸನ: ಪತ್ನಿ ತುಂಡುಡುಗೆ ಧರಿಸುತ್ತಾಳೆ ಎಂದು ಕತ್ತು ಸೀಳಿ ಕೊಂದ ಪತಿ, ಪ್ರೇಮವಿವಾಹ ದುರಂತ ಅಂತ್ಯ
ಈ ವಿಷಯ ತಿಳಿಯುತ್ತಿದ್ದಂತೆ ಧನುಷ್ ಕೆಂಡವಾಗಿದ್ದ. ತಾನು ಪ್ರೀತಿಸುತ್ತಿರುವ ಹುಡುಗಿಗೇ ಫೋನ್ ಮಾಡಿ ಕಾಟ ಕೊಡುತ್ತಿರುವ ಕಾರ್ತಿಕ್‌ಗೆ ಒಂದು ಗತಿ ಕಾಣಿಸಬೇಕೆಂದು ನಿರ್ಧರಿಸಿದ್ದ. ಕಾರ್ತಿಕ್‌ಗೆ ಬುದ್ಧಿ ಕಲಿಸಬೇಕೆಂದು ಧನುಷ್ ತನ್ನ ಸ್ನೇಹಿತ ಶಾಬುದ್ದೀನ್ ಸೇರಿಕೊಂಡು ಪ್ಲ್ಯಾನ್ ವೊಂದನ್ನು ಮಾಡಿದ್ದ. ಪ್ಲ್ಯಾನ್‌ನಂತೆ ಡಿಸೆಂಬರ್ 19 ರಂದು ಮನೆಯಲ್ಲಿದ್ದ ಕಾರ್ತಿಕ್‌ನನ್ನು ಮಾತಾಡುವ ನೆಪದಲ್ಲಿ ಕರೆಸಿಕೊಂಡಿದ್ದರು. ಬಳಿಕ ಧನುಷ್ ಹಾಗೂ ಶಾಬುದ್ದೀನ್ ಇಬ್ಬರು ಈ ಮೊದಲೇ ತಂದಿದ್ದ ಚಾಕು, ಚೂರಿ ತೆಗೆದು ಕಾರ್ತಿಕ್ ಮೇಲೆ ಹಲ್ಲೆ ಮಾಡಿದ್ದರು. ಬಳಿಕ ಅಲ್ಲಿಂದ ಕಾಲ್ಕಿತ್ತಿದ್ದರು.
ಆದರೆ ಕಾರ್ತಿಕ್ ನಾಸೀಬು ಚೆನ್ನಾಗಿತ್ತು. ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದರೂ, ರಕ್ತದ ಮಡುವಿನಲ್ಲೇ ಹೋಗಿ ಆಸ್ಪತ್ರೆಗೆ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸದ್ಯ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಚಂದ್ರಾಲೇಔಟ್ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಜೈಲಿಗೆ ಕಳಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ